Site icon Vistara News

Aamir Khan: ಕಂಬ್ಯಾಕ್‌ ಪ್ರಕಟಿಸಿದ ಆಮೀರ್‌ ಖಾನ್‌; ಆದರೆ ನಾಯಕನಾಗಿ ಅಲ್ಲ

aamir khan

aamir khan

ಮುಂಬೈ: ಸತತ ಸೋಲಿನಿಂದ ಕಂಗೆಟ್ಟಿರುವ ಆಮೀರ್‌ ಖಾನ್‌ (Aamir Khan) ಕೆಲವು ಸಮಯಗಳಿಂದ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸದ್ಯ ಅವರ ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದು ಹೊರಬಂದಿದ್ದು, ಹೊಸ ಚಿತ್ರದೊಂದಿಗೆ ಮರಳಿ ಬಂದಿದ್ದಾರೆ. ಆದರೆ ಈ ಬಾರಿ ಅವರು ನಾಯಕನಾಗಿ ಅಲ್ಲ ಬದಲಾಗಿ ನಿರ್ಮಾಪಕನಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಜ್‌ ಕುಮಾರ್‌ ಸಂತೋಷಿ ನಿರ್ದೇಶನದ ಮುಂದಿನ ಚಿತ್ರವನ್ನು ಅಮೀರ್‌ ಖಾನ್‌ ನಿರ್ಮಿಸಲಿದ್ದು, ಚಿತ್ರಕ್ಕೆ ಲಾಹೋರ್‌ 1947 (Lahore 1947) ಟೈಟಲ್‌ ಇಡಲಾಗಿದೆ. ಗದರ್‌ 2 (Gadar 2) ಮೂಲಕ ತಮ್ಮ ಖದರ್‌ ತೋರಿದ ಸನ್ನಿ ಡಿಯೋಲ್‌ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಇಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿರುವ ಆಮೀರ್‌ ಖಾನ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ʼʼನಾನು ಮತ್ತು ಆಮೀರ್‌ ಖಾನ್‌ ಪ್ರೊಡಕ್ಷನ್ಸ್‌ (AKP) ಟೀಮ್‌ನ ಎಲ್ಲರೂ ನಮ್ಮ ಮುಂದಿನ ಪ್ರಾಜೆಕ್ಟ್‌ ಘೋಷಿಸಲು ಉತ್ಸುಕರಾಗಿದ್ದೇವೆ. ಸನ್ನಿ ಡಿಯೋಲ್‌ ನಾಯಕನಾಗಿ ನಟಿಸುತ್ತಿರುವ, ನನ್ನ ನೇಚ್ಚಿನ ನಿರ್ದೇಶಕ ರಾಜ್‌ ಕುಮಾರ್‌ ಸಂತೋಷಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರಕ್ಕೆ ಲಾಹೋರ್‌ 1947 ಶೀರ್ಷಿಕೆ ಇಟ್ಟಿದ್ದೇವೆ. ಪ್ರತಿಭಾವಂತರಾದ ಸನ್ನಿ ಡಿಯೋಲ್‌ ಮತ್ತು ರಾಜ್‌ ಕುಮಾರ್‌ ಸಂತೋಷಿ ಒಂದಾಗುತ್ತಿರುವುದು ನೋಡಲು ಖುಷಿ ಎನಿಸುತ್ತಿದೆ. ಈ ನಮ್ಮ ಪಯಣಕ್ಕೆ ನಿಮ್ಮ ಆಶೀರ್ವಾದ ಬೇಕುʼʼ ಎಂದು ಬರೆದುಕೊಂಡಿದ್ದಾರೆ.

