Site icon Vistara News

Ayodhya Ram Mandir: ಜನ್ಮದಿನದ ಸಂಭ್ರಮಕ್ಕೆ ಕಾತರ; ರಾಮಲಲ್ಲಾನಿಗೆ ಸೂರ್ಯ ಕಿರಣ ಅಭಿಷೇಕ ಪ್ರಯೋಗ ಸಕ್ಸೆಸ್!

Ayodhya Ram Mandir

ಉತ್ತರ ಪ್ರದೇಶದ (uttarpradesh) ಅಯೋಧ್ಯೆ (ayodhya) ರಾಮಮಂದಿರ (ram mandir) ಉದ್ಘಾಟನೆಯಾದ ಬಳಿಕ ದೇಶ ವಿದೇಶದ ಲಕ್ಷಾಂತರ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿದೆ. ಇಲ್ಲಿನ ಗರ್ಭ ಗುಡಿಯಲ್ಲಿರುವ ರಾಮಲಲ್ಲಾನೂ (ramlalla) ಹಬ್ಬ ಹರಿ ದಿನಗಳಿಗಾಗಿ ಕಾತರದಿಂದ ಕಾಯುವಂತೆ ಭಾಸವಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ರಾಮನ ಜನ್ಮದಿನ ರಾಮ ನವಮಿ (ram navami) ಉತ್ಸವ ಅಯೋಧ್ಯೆಯಲ್ಲಿ ಅದ್ಧೂರಿಯಾಗಿಯೇ ನಡೆಯಲಿದೆ. ಹೀಗಾಗಿ ಇದರ ತಯಾರಿ ಕಾರ್ಯಗಳು ಜೋರಾಗಿಯೇ ನಡೆಯುತ್ತಿದೆ.

ಇದೀಗ ರಾಮ ನವಮಿಗೆ ಮುಂಚಿತವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಯೋಧ್ಯೆಯೊಳಗಿನ ಶ್ರೀ ರಾಮಲಲ್ಲಾ ವಿಗ್ರಹಕ್ಕೆ ಎರಡನೇ ಬಾರಿ ಯಶಸ್ವಿಯಾಗಿ ಸೂರ್ಯ ತಿಲಕ ಅಥವಾ ಸೂರ್ಯಾಭಿಷೇಕವನ್ನು ನಡೆಸಲಾಗಿದೆ. ಇದರ ವಿಡಿಯೋವನ್ನು ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Ram Mandir: 25 ಕೆಜಿ ಬೆಳ್ಳಿ, 10 ಕೆಜಿ ಚಿನ್ನ; 1 ತಿಂಗಳಿನಲ್ಲಿ ರಾಮ ಮಂದಿರದಲ್ಲಿ ಸಂಗ್ರಹವಾಗಿದ್ದು ಎಷ್ಟು ಕೋಟಿ ರೂ.?

ಏಪ್ರಿಲ್ 17ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮನವಮಿಗೆ ಮುಂಚಿತವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶುಕ್ರವಾರ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಎರಡನೇ ಬಾರಿಗೆ ರಾಮಲಲ್ಲಾನಿಗೆ ‘ಸೂರ್ಯ ಅಭಿಷೇಕ’ವನ್ನು ಯಶಸ್ವಿಯಾಗಿ ನಡೆಸಿತು.


ಮೊದಲ ಪ್ರಯೋಗವೂ ಯಶಸ್ವಿ

ಈ ಹಿಂದೆ ಏಪ್ರಿಲ್ 8ರಂದು ಮೊದಲ ಬಾರಿಗೆ ಇದರ ಪ್ರಯೋಗ ನಡೆಸಲಾಗಿತ್ತು. ರಾಮ್ ಲಲ್ಲಾ ಜನ್ಮದಿನವಾದ ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಸೂರ್ಯಾಭಿಷೇಕ ಅಥವಾ ಸೂರ್ಯ ತಿಲಕದ ಸಂದರ್ಭವನ್ನು ಸಾರ್ವಜನಿಕ ಪ್ರಸಾರಕ ಪ್ರಸಾರ ಭಾರತಿ ನೇರ ಪ್ರಸಾರ ಮಾಡಲಿದೆ. ಈ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ಎರಡು ಬಾರಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ.

