ಕಥೆ ಎಷ್ಟು ಮುಖ್ಯವೋ ಕಥೆ ಹೇಳುವ ರೀತಿ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಅದನ್ನು ಎಸ್.ಎಸ್.ರಾಜಮೌಳಿ ಒಬ್ಬ ನಿರ್ದೇಶಕರಾಗಿ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಒಂದು ದೃಶ್ಯ ಹೇಗೆ ಪ್ರೇಕ್ಷಕರ ಮನಸ್ಸನ್ನು ಮುಟ್ಟುವಂತೆ ಮಾಡಬೇಕು ಎಂದು ತಿಳಿದುಕೊಂಡ ಚಾಣಾಕ್ಷ ನಿರ್ದೇಶಕ. ಬಾಹುಬಲಿ ಚಿತ್ರದ ನಂತರ ಪ್ರೇಕ್ಷಕರ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದರೆ ಸ್ಟಾರ್ ಕಾಸ್ಟ್ ನೋಡಿ ಥಿಯೇಟರ್‌ಗೆ ಬರೋಕಿಂತ ಜಾಸ್ತಿ ಅದು ರಾಜಮೌಳಿ ಚಿತ್ರ ಎಂದು ನೋಡಲು ಥಿಯೇಟರ್‌ಗೆ ಮುಗಿಬೀಳ್ತಾರೆ. ಆರ್‌ಆರ್‌ಆರ್ ಕೂಡ ಅದೇ ಸಾಲಿಗೆ ಸೇರಿರುವ ಪ್ಯಾನ್ ಇಂಡಿಯಾ ಸಿನಿಮಾ.
ಸಿನಿಮಾ ಶುರುವಾಗಿ ಮುಗಿಯೋವರೆಗೂ ಒಂದು ಕ್ಷಣ ಕೂಡ ಕಣ್ಣು ರೆಪ್ಪೆ ಮುಚ್ಚದೇ ಚಿತ್ರ ನೋಡುವ ಹಾಗೆ ದೃಶ್ಯಗಳನ್ನು ಚಿತ್ರಿಸಲಾಗಿದೆ. ಚಿತ್ರದ ಆರಂಭದಲ್ಲಿ ಬ್ರಿಟಿಷರು ಮತ್ತು ಕಾಡು ಜನರ ನಡುವೆ ಶುರುವಾಗುವ ಕಲಹ ಮುಂದೆ ದೊಡ್ಡ ಸಂಗ್ರಾಮಕ್ಕೆ ನಾಂದಿಯಾಗುತ್ತದೆ. ಬ್ರಿಟಿಷರ ವಿರುದ್ಧದ ಹೋರಾಟ, ಹೋರಾಟದಲ್ಲಿ ಎದುರಾಗುವ ತೊಡಕುಗಳು ಮತ್ತು ಬೆಸೆಯುವ ಹೊಸ ಸಂಬಂಧಗಳು. ಈ ಎಲ್ಲಾ ಅಂಶಗಳನ್ನು ಮನದಲ್ಲಿಟ್ಟುಕೊಂಡು ವಿಜಯೇಂದ್ರ ಪ್ರಸಾದ್ ಸರಳವಾದ ಕಥೆಯನ್ನು ಬರೆದಿದ್ದಾರೆ. ಈ ಸಿನಿಮಾ ಆಂಧ್ರಪದೇಶ ಪ್ರಾಂತ್ಯದ ಸ್ವಾತಂತ್ರ್ಯ ಹೋರಾಟಗಾರರಾದ ಸೀತಾರಾಮರಾಜು ಹಾಗೂ ಕೊಮರಂ ಭೀಮ ಅವರ ಪಾತ್ರದಿಂದ ಪ್ರೇರಣೆ ಪಡೆದಿದೆ.
ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್‌ಚರಣ್ ತೇಜ ಅದ್ಭುತವಾಗಿ ನಟಿಸಿದ್ದಾರೆ. ಖಡಕ್ ಸ್ಟೈಲಿಷ್ ಪೋಲಿಸ್ ಅಧಿಕಾರಿ ಲುಕ್‌ನಲ್ಲಿ ಎಂಟ್ರಿ ಕೊಟ್ಟಾಗ ಹಾಗೂ ಶ್ರೀರಾಮನಂತೆ ಬಿಲ್ಲು ಬಾಣ ಹಿಡಿದು ಯುದ್ಧಕ್ಕೆ ನಿಂತ ದೃಶ್ಯವನ್ನು ನೋಡಿದಾಗ ಆ ಪಾತ್ರಕ್ಕೆ ರಾಮ್‌ಚರಣ್ ಅತ್ಯಂತ ಸೂಕ್ತ ಆಯ್ಕೆ ಎಂಬುದು ಖಚಿತವಾಗುತ್ತದೆ. ಅದೇ ರೀತಿ ಕೊಮರಂ ಭೀಮ್ ಪಾತ್ರ ನಿರ್ವಹಿಸಿದ ಜ್ಯೂನಿಯರ್ ಎನ್.ಟಿ.ಆರ್ ಕೂಡ ರಗಡ್ ಲುಕ್‌ನಲ್ಲಿ ಅಭಿಮಾನಿಗಳ ಮನಸೆಳೆದಿದ್ದಾರೆ. ರಾಮ್‌ಚರಣ್ ಹಾಗೂ ಜ್ಯೂನಿಯರ್ ಎನ್‌ಟಿಆರ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ರಾಮ್‌ಚರಣ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಎರಡೂ ಪಾತ್ರಗಳ ನಡುವಿನ ಪೈಪೋಟಿ ಹಾಗೂ ಗೆಳೆತನವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ತೆರೆಯ ಮೇಲೆ ಮೆರೆದಿದ್ದಾರೆ.
