ಬೆಂಗಳೂರು: ದೀರ್ಘ ಕಾಯುವಿಕೆ ಚಿಕ್ಕದಾಗುತ್ತದೆ! ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅಭಿನಯದ ದಿ ಗೋಟ್ ಲೈಫ್ -ಆಡುಜೀವಿತಮ್ (Aadujeevitham Movie) ಈಗ ಮಾರ್ಚ್ 28ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ (Film release on March 28). ಹೀಗೆಂದು ಚಿತ್ರತಂಡ ಘೋಷಣೆ ಮಾಡಿದೆ. ಈ ಚಿತ್ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಕುತೂಹಲಿಗಳನ್ನು ಇನ್ನಷ್ಟು ಕಾಯಿಸದೆ ಬೇಗನೆ ಚಿತ್ರಮಂದಿರಕ್ಕೆ ಬರಲು ತೀರ್ಮಾನಿಸಲಾಗಿದೆ.
ಭಾರತೀಯ ಚಲನಚಿತ್ರೋದ್ಯಮದ ವಿವಿಧ ಸೂಪರ್‌ಸ್ಟಾರ್‌ಗಳು ಮೂರು ನಿಗೂಢ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದ ಈ ಚಿತ್ರ ಇದೀಗ ಪೂರ್ಣ ರೂಪದೊಂದಿಗೆ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ.
ಈ ಚಲನಚಿತ್ರವು ಮಲಯಾಳಂ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಜನಪ್ರಿಯವಾದ ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದಾದ ‘ಆಡುಜೀವಿತಂ’ ಕಾದಂಬರಿಯನ್ನು ಆಧರಿಸಿದೆ, ಇದನ್ನು ವಿದೇಶಿ ಭಾಷೆಗಳು ಸೇರಿದಂತೆ 12 ವಿವಿಧ ಭಾಷೆಗಳಲ್ಲಿ ಅನುವಾದಿಸಲಾಗಿದೆ. ಹೆಸರಾಂತ ಬರಹಗಾರ ಬೆನ್ಯಾಮಿನ್ ಬರೆದಿರುವ ಈ ಕಥೆ 90ರ ದಶಕದ ಆರಂಭದಲ್ಲಿ ಕೇರಳದ ಹಚ್ಚ ಹಸಿರಿನ ತೀರದಿಂದ ವಿದೇಶದಲ್ಲಿ ಅದೃಷ್ಟವನ್ನು ಹುಡುಕುತ್ತಾ ವಲಸೆ ಹೋದ ಯುವಕ ನಜೀಬ್‌ನ ಜೀವನದ ಕಥೆಯನ್ನು ಆಧರಿಸಿದೆ
ರಾಷ್ಟ್ರೀಯ ಪ್ರಶಸ್ತಿ ವಿಜೇತ ಬ್ಲೆಸ್ಸಿ ನಿರ್ದೇಶಿಸಿದ ವಿಷುಯಲ್ ರೊಮ್ಯಾನ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆ.ಆರ್.ಗೋಕುಲ್ ಮತ್ತು ಹೆಸರಾಂತ ಅರಬ್ ನಟರಾದ ತಾಲಿಬ್ ಅಲ್ ಬಲುಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ದಿ ಗೋಟ್ ಲೈಫ್ ಚಿತ್ರದ ಸಂಗೀತ ನಿರ್ದೇಶನ ಮಾಡಿರುವುದು ಎ.ಆರ್. ರೆಹಮಾನ್. ರೆಸುಲ್ ಪೂಕುಟ್ಟಿ ಮತ್ತು ಸುನಿಲ್ ಕೆಎಸ್. ಚಿತ್ರದ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಮತ್ತು ಚಿತ್ರಕ್ಕೆ ಶ್ರೀಕರ್ ಪ್ರಸಾದ್ ಸಂಕಲನವಿದೆ.
ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಚಿತ್ರೀಕರಿಸಲಾಗುತ್ತಿರುವ ಈ ಚಲನಚಿತ್ರವು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಇದುವರೆಗಿನ ಅತಿದೊಡ್ಡ ಸಾಹಸ ಎನ್ನಲಾಗುತ್ತಿದೆ.
ವಿಷುಯಲ್ ರೊಮ್ಯಾನ್ಸ್ ಒಂದು ವಿಶಿಷ್ಟವಾದ ಭಾರತೀಯ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿದ್ದು, ಕೇರಳದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 7 ವರ್ಷಗಳ ಅಲ್ಪಾವಧಿಯಲ್ಲಿ, ಕಂಪನಿಯು ಸೃಜನಶೀಲ ಶಕ್ತಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ, ಉದ್ಯಮದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ.
