ಚಂದ್ರು ಮಂಡ್ಯ, ಅದಮ್ಯ ರಂಗಶಾಲೆ, ಮೈಸೂರು
ಸಿನಿಮಾ ರಂಗಕ್ಕೂ ರಂಗಭೂಮಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಎಲ್ಲಾ ದೃಷ್ಟಿ ಕೋನದಿಂದಲೂ ಸಿನಿಮಾನೇ ಬಹಳ ಜನರ ಆಯ್ಕೆಯಾಗಿರುತ್ತದೆ. ಆದರೆ ಕೆಲವೊಂದಿಷ್ಟು ಜನರ ಆಯ್ಕೆ ಮಾತ್ರ ರಂಗಭೂಮಿಯಾಗಿರುತ್ತದೆ. ಆದಾಯ, ಪ್ರಸಿದ್ಧಿ ಪ್ರಚಾರ ಯಾವ ವಿಷಯದಲ್ಲೂ ಸಿನಿಮಾ ಕ್ಷೇತ್ರವನ್ನು ರಂಗಭೂಮಿ ಸರಿಗಟ್ಟಲಾಗುವುದಿಲ್ಲ. ಸತ್ಯ… ಆದರೂ ರಂಗಭೂಮಿ ಅಭಿನಯದ ತಾಯಿಬೇರು ನನ್ನ ದೃಷ್ಟಿಯಲ್ಲಿ ಹೇಳುವುದಾದರೆ ಇದೊಂದು ಆತ್ಮ ತೃಪ್ತಿಯ ಕೆಲಸ. ಯಾವ ವರಮಾನವು ನೀಡಲಾರದಷ್ಟು ಸಂತೃಪ್ತಿ ನೀಡುವ ಕೆಲಸ ರಂಗಭೂಮಿ.
ಸಿನಿಮಾ ರಂಗವನ್ನು ಆಳಿದ ಅನೇಕ ದಿಗ್ಗಜರು ರಂಗಭೂಮಿಯ ಕೊಡುಗೆಗಳೇ ಆಗಿದ್ದಾರೆ. ಸಿನಿಮಾದಲ್ಲಿ ಎಷ್ಟೇ ತಪ್ಪುಗಳಾದರೂ ಅದನ್ನು ಸರಿಪಡಿಸುವ ಮತ್ತೆ ಚಿತ್ರೀಕರಿಸುವ ಸಂಭಾಷಣೆಯನ್ನು ಡಬ್ಬಿಂಗ್ ಮಾಡುವ ವ್ಯವಸ್ಥೆ ಇರುತ್ತದೆ ಆದರೆ ರಂಗಭೂಮಿಯಲ್ಲಿ ಅದ್ಯಾವ ಅವಕಾಶ ಇರುವುದಿಲ್ಲ ಕೇವಲ ನಟನ ತಯಾರಿಯೊಂದೇ ಇಲ್ಲಿ ಮುಖ್ಯ. ಬೇರೆ ಯಾವ ತಂತ್ರಗಳಿಗೂ ಅವಕಾಶವಿರುವುದಿಲ್ಲ. ನಟನ ತಯಾರಿ ಮತ್ತು ಅವನ ಪರಿಶ್ರಮಗಳಷ್ಟೇ ಮಾನದಂಡವಾಗಿರುತ್ತದೆ.
ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ದೃಷ್ಟಿಯಿಂದ ರಂಗಭೂಮಿ ಉತ್ತಮ ಆಯ್ಕೆ. ಮಕ್ಕಳು ಹತ್ತು- ಹನ್ನೆರಡು ವರ್ಷಗಳವರೆಗೂ ವಿಶ್ವಮಾನವರಾಗಿಯೇ ಇರುತ್ತಾರೆ. ಆನಂತರವಷ್ಟೇ ಸಾಮಾಜಿಕ ವ್ಯವಸ್ಥೆಯ ಕೈಗೆ ಸಿಕ್ಕು ವಾತಾವರಣದ ಕೈ ಗೊಂಬೆಗಳಾಗಿ ಬಿಡುತ್ತಾರೆ. ಸಣ್ಣ ವಯಸ್ಸಿನಲ್ಲಿಯೇ ರಂಗಭೂಮಿಯ ಸಂಪರ್ಕಕ್ಕೆ ಬರುವ ಮಕ್ಕಳು ಇತರ ಮಕ್ಕಳಿಗಿಂತ ವಿಭಿನ್ನರಾಗಿ ಬೆಳೆಯುತ್ತಾರೆ. ಈಗಿನ ಕಾಲದಲ್ಲಿ ತಂದೆ ತಾಯಿಯರಿಗೆ ಒಂದೊ ಎರಡೊ ಮಕ್ಕಳಷ್ಟೇ ಇರುವ ಇಂದಿನ ವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳ ಮನಸ್ಸುಗಳನ್ನು ಓದು ಮತ್ತು ಹೆಚ್ಚು ಅಂಕಗಳನ್ನು ತೆಗೆಯುವುದಕಷ್ಟೇ ಸೀಮಿತಗೊಳಿಸಿ ಸಂಕುಚಿಸಿ ಬಿಟ್ಟಿದ್ದೇವೆ. ರಂಗಭೂಮಿಯಲ್ಲಿ ಮಕ್ಕಳಿಗೆ ಶಿಸ್ತನ್ನು ಮೂಲದಿಂದಲೇ ಕಲಿಸಿ ಕೊಡಲಾಗುತ್ತದೆ. ಎಲ್ಲಾ ಮಕ್ಕಳೊಂದಿಗೆ ಸೇರಿ ಆಟ ಪಾಠಗಳಂತೆ ಬದುಕಿನ ಶಿಸ್ತನ್ನು ಕರೆಯುತ್ತಾರೆ.