ಕಥೆಗೆ ತಕ್ಕ ಸಂಭಾಷಣೆಯನ್ನು ಬರೆದು ಚಿತ್ರದ ಭಾವವನ್ನು ಪ್ರೇಕ್ಷಕನಿಗೆ ತಲುಪಿಸುವಲ್ಲಿ ಆರ್‌ಆರ್‌ಆರ್ ಯಶಸ್ವಿಯಾಗಿದೆ. ಇವೆಲ್ಲದಕ್ಕೂ ಶಕ್ತಿ ನೀಡಿ ಜೀವ ತುಂಬಿದ್ದು ಕ್ಯಾಮರಾ ಹಿಂದಿನ ಕೆ ಕೆ ಸೆಂಥಿಲ್ ಅವರ ಕೈಚಳಕ. ಛಾಯಾಗ್ರಾಹಕ ಸೆಂಥಿಲ್ ಅವರು ಮಾಡಿದ ಮ್ಯಾಜಿಕ್ ಹಾಗೂ ವಿಷುವಲ್ ಎಫೆಕ್ಟ್ಸ್ ಮಾಡಿದ ಮೋಡಿ ಚಿತ್ರವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿದೆ. ಕತೆ ಅತೀ ಸರಳ ಹಾಗೂ ನಿರೀಕ್ಷಿತವಾಗಿದ್ದರೂ ಮುಂದಿನ ದೃಶ್ಯವನ್ನು ಸೀಟಿನ ತುದಿಯಲ್ಲಿ ಕುಳಿತು ನೋಡುವಂತೆ ಮಾಡುವುದರಲ್ಲಿ ಚಿತ್ರ ಗೆದ್ದಿದೆ. ಸಣ್ಣ ಸಣ್ಣ ಅಂಶಗಳಿಗೂ ಗಮನ ಕೊಟ್ಟು ಕಥೆಯಲ್ಲಿ ಎಲ್ಲಿಯೂ ದೋಷ ಕಾಣದಂತೆ ಚಿತ್ರವನ್ನು ನಿರ್ದೇಶಿಸಲಾಗಿದೆ.
ಎಂ.ಎಂ.ಕಿರವಾಣಿ ನೀಡಿದ ಸಂಗೀತ ಈ ಚಿತ್ರದ ಶ್ರೀಮಂತಿಕೆ. ಪ್ರತಿಯೊಂದು ಹಾಡು ಕೂಡ ಹೊಸ ಜೋಶ್ ನೀಡುತ್ತದೆ. ನಾಟು ನಾಟು ಹಾಗೂ ಎತ್ತರಾ ಜೆಂಡಾ ಹಾಡು ಕೇಳುವಾಗ ನಾಲ್ಕು ಸ್ಟೆಪ್ ಹಾಕದೇ ಸುಮ್ಮನೆ ಕೂರುವುದು ಕಷ್ಟ ಆಗುತ್ತದೆ. ಪ್ರತಿಯೊಂದು ಸೀನ್‌ಗೂ ಸೂಕ್ತ ಹಿನ್ನಲೆ ಸಂಗೀತ ನೀಡಿದ್ದಾರೆ.
ಕೆಲವೇ ನಿಮಿಷಗಳ ಕಾಲ ದೃಶ್ಯದಲ್ಲಿದ್ದ ಬಾಲಿವುಡ್ ನಟ ಅಜಯ್ ದೇವಗನ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸೀತಾ ಪಾತ್ರದಲ್ಲಿ ಕಾಣಿಸಿಕೊಂಡ ಆಲಿಯಾ ಭಟ್ ಆ ಪಾತ್ರಕ್ಕೆ ಅಷ್ಟು ಸೂಕ್ತ ಆಯ್ಕೆ ಎಂದು ಅನ್ನಿಸುವುದಿಲ್ಲ. ಕೆಲವು ದೃಶ್ಯಗಳಲ್ಲಿ ಇಂಗ್ಲಿಷ್ ಡೈಲಾಗ್‌ಗಳಿಗೆ ತೆಲುಗು ವಾಯ್ಸ್ ಓವರ್ ನೀಡಲಾಗಿದೆ ಆದರೆ ಕೆಲವು ದೃಶ್ಯಗಳಿಗೆ ನೀಡಲಾಗಿಲ್ಲ. ಅದು ಚಿತ್ರದ ಸ್ವಾರಸ್ಯವನ್ನು ಕೆಡಿಸುತ್ತದೆ.
ಆರ್‌ಆರ್‌ಆರ್ ಚಿತ್ರವನ್ನು ನಮ್ಮ ಲಾಜಿಕ್‌ಗಳಿಂದ ಆಚೆ ಇಟ್ಟು ನೋಡಿದರೆ ಒಂದು ಸುಂದರ ಅನುಭವ ಎನ್ನಬಹುದು. ಹಾಸ್ಯ, ಪ್ರೀತಿ, ಉದ್ವೇಗ, ದುಃಖ, ಪ್ರತೀಕಾರ, ಕೋಪ, ಈ ಎಲ್ಲಾ ಭಾವನೆಗಳು ಭರಪೂರವಾಗಿ ತುಂಬಿರುವ ಸಿನಿಮಾ.