ವಿಷುಯಲ್ ರೋಮ್ಯಾನ್ಸ್ “100 ಇಯರ್ಸ್ ಆಫ್ ಕ್ರಿಸೋಸ್ಟೋಮ್” ನಿರ್ಮಾಣದ ಮೂಲಕ ಸಿನಿಮಾ ಜಗತ್ತಿನಲ್ಲಿ ಒಂದು ಮೈಲಿಗಲ್ಲು ಸಾಧಿಸಿತು, ಇದು 48 ಗಂಟೆಗಳ ಕಾಲ ಅಭೂತಪೂರ್ವ ಅವಧಿಯ ಸಾಕ್ಷ್ಯಚಿತ್ರವಾಗಿದೆ. ವ್ಯಾಪಕವಾಗಿ ಮೆಚ್ಚುಗೆ ಪಡೆದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಗೌರವ ಪಡೆದಿದೆ.
ಇದನ್ನೂ ಓದಿ: Aadujeevitham Movie: ವಲಸೆ ಕಥೆ ಹೊತ್ತ ಆಡುಜೀವಿತಂ ರಿಲೀಸ್ ಡೇಟ್ ನ. 30ಕ್ಕೆ ಅನೌನ್ಸ್
ದಾರ್ಶನಿಕ ಚಲನಚಿತ್ರ ನಿರ್ಮಾಪಕ ಬ್ಲೆಸ್ಸಿ ಐಪ್ ಥಾಮಸ್ ಸ್ಥಾಪಿಸಿದ ವಿಷುಯಲ್ ರೋಮ್ಯಾನ್ಸ್ ಕಥೆ ಹೇಳುವ ಅವರ ಉತ್ಸಾಹ ಮತ್ತು ಸಿನಿಮಾ ಕಲಾತ್ಮಕತೆಗೆ ಬದ್ಧತೆಯನ್ನು ಒಳಗೊಂಡಿದೆ. ಬ್ಲೆಸ್ಸಿಯ ಕ್ರಿಯಾಶೀಲತೆಯು ಅವರಿಗೆ ಗಮನಾರ್ಹವಾದ ಮನ್ನಣೆಯನ್ನು ತಂದುಕೊಟ್ಟಿದೆ. ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಆರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಅವರಿಗೆ ಲಭಿಸಿವೆ.
Aadujeevitham Movie : ಏನಿದು ಆಡುಜೀವಿತಂ ಸಿನಿಮಾ ಕಥೆ?
ಹಣ ಸಂಪಾದಿಸಲು ಸೌದಿ ಅರೇಬಿಯಾಕ್ಕೆ ಹೋದ ಭಾರತೀಯ ವಲಸೆ ಕಾರ್ಮಿಕ ನಜೀಬ್ ಮುಹಮ್ಮದ್ ನ ನಿಜ ಜೀವನದ ಘಟನೆ ಇದು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ವಿಧಿಯ ವೈಚಿತ್ರ್ಯದಿಂದಾಗಿ ನಜೀಬ್ ಗುಲಾಮನ ಬದುಕನ್ನು ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅವನು ಮರುಭೂಮಿಯ ಮಧ್ಯದಲ್ಲಿ ಮೇಕೆಗಳನ್ನು ಮೇಯಿಸಬೇಕಾಗುತ್ತದೆ. ಆಡು ಜೀವಿತಂ ಅಂದರೆ ಆಡಿನ ಬದುಕು ಅಂಥ ಅರ್ಥ. ಇಂಗ್ಲಿಷ್‌ನಲ್ಲಿ ಇದರ ಟೈಟಲ್ GOAT LIFE ಎಂದಿದೆ.
ಪರ್ಷಿಯನ್ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಮನೆಗೆ ಕಳುಹಿಸುವಷ್ಟು ಹಣ ಸಂಪಾದಿಸುವುದು ನಜೀಬ್ ಅವರ ಕನಸಾಗಿತ್ತು. ಆದರೆ, ಸೌದಿ ಮರುಭೂಮಿಯ ಮಧ್ಯದಲ್ಲಿ ಆಡುಗಳನ್ನು ಮೇಯಿಸುವ ಗುಲಾಮಗಿರಿಯ ಕೆಲಸಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆ ಏನು ಬಂತು? ಅವನು ಕೊನೆಗೂ ತನ್ನನ್ನು ತಾನು ಹೇಗೆ ಬಂಧಮುಕ್ತಗೊಳಿಸಿಕೊಳ್ಳುತ್ತಾನೆ ಎನ್ನುವುದೊಂದು ದೊಡ್ಡ ಹೋರಾಟದ ಕಥೆ. ಅವನು ಸೆರೆಮನೆ ಸೇರಿ, ಅಲ್ಲಿಂದ ತಪ್ಪಿಸಿಕೊಳ್ಳುವ ಸಾಹಸ ಈ ಚಿತ್ರದಲ್ಲಿ ಇರಲಿದೆ ಎನ್ನಲಾಗಿದೆ.