Site icon Vistara News

Aashiqui Kannada Film | ಪ್ರೇಮಕಾವ್ಯ ಹೊತ್ತು ಬಂದ ಆಶಿಕಿ ಟ್ರೈಲರ್‌: ದಸರಾಕ್ಕೆ ತೆರೆಗೆ?

Aashiqui Kannada Film

ಬೆಂಗಳೂರು: ‘ಕ್ವಾಟ್ಲೆ’ ಸಿನಿಮಾ ಮೂಲಕ ‌ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಜೆ. ಚಂದ್ರಕಲಾ (JCK) ಅವರ ಸಾರಥ್ಯದಲ್ಲಿ ಆಶಿಕಿ ಸಿನಿಮಾ (Aashiqui Kannada Film) ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಸೆನ್ಸಾರ್ ಪಾಸಾಗಿರುವ ಈ ಚಿತ್ರದ ಟ್ರೈಲರ್‌ ಅನಾವರಣಗೊಂಡಿದೆ.

ಪ್ರೇಮಕಾವ್ಯ ಹೊತ್ತು ತಂದಿರುವ ಟ್ರೈಲರ್‌ನಲ್ಲಿ ನಾಯಕಿ ಮತ್ತು ನಾಯಕರ ನಡುವಿನ ಬಾಂಧವ್ಯ, ತುಂಟಾಟಗಳ ಜತೆಗೆ ಸಂಬಂಧದ ತಿರುಳಿನ ಮಹತ್ವದ ಬಗ್ಗೆ ಹೇಳಲಾಗಿದೆ. ಜತೆಗೆ ಪ್ರಕೃತಿ ಸೌಂದರ್ಯವನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ.

ಸೆ.14ಕ್ಕೆ ಆಶಿಕಿ ಹಾಡುಗಳ ಮೆರವಣಿಗೆ
ಟ್ರೈಲರ್‌ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿರುವ ಆಶಿಕಿ ಬಳಗ ಸೆ.14ರಂದು ಆಡಿಯೋ ಬಿಡುಗಡೆಗೆ ಮಾಡಲು ತಯಾರಿ ನಡೆಸಿದೆ. ಈಗಾಗಲೇ ಚಿತ್ರದ ಹಾಡಿನ ತುಣುಕುಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಮ್ಯೂಸಿಕಲ್ ಲವ್ ಸ್ಟೋರಿ ಜತೆಗೆ ತ್ರಿಕೋನ ಪ್ರೇಮಕಥೆ ಹೊತ್ತ ‘ಆಶಿಕಿ’ ಚಿತ್ರದಲ್ಲಿ ಸಾಕಷ್ಟು ವರ್ಷ ಮಾಧ್ಯಮ ರಂಗದಲ್ಲಿ ಸಿನಿಮಾ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಸಂದೀಪ್ ಕುಮಾರ್ ಮತ್ತು ಪ್ರದೀಪ್ ರಾಜ್ ನಾಯಕರಾಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಐಶ್ವರ್ಯ ಸಿಂಧೋಗಿ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ | Kannada Film | ಕಂಬ್ಳಿಹುಳ ಮೊದಲ ಹಾಡು ಔಟ್‌: ಮೋಡಿ ಮಾಡಿತು ಯಾಕೀ ನಗು ಹಾಡು!

ಗುರುಪ್ರಸಾದ್, ಸುಚೇಂದ್ರ ಪ್ರಸಾದ್, ತುಳಸಿ ಶಿವಮಣಿ, ಪ್ರಮೋದಿನಿ ಸೇರಿದಂತೆ ಹಲವು ಹಿರಿಯರ ತಾರಾಬಳಗ ಚಿತ್ರದಲ್ಲಿದೆ. ಒಟ್ಟು ಏಳು ಹಾಡುಗಳಿದ್ದು ಪ್ರತಿ ಹಾಡುಗಳು ವಿಭಿನ್ನವಾಗಿ ಮೂಡಿಬಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಕುಲು ಮನಾಲಿ, ಕೇರಳ, ಆಂಧ್ರಪ್ರದೇಶ, ಪಂಜಾಬ್, ಚಂಡೀಗಡ, ಚಿಕ್ಕಮಗಳೂರು, ಆಗ್ರಾ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಶ್ರೀಲಕ್ಷ್ಮೀ ನರಸಿಂಹ ಮೂವೀಸ್‌ ಬ್ಯಾನರ್ ಅಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಜಿ. ಚಂದ್ರಶೇಖರ್ ಬಂಡವಾಳ ಹೂಡಿದ್ದಾರೆ. ರಾಜರತ್ನ, ನಿತಿನ್ ಅಪ್ಪಿ ಛಾಯಾಗ್ರಹಣವಿದ್ದು, ಲಿಯೋ ಸಂಗೀತ ನಿರ್ದೇಶಕರಾಗಿದ್ದಾರೆ. ನಾಗೇಂದ್ರ ಅರಸ್ ಅವರ ಸಂಕಲನ ಈ ಚಿತ್ರಕ್ಕಿದೆ. ಇತ್ತೀಚೆಗಷ್ಟೆ ಸೆನ್ಸಾರ್ ಮಂಡಳಿಯಿಂದ ಅನುಮತಿ ದೊರೆತಿದ್ದು, ಸಿನಿಮಾ ದಸರಾ ವೇಳೆ ತೆರೆಗೆ ಬರಲು ಸಜ್ಜಾಗಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

ಇದನ್ನೂ ಓದಿ | Monsoon Raaga | ಡಾಲಿ- ರಚಿತಾ ಅಭಿನಯದ ಮಾನ್ಸೂನ್ ರಾಗ ರಿಲೀಸ್ ಡೇಟ್ ಅನೌನ್ಸ್!

Exit mobile version