ಖಡಕ್ ಬ್ಲಾಕ್‌ಬಸ್ಟರ್ ಚಲನಚಿತ್ರ ಕೆಜಿಎಫ್ ಚಾಪ್ಟರ್ ಮೂಡ್‌ನಲ್ಲೇ ಇದ್ದ ಸಿನಿಪ್ರಿಯರನ್ನು ಒಂದು ಭಾವನಾತ್ಮಕ ಲೋಕಕ್ಕೆ ಕರೆದೊಯ್ದ ʼ777 ಚಾರ್ಲಿʼ ಬಿಡುಗಡೆಯಾಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಟ್ರೇಲರ್ ಬಿಡುಗಡೆಯಾದಾಗಲೇ ಭರ್ಜರಿ ಸುದ್ದಿ ಮಾಡಿ, ಜನರಲ್ಲಿ ಕುತೂಹಲ ಮೂಡಿಸಿದ್ದ ಸಿನಿಮಾವೀಗ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಓಡುತ್ತಿದೆ. ಶ್ವಾನ-ಮನುಷ್ಯನ ಬಾಂಧವ್ಯ ತೋರಿಸುವ ಕಥಾ ಹಂದರದ ಸಿನಿಮಾ ನೋಡಿ ಹೊರಬರುವ ಬಹುತೇಕರ ಕಣ್ಣುಗಳಲ್ಲಿ ನೀರಿರುತ್ತಿದೆ. ಅದು ಈ ಸಿನಿಮಾಕ್ಕಿರುವ ಎಮೋಶನಲ್ ತಾಕತ್ತು ಎಂದೇ ಹೇಳಲಾಗುತ್ತಿದೆ. ಮತ್ತು ಇದೇ ಕಾರಣಕ್ಕೇ ಜನ ಚಾರ್ಲಿ ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ.
ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾವೇ ಆಗಿದ್ದು ಬಿಡುಗಡೆಯಾದ ಮೊದಲ ದಿನ ದೇಶದಲ್ಲಿ 6 ಕೋಟಿ ರೂಪಾಯಿ ಗಳಿಸಿದೆ ಎಂದು ಹೇಳಲಾಗಿತ್ತು. ನಿನ್ನೆ ಎರಡನೇ ದಿನ ಸುಮಾರು 9 ಕೋಟಿ ರೂ. ಕಲೆಕ್ಷನ್ ಆಗಿದೆಯಂತೆ. ಇಂದು ಮೂರನೇ ದಿನ ಕಲೆಕ್ಷನ್ ಪಕ್ಕಾ 10 ಕೋಟಿ ರೂಪಾಯಿ ಮೀರುತ್ತದೆ ಎಂದೇ ಹೇಳಲಾಗುತ್ತಿದೆ. ವೀಕೆಂಡ್ ಕೂಡ ಆಗಿದ್ದರಿಂದ ಸಹಜವಾಗಿಯೇ ಸಿನಿಮಾ ಹಾಲ್‌ಗಳು ತುಂಬುತ್ತವೆ. ಇನ್ನೂ ಮೂರು ದಿನ ಎನ್ನುವಷ್ಟರಲ್ಲಿ ಚಾರ್ಲಿ ಸಿನಿಮಾದ ಕಲೆಕ್ಷನ್ 50 ಕೋಟಿ ರೂ.ಗಡಿ ದಾಟುತ್ತದೆ ಎನ್ನಲಾಗಿದೆ. ಇದು ದೇಶ ಮಟ್ಟದ ಲೆಕ್ಕಾಚಾರವಾಗಿದ್ದು, ವಿಶ್ವಮಟ್ಟದಲ್ಲಿ ಪರಿಗಣಿಸಿದರೆ, ಕಲೆಕ್ಷನ್ ಇನ್ನೂ ಹೆಚ್ಚಾಗಲಿದೆ. ಅಂದಹಾಗೇ, ಇದುವರೆಗೆ 777 ಚಾರ್ಲಿ ಸಿನಿಮಾ ಗಳಿಕೆ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: 777 ಚಾರ್ಲಿ | ಮೊದಲ ದಿನದ ಕಲೆಕ್ಷನ್ ಎಷ್ಟು? ಜೂನ್ 12ರಂದು Dog Adoption ಅಭಿಯಾನ!
777 ಚಾರ್ಲಿ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವುದಕ್ಕೂ ಮೊದಲೇ ಚಿತ್ರತಂಡ ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ ಏರ್ಪಡಿಸಿತ್ತು. ಇಲ್ಲಿಯೂ ಸಹ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರದ ಪ್ರಸಾರದ ಹಕ್ಕು ಕೂಡ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿತ್ತು. ಹಾಗೇ, ಕನ್ನಡ ಭಾಷೆಯ ಸೆಟಲೈಟ್ ಹಕ್ಕನ್ನು ಕಲರ್ಸ್ ಕನ್ನಡ 21 ಕೋಟಿ ರೂಪಾಯಿಗೆ ಪಡೆದಿದೆ. ಡಿಜಿಟಲ್ ಹಕ್ಕು ಕೂಡ ಇದೇ ಸಂಸ್ಥೆಯ ವೂಟ್‌ಗೆ ಲಭಿಸಿದೆ. ಕನ್ನಡದ ಜತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿಯೂ ತೆರೆ ಕಂಡಿರುವ ಈ ಸಿನಿಮಾದ ವಿತರಣೆ ಹಕ್ಕನ್ನು ಆಯಾ ಭಾಷೆಗಳ ಪ್ರಖ್ಯಾತ ಸಂಸ್ಥೆಗಳು ಪಡೆದುಕೊಂಡಿವೆ. ರಕ್ಷಿತ್ ಶೆಟ್ಟಿ ಸಿನಿಮಾ ನಿಧಾನವಾಗಿಯೇ ಬಂದರೂ ಅದ್ಭುತವಾಗಿರುತ್ತದೆ ಎಂಬುದಕ್ಕೆ ಈ 777 ಚಾರ್ಲಿ ಸಾಕ್ಷಿ ಎನ್ನುತ್ತಿದ್ದಾರೆ ಸಿನಿಪ್ರಿಯರು.
ಇದನ್ನೂ ಓದಿ: 777 ಚಾರ್ಲಿ | ಸಿನಿಮಾ ಸ್ಫೂರ್ತಿ ಪಡೆದು ಶ್ವಾನದಳದ ನಾಯಿಗೆ ಇಟ್ಟ ಹೆಸರೇನು?