ಉದಾರಣೆಗೆ ಸ್ನೇಹಿತರೊಟ್ಟಿಗೆ ನಡೆಯುವಾಗ ಜೊತೆಯಲ್ಲೊಬ್ಬ ಕಾಲು ನೋವಿರುವ ಸ್ನೇಹಿತನಿದ್ದರೆ ಯಾರು ಹೇಳದಿದ್ದರೂ ಅವರು ಅವರ ನಡಿಕೆಯ ವೇಗವನ್ನು ಅವನ ವೇಗಕ್ಕೆ ಹೊಂದಿಸಿಕೊಳ್ಳುತ್ತಾರೆ. ಇಂತಹ ಅನೇಕ ಸೂಕ್ಷ್ಮಗಳು ರಂಗಭೂಮಿಯಲ್ಲಿ ಅನುಭವಕ್ಕೆ ಬರುತ್ತವೆ. ಸಹಕಲಾವಿದನೊಬ್ಬ ನಾಟಕದ ಡೈಲಾಗು ಮರೆತಾಗ ಅಥವಾ ತಪ್ಪು ಹೇಳಿದಾಗ ಅದನ್ನು ಪ್ರೇಕ್ಷಕರ ಗಮನಕ್ಕೆ ತರದೆ ಹೊಂದಿಸಿಕೊಂಡು ಹೋಗುವುದು, ತಪ್ಪನ್ನು ದೊಡ್ಡದು ಮಾಡದೆ ನಾಟಕಕ್ಕೆ ಕುಂದು ಬಾರದಂತೆ ತೂಗಿಸಿಕೊಂಡು ಹೋಗುವ ಜವಾಬ್ದಾರಿ ಏಕಕಾಲಕ್ಕೆ ಬರುತ್ತದೆ. ಇದನ್ನು ಯಾವ ಶಾಲೆಗಳಲ್ಲೂ ಕಲಿಸುವುದು ಅಸಾಧ್ಯ.
ಸಿನಿಮಾ ಒಂದು ಹೇಗೆ ಮೂಡಿ ಬಂದಿದೆ ಎಂದು ತಿಳಿದುಕೊಳ್ಳುವುದು ಸಿನಿಮಾ ಬಿಡುಗಡೆಯಾಗಿ ಜನರು ಅದನ್ನು ನೋಡಿ ಅಭಿಪ್ರಾಯ ಹೇಳುವವರೆಗೂ ಕಾಯಬೇಕಾಗುತ್ತದೆ. ಅಥವಾ ಸರ್ಕಾರವೊ ಸಂಘ ಸಂಸ್ಥೆಗಳೊ ಪ್ರಶಸ್ತಿ ಘೋಷಿಸುವವರೆಗೂ ಕಾಯಬೇಕಾಗುತ್ತದೆ. ಆದರೆ ರಂಗದಲ್ಲಿ ಹಾಗಾಗುವುದಿಲ್ಲ ನಟ ಅಭಿನಯಿಸುತ್ತಿರುವಾಗಲೇ ಅದು ಪ್ರೇಕ್ಷಕನಿಗೆ ಹಿಡಿಸಿದಯೋ ಇಲ್ಲವೋ ಎಂದು ಕಲಾವಿದನಿಗೆ ಅರ್ಥವಾಗಿ ಬಿಡುತ್ತದೆ. ಪ್ರೇಕ್ಷಕನ ಮೆಚ್ಚುಗೆಯ ಮುಖಭಾವ ನೀಡಬಲ್ಲ ತೃಪ್ತಿಯನ್ನು ಪ್ರಾಯಶಃ ಯಾವ ಮಾಧ್ಯಮವೂ ನೀಡಲಾರದು.
