ವರನಟ ಡಾ.ರಾಜ್‌ಕುಮಾರ್ ಅವರು ನೆನಪಿಗೆ ಸಂದು 16 ವರ್ಷಗಳಾಗಿವೆ. ಅವರು ಎಲ್ಲ ಕನ್ನಡಿಗರ ಪ್ರೀತಿಯ ಅಣ್ಣ. ಇಂದಿಗೂ ಉತ್ತಮ ಸಹೋದರ, ಒಳ್ಳೆಯ ಮಗ, ಚಂದದ ಗಂಡ, ಶ್ರೇಷ್ಠ ತಂದೆ, ಮೌಲ್ಯಯುತ ನಾಯಕ, ಪ್ರಾಮಾಣಿಕ ಅಧಿಕಾರಿ ಎಂದೆಲ್ಲಾ ಕಲ್ಪಿಸಿಕೊಂಡರೆ ನೆನಪಾಗುವುದು ಡಾ.ರಾಜ್ ಅವರೇ. ಜಾಗತಿಕ ಸಿನಿಮಾ ರಂಗದ ಶ್ರೇಷ್ಠ ಹತ್ತು ನಟರ ಪಟ್ಟಿ ಮಾಡಿದರೆ ಅದರಲ್ಲಿ ರಾಜ್‌ಕುಮಾರ್ ಹೆಸರೂ ಒಂದಾಗಿರುತ್ತದೆ. ಅವರ ಹಾಡುಗಳು ಸದಾ ನಮ್ಮನ್ನು ಜೋಶ್‌ನಲ್ಲಿಡುತ್ತವೆ, ಪ್ರೋತ್ಸಾಹಿಸುತ್ತವೆ, ಹುಚ್ಚೆಬ್ಬಿಸುತ್ತವೆ ಮತ್ತು ಸಮಾಧಾನಗೊಳಿಸುತ್ತವೆ.
ಇಂಥ ಅಣ್ಣಾವ್ರ ಫಿಲಂಗಳನ್ನು ನಾವು ಇಂದೂ ನೋಡಿ ಖುಷಿಪಡೋಕೆ ನೂರಾರು ಕಾರಣಗಳನ್ನು ಪಟ್ಟಿ ಮಾಡಬಹುದು. ಅದರಲ್ಲಿ ಆಯ್ದ ಎಂಟು ಕಾರಣಗಳು ಇಲ್ಲಿವೆ:
1. ದುಡಿಮೆಯೇ ಬದುಕು
ಅಣ್ಣಾವ್ರ ಫಿಲಂನಲ್ಲಿ ಮೊದಲಿಗೇ ಮನದಟ್ಟಾಗುವುದು ಅವರ ಕಾಯಕನಿಷ್ಠೆ. ಯಾವ ಫಿಲಂನಲ್ಲೂ ಅವರು ಕೆಲಸವಿಲ್ಲದ ಪೊರ್ಕಿಯಲ್ಲ. ಇಂದಿನ ಅನೇಕ ಹೀರೋಗಳು ಹೀರೋಗಿರಿ, ಗೂಂಡಾಗಿರಿಯನ್ನೇ ಪೂರ್ಣಾವಧಿ ಕಾಯಕ ಮಾಡಿಕೊಂಡು, ಪ್ರೇಕ್ಷಕರಿಗೆ ಹಿಂಸೆಯ ರುಚಿ ಬಿಟ್ಟರೆ ಇನ್ನೇನನ್ನೂ ನೀಡದೆ ಇರುವಾಗ, ರಾಜ್ ಅವರು ಪ್ರತಿಪಾದಿಸಿದ ದುಡಿಮೆಯ ಮೌಲ್ಯ ನಮಗೆ ಮುಖ್ಯವಾಗುತ್ತದೆ. ಉಪನ್ಯಾಸಕ, ಡಾಕ್ಟರ್, ಪೊಲೀಸ್ ಅಧಿಕಾರಿ, ಚಾಲಕ, ಕೃಷಿಕ ಹೀಗೆ ಅವರ ರೇಂಜ್ ಬಹು ವಿಸ್ತಾರ.
