ಬೆಂಗಳೂರು: ರಾಷ್ಟ್ರಪಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ (Manso Re) ಚಿತ್ರ ‘19.20.21’ ಟೀಸರ್ ಬಿಡುಗಡೆಗೊಂಡಿದೆ. ಸಿನಿಮಾಟೋಗ್ರಫಿ, ಮ್ಯೂಸಿಕ್, ಪಾತ್ರಗಳ ಆಯ್ಕೆ ಹಾಗೂ ಚಿತ್ರಕಥೆಯ ಸಾಮರ್ಥ್ಯದ ಬಗ್ಗೆ ಚರ್ಚೆಗಳು ನಡೆದಿವೆ. ‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್ 1978’ ಹೀಗೆ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತ ಬಂದಿರುವ ಮಂಸೋರೆ ಅವರ ಈ ಚಿತ್ರದ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಜನವರಿ 27ರಂದು ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
75ನೇ ಸ್ವಾತಂತ್ರ ದಿನೋತ್ಸವ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದರು ನಿರ್ದೇಶಕರು. ವ್ಯಕ್ತಿಯೊಬ್ಬರ ಬಾಯಿಗೆ ಬಟ್ಟೆ ಕಟ್ಟಿ, ಬೆನ್ನಿನಲ್ಲಿ ರಕ್ತ ಸುರಿಯುವಂತಹ ಆ ಪೋಸ್ಟರ್ ಅನೇಕ ವಿಷಯಗಳನ್ನು ಹೇಳುವಂತಿತ್ತು. 2018 ರಿಂದ 2022ರ ತನಕ ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧನಕ್ಕೆ ಒಳಗಾದ 4,690 ಜನರಲ್ಲಿ ಕೇವಲ 149 ಮಂದಿ ಮಾತ್ರ ಅಪರಾಧಿಗಳು ಎಂಬ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದರು. ಹೀಗಾಗಿ ಇದೊಂದು ವಿಶೇಷ ಸಿನಿಮಾ ಎನ್ನುವುದು ಖಾತರಿ ಆಗಿತ್ತು.
ಇದನ್ನೂ ಓದಿ | Manso Re Director | ಮಂಸೋರೆ ನಿರ್ದೇಶನದ 19.20.21 ಸಿನಿಮಾ ಬಿಡುಗಡೆಗೆ ಸಜ್ಜು!
ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹೆಣೆದ ಕಥೆ ಚಿತ್ರದಲ್ಲಿದ್ದು, ಸೋಷಿಯಲ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ ಎಂದು ತಂಡ ಹೇಳಿಕೊಂಡಿದೆ. ಚಿತ್ರೀಕರಣ ಮುಗಿಸಿ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಸಿನಿಮಾ ಬಿಡುಗಡೆಗೂ ತಯಾರಿ ನಡೆಸುತ್ತಿದ್ದು ಶೀಘ್ರದಲ್ಲೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ರಂಗಭೂಮಿ ಕಲಾವಿದರಾದ ಶೃಂಗ ಬಿ ವಿ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪತ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ. ಯಲ್ಲಾಪುರ, ಧಾರವಾಡ, ಮಂಗಳೂರು, ಕುಂದಾಪುರ ಸೇರಿದಂತೆ ಹಲವು ಕಡೆ ಚಿತ್ರವನ್ನು ಸೆರೆ ಹಿಡಿಯಲಾಗಿದೆ.
ಶಿವು ಬಿ ಕೆ ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಬಿಂದು ಮಾಲಿನಿ ಸಂಗೀತ ನಿರ್ದೇಶನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ.
ಇದನ್ನೂ ಓದಿ | Manso Re | ಕುತೂಹಲ ಮೂಡಿಸಿದ ಮಂಸೋರೆ ನಿರ್ದೇಶನದ 19.20.21 ಸಿನಿಮಾ ಪೋಸ್ಟರ್