ಖುಷಿ ಹಂಚಿಕೊಂಡ ಫ್ಯಾನ್ಸ್‌

ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಈಗಾಗಲೇ ನಿರೀಕ್ಷೆ ಗರಿಗೆದರಿದೆ. ʼʼವಾವ್‌! ಇದು ಖಂಡಿತಾ ಬ್ಲಾಕ್‌ ಬ್ಲಸ್ಟರ್‌ ಚಿತ್ರವಾಗಲಿದೆ. ಇದಕ್ಕಾಗಿ ಕಾಯುತ್ತಿದ್ದೇವೆʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬರು, ʼʼಇದು ಉತ್ತಮ ವಿಚಾರ. ಇದು 1,000 ಕೋಟಿ ರೂ. ಕ್ಲಬ್‌ ಸೇರಲಿದೆʼʼ ಎಂದು ಭವಿಷ್ಯ ನುಡಿದಿದ್ದಾರೆ. ಕೆಲವರು ಇದು ಖುಷ್ವಂತ್‌ ಸಿಂಗ್‌ ಅವರ ಕಾದಂಬರಿ ʼಟ್ರೈನ್‌ ಟು ಪಾಕಿಸ್ತಾನ್‌ʼ ಆಧಾರದಲ್ಲಿ ತಯಾರಾಗಲಿದೆ ಎಂದು ಊಹಿಸಿದ್ದಾರೆ. ಆದರೆ ಸದ್ಯಕ್ಕೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.

ಕಳೆದ ವರ್ಷ ತೆರೆಕಂಡ ಆಮೀರ್‌ ಖಾನ್‌ ಅಭಿನಯ್‌ ಬಹು ನಿರೀಕ್ಷಿತ ಚಿತ್ರ ʼಲಾಲ್‌ ಸಿಂಗ್‌ ಛಡ್ಡಾʼ ಬಾಕ್ಸ್‌ ಆಫೀಸ್‌ನಲ್ಲಿ ಸೋತು ಹೋಗಿತ್ತು. ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದಾಗ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ಅದ್ವೈತ್‌ ಚಂದನ್‌ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಕರೀನಾ ಕಪೂರ್‌ ನಟಿಸಿದ್ದರು. ಹಾಲಿವುಡ್‌ನ ಹಿಟ್‌ ಚಿತ್ರ ಟಾಮ್‌ ಹಾಂಕ್ಸ್‌ನ ಫಾರೆಸ್ಟ್‌ ಗಂಪ್‌ನ ರಿಮೇಕ್‌ ಇದಾಗಿತ್ತು. ಅದರ ಮೊದಲು 2018ರಲ್ಲಿ ತೆರೆಕಂಡ ʼಥಗ್ಸ್‌ ಆಫ್‌ ಹಿಂದೂಸ್ಥಾನ್‌ʼ ಸಿನಿಮಾವೂ ಫ್ಲಾಪ್‌ ಪಟ್ಟಿಗೆ ಸೇರಿತ್ತು. ವಿಜಯ್‌ ಕೃಷ್ಣ ಆಚಾರ್ಯ ನಿರ್ದೇಶನದ ಈ ಚಿತ್ರದಲ್ಲಿ ಘಟಾನುಘಟಿಗಳಾದ ಅಮಿತಾಬ್‌ ಬಚ್ಚನ್‌, ಕತ್ರೀನಾ ಖೈಫ್‌ ಮತ್ತಿತರರು ನಟಿಸಿದ್ದರೂ ಪ್ರಯೋಜನವಾಗಿರಲಿಲ್ಲ.

ಇದನ್ನೂ ಓದಿ: Gadar 2: 24 ದಿನಗಳಲ್ಲಿ ಪಠಾಣ್‌, ಬಾಹುಬಲಿ 2 ದಾಖಲೆ ಮುರಿದ ಗದರ್ 2!

ಗೆಲುವಿನ ಯಶಸ್ಸಿನಲ್ಲಿ ಸನ್ನಿ ಡಿಯೋಲ್‌

ಇತ್ತ ಸನ್ನಿ ಡಿಯೋಲ್‌ ಸದ್ಯ ʼಗದರ್‌ 2ʼ ಸೂಪರ್‌ ಹಿಟ್‌ ಆದ ಖುಷಿಯಲ್ಲಿದ್ದಾರೆ. ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಈ ಚಿತ್ರ 525 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್‌ ಮಾಡಿ ಸುದ್ದಿಯಲ್ಲಿದೆ. ಅಮೀರ್‌ ಖಾನ್‌ ಮತ್ತು ಸನ್ನಿ ಡಿಯೋಲ್‌ ಈ ಮೊದಲು ಒಟ್ಟಿಗೆ ಕೆಲಸ ಮಾಡಿಲ್ಲ. ಹೀಗಾಗಿ ಈ ಇಬ್ಬರು ದಿಗ್ಗಜರ ಸಮ್ಮಿಲನ ನಿರೀಕ್ಷೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Exit mobile version