ಅದ್ಧೂರಿಯಾಗಿ ಆಚರಣೆ

ಯಶಸ್ವಿ ಪ್ರಯೋಗದ ಶ್ರೇಯಸ್ಸು ವಿಜ್ಞಾನಿಗಳಿಗೆ ಸಲ್ಲಬೇಕು. ಪೂರ್ಣ ಪ್ರಭೆಯಲ್ಲಿ ಸೂರ್ಯನ ಕಿರಣಗಳು ರಾಮ್ ಲಲ್ಲಾನ ಹಣೆಯ ಮೇಲೆ ಬಿದ್ದವು. ಇದು ರಾಮನವಮಿಯ ಪ್ರಮುಖ ಕಾರ್ಯಕ್ರಮವಾಗಿದ್ದು, ಆ ದಿನ ಅದ್ಧೂರಿಯಾಗಿ ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.

ತಜ್ಞರ ಉಪಸ್ಥಿತಿ

ಸೂರ್ಯ ತಿಲಕದ ಪ್ರಯೋಗವನ್ನು ನಡೆಸಿದ ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಬಿಆರ್‌ಐ) ತಜ್ಞರು ರಾಮ ನವಮಿಯಂದು ‘ಸೂರ್ಯ ಅಭಿಷೇಕ’ ಯಶಸ್ವಿ ನೆರವೇರಿಸಲು ಅಯೋಧ್ಯೆಯಲ್ಲೇ ಉಪಸ್ಥಿತರಿದ್ದಾರೆ. ಸಿಬಿಆರ್ ಐ ಯ ನಿರ್ದೇಶಕ ರೂರ್ಕಿ, ಪ್ರೊ. ಪ್ರದೀಪ್ ಕುಮಾರ್ ರಾಮಂಚಾರ್ಲಾ ಮತ್ತು ಪ್ರೊ. ದೇವದತ್ ಘೋಷ್ ಸೂರ್ಯ ತಿಲಕ ಯೋಜನೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.

ಎರಡೂವರೆ ನಿಮಿಷ

ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು ದೇವರ ಮೇಲೆ ಎರಡರಿಂದ ಎರಡೂವರೆ ನಿಮಿಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಬೀಳಲಿದೆ. ಬಳಿಕ ಮತ್ತೆ ಎರಡೂವರೆ ನಿಮಿಷ ಭಾಗಶಃ ಬೀಳುತ್ತದೆ ಎಂದು ಆರ್‌ಎಸ್‌ಎಸ್ ಹಿರಿಯ ನಾಯಕ ಗೋವಿಂದ್ ರಾವ್ ತಿಳಿಸಿದ್ದಾರೆ.

ಬೇಸಿಗೆ ಋತು ಮತ್ತು ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ರಾಮನ ವಿಗ್ರಹಕ್ಕೆ ಹತ್ತಿ ಬಟ್ಟೆಯನ್ನು ತೊಡಿಸಲಾಗಿತ್ತು. ಕೈಮಗ್ಗದ ಹತ್ತಿಯಿಂದ ತಯಾರಿಸಲಾದ ವಸ್ತ್ರಕ್ಕೆ ನೈಸರ್ಗಿಕ ನೀಲಿ ಬಣ್ಣ ಬಳಿಯಲಾಗಿದ್ದು, ಗೊಟ್ಟಾ ಹೂವುಗಳಿಂದ ಅಲಂಕರಿಸಲಾಗಿತ್ತು. ಈ ಉಡುಗೆಯಲ್ಲಿ ಪುಟ್ಟ ರಾಮಲಲ್ಲಾ ಅತ್ಯಂತ ಸುಂದರವಾಗಿ ಕಾಣುತ್ತಿದ್ದ.

Exit mobile version