ಬೆಂಗಳೂರು: ಭಾರತೀಯ ಸಿನಿಮಾಗಳು ಹೆಚ್ಚಾಗಿ ಭಾರತದಾದ್ಯಂತ ಬಿಡುಗಡೆಯಾಗುತ್ತದೆ. ಆ ವೇಳೆ ಕೆಲವು ಚಿತ್ರಗಳನ್ನು ಯಶಸ್ಸಿನತ್ತ ಮುನುಗ್ಗಿದ್ದರೆ ಕೆಲವು ನೆಲಕಚ್ಚುತ್ತವೆ. ಆದರೆ ಇದೀಗ ಭಾರತೀಯ ಸಿನಿಮಾವೊಂದು (12th fail Film) ವಿದೇಶದಲ್ಲಿ 20000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಲು ರೆಡಿಯಾಗಿದೆಯಂತೆ.
ಹೌದು. ವಿಧು ವಿನೋದ್ ಚೋಪ್ರಾ ಅವರು ನಿರ್ದೇಶನದ 12th fail ಚಿತ್ರ ಚೀನಾದಲ್ಲಿ 20000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನಾಧಾರಿತ ಚಿತ್ರ ಇದಾಗಿದ್ದು, ವಿಕ್ರಾಂತ್ ಮಾಸ್ಸೆ ಅವರು ಮನೋಜ್ ಕುಮಾರ್ ಶರ್ಮಾ ಅವರ ಪಾತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರ ಅಕ್ಟೋಬರ್ 27ರಂದು 2023ರಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು, ನಂತರ ಒಟಿಟಿಯಲ್ಲಿಯೂ ಬಿಡುಗಡೆಯಾಗಿದ್ದು, ಬಾಲಿವುಡ್ ನ ತಾರೆಯರಾದ ಆಲಿಯಾ ಭಟ್, ದೀಪಿಕಾ ಪಡುಕೋಣೆ, ಕಂಗನಾ ರಾಣವತ್, ಕತ್ರಿನಾ ಕೈಪ್ ಮುಂತಾದವರು ಈ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದರು. ಇದೀಗ ಚಿತ್ರ ಚೀನಾದಲ್ಲಿಯೂ ಬಿಡುಗಡೆಯಾಗಲಿದೆ ಎಂದು ಚಿತ್ರದ ನಟ ವಿಕ್ರಾಂತ್ ಅವರು ಸುದ್ದಿ ವಾಹಿನಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಚಿತ್ರ ಯುಪಿಎಸ್ ಸಿ ಆಕಾಂಕ್ಷಿಗಳ ಸುತ್ತ ಸುತ್ತುತ್ತದೆ. ಇದು ನಿಜ ಜೀವನದ ಅನುಭವಗಳನ್ನು ಆಧರಿಸಿದೆ. ಯುಪಿಎಸ್ ಸಿ ಪ್ರವೇಶ ಪರೀಕ್ಷೆಗೆ ಪ್ರಯತ್ನಿಸುವ ಲಕ್ಷಾಂತರ ವಿದ್ಯಾರ್ಥಿಗಳ ಹೋರಾಟವನ್ನು ಈ ಚಿತ್ರ ಪ್ರತಿಬಿಂಬಿಸುತ್ತದೆ. ಬಡತನವನ್ನು ಮೆಟ್ಟಿ ನಿಂತು ಐಪಿಎಸ್ ಅಧಿಕಾರಿಯಾದ ಮನೋಜ್ ಕುಮಾರ್ ಶರ್ಮಾ ಅವರ ಜೀವನವನ್ನು ಈ ಚಿತ್ರ ವಿವರಿಸುತ್ತದೆ. ಈ ಚಿತ್ರದಲ್ಲಿ ಮನೋಜ್ ಕುಮಾರ್ ಶರ್ಮಾ ಅವರ ಪತ್ನಿ ಶ್ರದ್ಧಾ ಜೋಶಿ ಅವರ ಪಾತ್ರದಲ್ಲಿ ಮೇಧಾ ಶಂಕರ್ ನಟಿಸಿದ್ದಾರೆ.
ಇದನ್ನೂ ಓದಿ: Ram Navami: ಅಯೋಧ್ಯೆ ರಾಮ ಮಂದಿರಲ್ಲಿ ಮೊದಲ ರಾಮ ನವಮಿ; ದೇಶದ ಜನತೆಗೆ ಮೋದಿ ನೀಡಿದ ಸಂದೇಶ ಇದು
ಚೀನಾದಲ್ಲಿ ಭಾರತೀಯ ಸಿನಿಮಾಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ಹಿಂದೆ ಅಮೀರ್ ಖಾನ್ ಅವರ ದಂಗಲ್ ಮತ್ತು 3 ಈಡಿಯಟ್ಸ್ ಚಿತ್ರಕ್ಕೆ ಚೀನಾದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಅದೇ ರೀತಿ 12th fail ಚಿತ್ರ ಚೀನಾದಲ್ಲಿ 20000ಕ್ಕೂ ಹೆಚ್ಚು ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗುವುದರ ಮೂಲಕ ಚೀನಾದ ಜನತೆಗೆ ಮನರಂಜನೆಯನ್ನು ನೀಡುತ್ತದೆ ಎಂಬ ನಂಬಿಕೆ ಹುಸಿಯಾಗಲಾರದು ಎನ್ನಲಾಗುತ್ತಿದೆ.