2. ಮರಳಿ ಮಣ್ಣಿಗೆ
ʼಬಂಗಾರದ ಮನುಷ್ಯʼ ಸಿನಿಮಾದಲ್ಲಿ ಅವರು ಪಟ್ಟಣದಲ್ಲಿ ಕಲಿತು ಬಂದರೂ ಹಳ್ಳಿಯಲ್ಲಿ ನೆಲೆ ನಿಂತು ಬಂಗಾರ ಬೆಳೆಯುವ ಕೃಷಿಕನಾಗಿ ಕಾಣಿಸಿಕೊಳ್ಳುತ್ತಾರೆ. ಅಂದಿಗೆ ಕೃಷಿಕ ಹೀರೋ ಆಗಿ ಕಾಣಿಸಿಕೊಳ್ಳುವ ಧೈರ್ಯ ತೋರಿದ ಏಕೈಕ ನಾಯಕನಟ ಅವರು. ನಂತರ ಅವರ ಹಾದಿಯಲ್ಲಿ ವಿಷ್ಣುವರ್ಧನ್ ಮುಂತಾದವರು ನಡೆದರು. ʼಬಂಗಾರದ ಮನುಷ್ಯʼ ಫಿಲಂನಿಂದ ಪ್ರೇರಣೆ ಪಡೆದ ಅನೇಕರು ಹಳ್ಳಿಗೆ, ಕೃಷಿಗೆ ಹಿಂದಿರುಗುವ ಉತ್ಸಾಹ ತೋರಿದರು. ಕ್ರೈಂ ಮಾಡಲು ಪ್ರಚೋದಿಸಿದ ಫಿಲಂಗಳು ನಂತರ ಬಂದಿವೆ; ಆದರೆ ರಾಜ್ ಅವರಂತೆ ನೋಡುಗನನ್ನು ಪಾಸಿಟಿವ್ ಮನಸ್ಥಿತಿಗೆ ಎತ್ತಿದ ಚಿತ್ರಗಳೆಷ್ಟಿವೆ?
3. ಸಂಬಂಧಕ್ಕೆ ಸದಾ ಬೆಲೆ
ಡಾ.ರಾಜ್ ಅವರು ಸಂಬಂಧಗಳಿಗೆ ಗರಿಷ್ಠ ಬೆಲೆ ಕೊಡುತ್ತಿದ್ದವರು. ತೆರೆಯ ಮೇಲಾಗಲೀ, ಸಿನಿಮಾ ಸೆಟ್‌ಗಳಲ್ಲಾಗಲೀ ಅವರ ಬಳಗ ದೊಡ್ಡದು. ತಂದುದನ್ನು ಹಂಚಿ ತಿನ್ನುತ್ತಿದ್ದರು. ಸೆಟ್‌ನಲ್ಲಿದ್ದ ಎಲ್ಲರಿಗೂ ಊಟ ಆಗುವಂತೆ ನೋಡಿಕೊಳ್ಳುತ್ತಿದ್ದರು. ಅವರ ಸಿನಿಮಾಗಳ ಕತೆಯಲ್ಲಿ ಅನಗತ್ಯ ಐಷಾರಾಮಿತನ, ಹೀರೋಗಿರಿ ಇಲ್ಲ. ಬದಲಾಗಿ ಸಂಬಂಧಗಳೇ ಜೀವಾಳ. ಕತೆಯೇ ಮುಖ್ಯ.
4. ಮಹಾಪುರುಷರಿಗೆ ಜೀವ
ಇಂದಿಗೂ ಶ್ರೀ ರಾಘವೇಂದ್ರ ಗುರುಗಳು ಎಂದರೆ ನಮ್ಮ ಕಣ್ಣ ಮುಂದೆ ಮೂಡುವುದು ʼಮಂತ್ರಾಲಯ ಮಹಾತ್ಮೆʼ ಫಿಲಂನಲ್ಲಿ ಅವರು ಮಾಡಿದ ಶ್ರೀ ಗುರು ರಾಘವೇಂದ್ರರ ಪಾತ್ರ. ಶ್ರೀಕೃಷ್ಣದೇವರಾಯ ಎಂದರೆ ಕಿರೀಟ ಇಟ್ಟ ಅಣ್ಣಾವ್ರ ಮುಖ. ಇಮ್ಮಡಿ ಪುಲಿಕೇಶಿ ಎಂದರೆ ರಾಜ್‌ಕುಮಾರ್. ಸಂತ ತುಕಾರಾಮ ಎಂದರೂ, ಸತ್ಯ ಹರಿಶ್ಚಂದ್ರ ಎಂದರೂ ಅವರೇ. ಮಹಾಕವಿ ಕಾಳಿದಾಸ, ಬೇಡರ ಕಣ್ಣಪ್ಪನನ್ನು ಯಾರು ನೋಡಿದ್ದಾರೆ? ಆದರೆ ಈ ಎಲ್ಲ ಪಾತ್ರಗಳಲ್ಲೂ ರಾಜ್ ಮುಖ ಸದಾ ನೆನಪಿರುತ್ತದೆ. ಹೀಗೆ ನಮ್ಮ ಮಹಾಪುರುಷರನ್ನು ಅವರು ಜೀವಂತಗೊಳಿಸಿದವರು.
