ಬೆಂಗಳೂರು: ರಕ್ಷಿತ್ ಶೆಟ್ಟಿಯ ಪ್ಯಾನ್ ಇಂಡಿಯಾ ಸಿನಿಮಾ ʼ777 ಚಾರ್ಲಿʼ ಜೂನ್ 10ಕ್ಕೆ ಬಿಡುಗಡೆಗೊಳ್ಳುತ್ತಿದೆ. ಈಗಾಗಲೇ ಉತ್ತರ ಭಾರತದ ದೆಹಲಿ, ಅಹಮದಾಬಾದ್, ಕೋಲ್ಕೊತಾ ಸೇರಿದಂತೆ ವಿವಿಧ ಕಡೆ ಹಾಗೂ ವಿದೇಶದ ಕೆಲವೆಡೆ ಚಿತ್ರದ ಸೆಲೆಬ್ರಿಟಿ ಶೋಗಳು ನಡೆದಿವೆ. ಜೂನ್ 9ರಂದು ರಾಜ್ಯದೆಲ್ಲೆಡೆ ʼ777 ಚಾರ್ಲಿʼ ನೂರಕ್ಕೂ ಅಧಿಕ ಪ್ರೀಮಿಯರ್ ಪ್ರದರ್ಶನ ನಡೆಯಲಿದೆ ಎನ್ನುವುದು ವಿಶೇಷ.
ಬಿಡುಗಡೆಗೂ ಮುನ್ನ ಇಷ್ಟು ಪ್ರದರ್ಶನ ಕಾಣುತ್ತಿರುವುದು ಚಿತ್ರರಂಗದಲ್ಲಿಯೇ ಮೊದಲು ಎಂಬ ಹೆಗ್ಗಳಿಕೆಗೆ ಚಾರ್ಲಿ ಪಾತ್ರವಾಗಿದೆ. ಸೋಮವಾರ ಚಿತ್ರದ ಸೆಲೆಬ್ರಿಟಿ ಪ್ರದರ್ಶನ ನಡೆದಿದ್ದು, ನಟಿ ರಮ್ಯಾ, ನಿರ್ದೇಶಕ ಸಂತೋಷ್ ಆನಂದರಾಮ್ ಸೇರಿದಂತೆ ನೂರಾರು ಸೆಲೆಬ್ರಿಟಿಗಳು ಈಗಾಗಲೇ ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | 777 Charlie : ವೇಸ್ಟ್ ಬಾಡಿ ಚಾರ್ಲಿ ಸೂಪರ್ ಹೀರೊ ಆಗಿದ್ದು ಹೀಗೆ
ʼʼಕರ್ನಾಟಕದಲ್ಲಿ ಮುನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ʼ777 ಚಾರ್ಲಿʼ ಬಿಡುಗಡೆ ಮಾಡುತ್ತಿದ್ದೇವೆ. ಈ ಚಿತ್ರದ ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಜೂನ್ 9ರಂದು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗಾಗಿ ಪ್ರಿಮಿಯರ್ ಶೋ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ 55 ಕಡೆ ಚಿತ್ರ ಪ್ರದರ್ಶನ ನಡೆದರೆ, ಉಳಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರದರ್ಶನವಿರಲಿದೆ ಎಂದು ಕೆ.ಆರ್.ಜಿ ಫಿಲಂಸ್‌ನ ಕಾರ್ತಿಕ್ ಗೌಡ ಹೇಳಿದ್ದಾರೆ.
ರಮ್ಯಾ ಟ್ವೀಟ್
ʼಸ್ಯಾಂಡಲ್‌ವುಡ್ ಪದ್ಮಾವತಿʼ ಎಂದೇ ಖ್ಯಾತಿ ಪಡೆದಿರುವ ರಮ್ಯಾ ʼ777 ಚಾರ್ಲಿʼ ಕುರಿತು ಟ್ವೀಟ್ ಮಾಡಿದ್ದಾರೆ. ರಮ್ಯಾ ಕನ್ನಡದ ಹೊಚ್ಚ ಹೊಸ ಸಿನಿಮಾ ತಂಡಕ್ಕೆ ಪ್ರೋತ್ಸಾಹ ನೀಡುವುದು ಹೊಸತೇನಲ್ಲ. ಅವರಿಗೆ ಶ್ವಾನಗಳೆಂದರೆ ಹುಚ್ಚು ಪ್ರೀತಿ. ಇದೀಗ ಅದೇ ಸಬ್ಜೆಕ್ಟ್ ಸಿನಿಮಾ ಆಗಿರೋ ʼ777 ಚಾರ್ಲಿʼಗೆ ಸಾಥ್ ನೀಡಿದ್ದಾರೆ.