ಬಹಳಷ್ಟು ಸಲ ಯಾರನ್ನಾದರೂ ಭೇಟಿಯಾದಾಗ ನಮಗೆ ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಮಾತನಾಡುತ್ತಿರುತ್ತೇವೆ, ಒಳಗಿನ ಭಾವವೇ ಬೇರೆ ಮುಖಭಾವವೇ ಬೇರೆ. ಆದರೆ ಆ ಕ್ಷಣಕ್ಕೆ ಮುಖದ ಮೇಲೆ ತೋರ್ಪಡಿಸುವ ಭಾವ ಕೃತಕವಾಗಿರುತ್ತದೆ. ಆದರೆ ಇದ್ಯಾವುದರ ಮುಲಾಜಿಲ್ಲದೆ ಇದ್ದದ್ದನ್ನು ಇದ್ದ ಹಾಗೆಯೇ ಕಾಣುವುದು ರಂಗದ ಮೇಲೆ ಮಾತ್ರ. ಅದೊಂದು ಆತ್ಮತೃಪ್ತಿ ರಂಗದಲ್ಲಿ ಮಾತ್ರ ಸಿಗಲು ಸಾಧ್ಯ. ನಿಜ ಜೀವನದಲ್ಲಿ ಎಲ್ಲರೂ ತರಹೇವಾರಿ ನಟಿಸುತ್ತೇವೆ, ಆದರೆ ರಂಗದಲ್ಲಿ ಮಾತ್ರ ನಟ ಮತ್ತು ಪ್ರೇಕ್ಷಕ ಪ್ರಾಮಾಣಿಕವಾಗಿ ತಮ್ಮ ಭಾವವನ್ನು ವ್ಯಕ್ತಪಡಿಸುತ್ತಾನೆ.
ಒಂದು ನಾಟಕ ಕಟ್ಟುವ ಕನಸು ಮನಸ್ಸಿನಲ್ಲಿ ಮೂಡಿದ ದಿನದಿಂದ ಅದೊಂದು ಸಂಭ್ರಮ. ಕಲಾವಿದರ ಹುಡುಕಾಟ ಅವರಿಗನುಗುಣವಾದ ಕಥೆಯ ಹುಡುಕಾಟ, ಎಲ್ಲವೂ ಸಿದ್ಧವಾದ ಮೇಲೆ ನಾಟಕದ ತಯಾರಿ. ಮೊದಮೊದಲು ತಮಾಷೆ ನಗುಗಳೊಂದಿಗೆ ಆರಂಭವಾಗುವ ತಯಾರಿ ನಂತರ ಬಿಗಿಯಾಗುತ್ತಾ ಹೋಗುತ್ತದೆ. ಕಲಿಕೆ ಪರಿಶ್ರಮಗಳು ನಾಟಕ ಪ್ರದರ್ಶನ ಹತ್ತಿರ ಬಂದಂತೆಲ್ಲ ಕಾವೇರುತ್ತಾ ಹೋಗುತ್ತದೆ. ನಾಟಕವೆಂದರೆ ಕೇವಲ ಅಭಿನಯವಷ್ಟೇ ಅಲ್ಲ ರಂಗದಲ್ಲಿ ರಂಗ ಪರಿಕರಗಳ ನಿರ್ಮಿಸುವ ಕೆಲಸದಿಂದ ಹಿಡಿದು, ಕಸಗುಡಿಸುವ ತನಕ ಎಲ್ಲವನ್ನು ನಟರು ಮಾಡಬೇಕಾಗಿರುತ್ತದೆ. ವಿವಿಧ ಸ್ತರದ ಬದುಕನ್ನು ಅಲ್ಲಿಯೇ ಕಲಿಯುತ್ತೇವೆ.
ನನ್ನದೊಂದು ಅನುಭವದ ಪ್ರಕಾರ ರಂಗದಲ್ಲಿ ಇದ್ದಷ್ಟು ಹೊತ್ತು ವೈಯಕ್ತಿಕ ಬದುಕಿನ ಪಾತ್ರ ಮರೆತು ಹೋಗುತ್ತದೆ. ವೈಯಕ್ತಿಕ ಜೀವನದಲ್ಲಿ ಬಡವನಾಗಿರುವವನು ಕೂಡ, ರಂಗದಲ್ಲಿ ಆಗರ್ಭ ಶ್ರೀಮಂತನಾಗುತ್ತಾನೆ. ಅದೇ ರಂಗದ ಶಕ್ತಿ. ಬಣ್ಣ ಕಳಚಿದ ಮೇಲಷ್ಟೇ ಆತನ ವೈಯಕ್ತಿಕ ಬದುಕು ಅದರೊಳಗಿನ ಸಮಸ್ಯೆಗಳ ನೆನಪಾಗುತ್ತದೆ. ಇಲ್ಲಿ ಸಿಗುವ ಆತ್ಮತೃಪ್ತಿ ಮತ್ತೆಲ್ಲೂ ಸಿಗಲಾರದು…