5. ಕನ್ನಡಿಗರ ನಾಯಕ
1980ರಲ್ಲಿ ನಡೆದ ʼಗೋಕಾಕ್ ಚಳವಳಿʼ ಐತಿಹಾಸಿಕ. ಕುಂಟುತ್ತಾ ನಡೆದಿದ್ದ ಗೋಕಾಕ ಚಳವಳಿಗೆ ಡಾ.ರಾಜ್ ಪ್ರವೇಶಿಸಿದ್ದೇ ತಡ, ಅದು ಕಾಳ್ಗಿಚ್ಚಿನಂತೆ ಪಸರಿಸಿತು. ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ನಟ ನಟಿಯರು ಧ್ವನಿಯೆತ್ತುವ ಪರಿಪಾಠವನ್ನು ರಾಜ್ ಹಾಕಿಕೊಟ್ಟರು. ಅದು ಮುಂದಿನವರಿಗೆ ರೋಲ್ ಮಾಡೆಲ್ ಆಯಿತು.
6. ಸಂತೈಸುವ ಹಾಡುಗಳು
ದುಡಿದು ಬಳಲಿದವರನ್ನು ಸಂತೈಸಲು ಅವರ ʼನಾನಿರುವುದೆ ನಿಮಗಾಗಿʼ ಹಾಡು ಬೇಕು. ಪ್ರೇಮಭಂಗಗೊಂಡವರನ್ನು ಸಾಂತ್ವನಗೊಳಿಸಲು ಅವರ ʼಬಾಳುವಂಥ ಹೂವೆ, ಬಾಡುವಾಸೆ ಏಕೆ?ʼ ಹಾಡು ಬೇಕು. ನಿರುತ್ಸಾಹದಿಂದ ಕುಳಿತವರನ್ನು ಎಬ್ಬಿಸಲು ಅವರ ʼಜಗವೇ ಒಂದು ರಣರಂಗʼ ಹಾಡು ಸಾಕು. ʼಯಾರೇ ಕೂಗಾಡಲಿ ಊರೇ ಹೋರಾಡಲಿʼ ಎಂದು ಅವರು ಹಾಡಿದರೆ ಅದು ಗ್ರಾಮೀಣ ಪಡ್ಡೆಹುಡುಗರ ಧ್ವನಿ.
7. ಜಿಮ್ ಮಾಡದೇ ಸಿಕ್ಸ್ ಪ್ಯಾಕ್
ಅಣ್ಣಾವ್ರು ಎಂದೂ ಜಿಮ್ ಟ್ರೇನಿಂಗ್ ಪಡೆದವರಲ್ಲ. ಆದರೆ ಯೋಗ, ವಾಕಿಂಗ್ ಅವರ ದೇಹವನ್ನು ಚುರುಕಾಗಿ, ಫಿಟ್ ಆಗಿ ಇಟ್ಟಿದ್ದವು. ಅವರ ದೇಹದಲ್ಲಿ ಅನಾರೋಗ್ಯಕರ ಸಿಕ್ಸ್ ಪ್ಯಾಕ್ ಇರಲಿಲ್ಲ. ಬದಲು ಆರೋಗ್ಯವಂತ ಶರೀರವಾಗಿತ್ತು.
8. ನೋ ಸ್ಮೋಕಿಂಗ್, ನೋ ಆಲ್ಕೋಹಾಲ್
ಅವರ ಸಿನಿಮಾಗಳಲ್ಲಿ ಧೂಮಪಾನದ ದೃಶ್ಯಗಳಿರುತ್ತಿರಲಿಲ್ಲ. ಆಲ್ಕೋಹಾಲ್ ಸೇವನೆಯ ದೃಶ್ಯಗಳೂ ಬರದಂತೆ ನೋಡಿಕೊಳ್ಳುತ್ತಿದ್ದರು. ಇದ್ದರೂ ಅದು ವಿಲನ್‌ಗಳಿಗೆ ಸೀಮಿತವಾಗಿರುತ್ತಿತ್ತು. ಚಟಗಳನ್ನು ಅವರು ಪ್ರಮೋಟ್ ಮಾಡಲೇ ಇಲ್ಲ.
ʻದಿ ಕಾಶ್ಮೀರಿ ಫೈಲ್ಸ್ʼ ನಿರ್ದೇಶಕನಿಗೆ Y ಶ್ರೇಣಿ ಭದ್ರತೆ: ಯಾಕೆ ಗೊತ್ತಾ..?