ʼʼಇದೊಂದು ಎಮೋಷನಲ್ ಚಿತ್ರ. ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ. ಇಂತಹದೊಂದು ಅದ್ಭುತ ಕಂಟೆಂಟ್ ಇರುವ ಸಿನಿಮಾವನ್ನು ಕೊಟ್ಟಿರುವ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳುʼʼ ಎಂದು ಟ್ವೀಟರ್ ಖಾತೆಯಲ್ಲಿ ರಮ್ಯಾ ಬರೆದುಕೊಂಡಿದ್ದಾರೆ.
ಶ್ವಾನ ಪ್ರೇಮಿಗಳು ಕಾತುರತೆಯಿಂದ ಕಾಯುತ್ತಿರುವ ಈ ಸಿನಿಮಾ ನಾಯಕನಾಗಿ ರಕ್ಷಿತ್ ಶೆಟ್ಟಿ ನಟಿಸಿದರೆ, ರಾಜ್ ಬಿ ಶೆಟ್ಟಿ, ದಾನಿಶ್ ಸೇಠ್, ಸಂಗೀತಾ ಶೃಂಗೇರಿ, ತಮಿಳಿನ ಬಾಬಿ ಸಿಂಹ ನಟಿಸಿದ್ದಾರೆ. ಕಿರಣ್ ರಾಜ್ ಈ ಚಿತ್ರದ ನಿರ್ದೇಶಕರಾಗಿದ್ದು, ರಕ್ಷಿತ್ ಶೆಟ್ಟಿ ತಮ್ಮ ಹೋಮ್ ಬ್ಯಾನರ್ ಪರಂವಃ ಸ್ಟುಡಿಯೋಸ್ ಅಡಿಯಲ್ಲಿ ಚಿತ್ರ ನಿರ್ದೇಶಿಸಿದ್ದಾರೆ. ನೋಬಿನ್ ಪೌಲ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ಪ್ರತೀಕ್ ಶೆಟ್ಟಿ ಸಂಕಲನ, ಪ್ರಗತಿ ರಿಷಭ್ ಶೆಟ್ಟಿ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ. ಚಿತ್ರದ ಹಿಂದಿ ಅವತರಣಿಕೆಗೆ ಸಂಜಯ್ ಉಪಾಧ್ಯ ಸಂಭಾಷಣೆ ನೀಡಿದ್ದು, ಹಾಡುಗಳಿಗೆ ಹಿಂದಿಯಲ್ಲಿ ಶೈನಿ ದಾಸ್, ಕಾರ್ತಿಕಾ ನೈನನ್ ದುಬೆ, ಮಾನ್ಸಾ ಪಾಂಡೆ, ಅಲೆಕ್ಸ್ ಡಿಸೋಜಾ, ಸಾಯೇಶ್ ಪೈ ಪನಂಡಿಕರ್ ಸಾಹಿತ್ಯ ನೀಡಿದ್ದಾರೆ.
ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ₹ 21 ಕೋಟಿಗೆ ಕಲರ್ಸ್ ಕನ್ನಡಕ್ಕೆ ಸೇಲ್ ಆಗಿರೋದು ಗಮನಾರ್ಹ. ಜೂನ್ 10ರಂದು ʼ777 ಚಾರ್ಲಿʼ ಪಂಚಭಾಷೆಗಳಲ್ಲಿ ತೆರೆ ಕಾಣುತ್ತಿರುವುದು ಅಭಿಮಾನಿಗಳಿಗೆ ಖುಷಿ ತರುತ್ತಿದೆ.
ಇದನ್ನೂ ಓದಿ | 777 charlie: ಚಾರ್ಲಿಗೆ ಲಂಚ ಕೊಡುತ್ತಿದ್ದ ನಟಿ, ಶೂಟಿಂಗ್ ಜರ್ನಿ ನೆನಪಿಸಿಕೊಂಡ ಸಂಗೀತಾ ಶೃಂಗೇರಿ