ಬೆಂಗಳೂರು: ಯಾವುದೇ ಸಿನಿಮಾವನ್ನಾದರೂ (Kannada New Movie) ಪ್ರೇಕ್ಷಕರ ಕುತೂಹಲದ ಪರೀದಿಗೆ ಕರೆದೊಯ್ಯುವ ತಾಕತ್ತು ಹಾಡುಗಳಿಗಿದೆ. ಈ ಕಾರಣದಿಂದಲೇ ಹಾಡುಗಳನ್ನು ಸಿನಿಮಾವೊಂದರ ಕರೆಯೋಲೆ ಎಂದು ಕರೆಯುವುದು. ಈ ಕಾರಣದಿಂದಾಗಿಯೇ ಸಿನಿಮಾದಷ್ಟೇ ಹಾಡುಗಳಿಗೂ ಪ್ರಾಶಸ್ತ್ಯ ಕೊಟ್ಟು, ಚೆಂದಗೆ ರೂಪಿಸುವ ಪರಿಪಾಠವಿದೆ. ಈ ಹಾದಿಯಲ್ಲಿ ಕೆಲ ಚಿತ್ರಗಳು ಸಿದ್ಧಸೂತ್ರಗಳ ಜನಪ್ರಿಯ ಹಾಡಿಯಲ್ಲಿ ಹೊರಟರೆ, ಮತ್ತೆ ಕೆಲ ಸಿನಿಮಾಗಳದ್ದು ಭಿನ್ನ ಪಥ. ಈ ವಿಚಾರದಲ್ಲಿ ವಿಜಯ್ ಕಾರ್ತಿಕ್ ನಿರ್ದೇಶನದ ‘ಎಬಿ ಪಾಸಿಟಿವ್’ ಚಿತ್ರ ಎರಡನೇ ಸಾಲಿಗೆ ಸೇರಲ್ಪಡುವ ಸಿನಿಮಾ. ಯಾಕೆಂದರೆ, ಅದರ ಒಂದೊಂದು ಹಾಡುಗಳೂ ಭಿನ್ನವಾಗಿವೆ. ಅಂಥಾದ್ದೊಂದು ವಿಶೇಷವಾದ ಘಮಲಿನಿಂದ ನಳನಳಿಸುವ ‘ಎಬಿ ಪಾಸಿಟಿವ್’ ಮತ್ತೊಂದು ಹಾಡೀಗ ಬಿಡುಗಡೆಗೊಂಡಿದೆ.
ತಿಳಿಯದ ದಾರಿ ಎಂಬ ಹಾಡಿನ ಮೂಲಕ ಪ್ರೇಕ್ಷಕರನ್ನು ಆವರಿಸಿರುವ ‘ಎಬಿ ಪಾಸಿಟಿವ್’ ಸಿನಿಮಾ ಅಂಗಳದಿಂದ `ಅಪರೂಪ ನೀ’ ಎಂಬ ಮೆಲೋಡಿ ಹಾಡು ಬಿಡುಗಡೆಯಾಗಿದೆ. ಅನುರಾಮ್ ಜಾಕ್ಸ್ ಸಾಹಿತ್ಯ ಬರೆದಿರುವ ಸಿಂಗಿಂಗ್ ಮಸ್ತಿಗೆ ಅನಿರುದ್ಧ್ ಶಾಸ್ತ್ರಿ ಹಾಗೂ ಅನುರಾಧಾ ಭಟ್ ಧ್ವನಿಯಾಗಿದ್ದಾರೆ. ವಿಜಯ್ ಕಾರ್ತಿಕ್ ಹಾಗೂ ಅದಿತಿ ರಾವ್ ಅಪರೂಪ ನೀ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸೇಡು, ಮೆಲೋಡಿ, ಸ್ನೇಹದ ದರ್ಬಾರ್ ಹಾಗೂ ರಾಮಭಂಟ ಸಿನಿಮಾದಲ್ಲಿ ನಟಿಸಿರುವ ವಿಜಯ್ ಕಾರ್ತಿಕ್, ಎಬಿ ಪಾಸಿಟಿವ್ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರ್ಕರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಎಬಿ ಪಾಸಿಟಿವ್ ಸಿನಿಮಾಗೆ ವಿಜಯ್ ಕಾರ್ತಿಕ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿ ನಟಿಸಿದ್ದಾರೆ. ಅದಿತಿ ರಾವ್, ರಚನ ದಶರಥ್, ರೋಹಿತ್ ಶಣ್ಮುಖಪ್ಪ , ಆಶಾ ಸುಜಯ್, ಸುಲಾಕ್ಷ್ಯ ಕೈರಾ ಸಂದೀಪ್ ಗೌಡ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಸೈಕಾಲಜಿ ಕಥಾಹಂದರ ಹೊಂದಿರುವ ಎಬಿ ಪಾಸಿಟಿವ್ ಸಿನಿಮಾವನ್ನು ಚಿಕ್ಕಮಗಳೂರು, ಬೆಂಗಳೂರು, ಗೋಕರ್ಣ, ಕುಂದಾಪುರ, ಹೊನ್ನಾವರ ಸುತ್ತಮುತ್ತ ಚಿತ್ರೀಕರಿಸಲಾಗಿದೆ.
ಇದನ್ನೂ ಓದಿ: Kannada New Movie: ʻಸೋಮುʼ ಅಂಗಳದಿಂದ ತೇಲಿ ಬಂತು ಚೆಂದದ ಹಾಡು!
ಕೌಶಲ್ಯ ವಿಜಯಸರಧಿ ನಿರ್ಮಾಣ ಮಾಡಿದ್ದು, ಸಂಪದ ಕ್ರಿಯೇಷನ್ ಹಾಗೂ ಲಯನ್ ಕುಮಾರಸ್ವಾಮಿ ಸಹ ನಿರ್ಮಾಪಕರಾಗಿದ್ದು, ವರುಣ್ ರಾಘವೇಂದ್ರ ಕಾರ್ಯಕಾರಿ ನಿರ್ಮಾಪಕ ಜವಾಬ್ದಾರಿ ಹೊತ್ತುಕೊಂಡಿದ್ದು, ಮಂಜು ಕ್ಯಾಮೆರಾ, ವಿನಯ್ ಕುಮಾರ್ ಕೂರ್ಗ್ ಸಂಕಲನ, ಸಂತೋಷ್ ಕುಮಾರ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ರೆಡಿಯಾಗುತ್ತಿರುವ ಎಬಿ ಪಾಸಿಟಿವ್ ಸಿನಿಮಾ ತಯಾರಾಗಿದೆ. ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಬರಲಿದೆ.