ಬೆಂಗಳೂರು: ಸ್ಯಾಂಡಲ್‌ವುಡ್ ನಟ ಅಭಿಷೇಕ್ ಅಂಬರೀಷ್ (Abhishek Ambareesh) ಅವರಿಗಿಂದು (ಅಕ್ಟೋಬರ್ 3) ಹುಟ್ಟುಹಬ್ಬದ ಸಂಭ್ರಮ. ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾರಣ ಅವರ ಜನ್ಮ ದಿನ ಈ ಬಾರಿ ಬಹಳ ವಿಶೇಷ. ಆದರೆ ಅವರು ಅದ್ಧೂರಿ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಅವರು ಮೊದಲೇ ಮಾಹಿತಿ ನೀಡಿದ್ದಾರೆ. ಬಹಳ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಅವರು ತಂದೆ ಅಂಬರೀಷ್ (Ambareesh) ಫೋಟೋಗೆ ಪೂಜೆ ಮಾಡುತ್ತಾ ಭಾವುಕರಾದರು.
ಅಭಿಷೇಕ್ ಅವರ ಮನೆ ಸಮೀಪ ಅಭಿಮಾನಿಗಳು ನೆರೆದಿದ್ದರು. ಎಲ್ಲರ ಜತೆ ಅವರು ಫೋಟೋ ತೆಗೆಸಿಕೊಂಡಿದ್ದಾರೆ. ವಿವಿಧೆಡೆ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ.
ಈ ವರ್ಷ ಬರಗಾಲದ ಛಾಯೆ ಆವರಿಸಿಕೊಂಡಿರುವುದರಿಂದ ಅದ್ಧೂರಿ ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಅಭಿಷೇಕ್ ಈ ಹಿಂದೆಯೇ ತಿಳಿಸಿದ್ದರು. ಆದರೆ ಮನೆ ಬಳಿಗೆ ಅಭಿಮಾನಿಗಳನ್ನು ಬರಿಗೈಲಿ ಕಳುಹಿಸುವುದಿಲ್ಲ ಎಂದೂ ಹೇಳಿದ್ದರು. ಹೀಗಾಗಿ ಅಭಿಮಾನಿಗಳ ಜತೆ ಫೋಟೊ ತೆಗೆಸಿಕೊಂಡು ಅವರನ್ನು ಬೀಳ್ಕೊಟ್ಟಿದ್ದಾರೆ.
ಶುಭ ಹಾರೈಸಿದ ʼಬ್ಯಾಡ್ ಮ್ಯಾನರ್ಸ್ʼ ಚಿತ್ರತಂಡ
ಸದ್ಯ ಅಭಿಷೇಕ್ ಅಂಬರೀಷ್ ʼಬ್ಯಾಡ್ ಮ್ಯಾನರ್ಸ್ʼ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ದುನಿಯಾ ಸೂರಿ ಈ ಆ್ಯಕ್ಷನ್ ಥ್ರಿಲ್ಲರ್ ಅನ್ನು ನಿರ್ದೇಶಿಸುತ್ತಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಅಭಿಷೇಕ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಜನ್ಮದಿನವೂ ಇಂದೇ (ಅಕ್ಟೋಬರ್ 3). ಹೀಗಾಗಿ ʼಬ್ಯಾಡ್ ಮ್ಯಾನರ್ಸ್ʼ ಚಿತ್ರತಂಡ ಸಿನಿಮಾದ ಹೊಸ ಹಾಡನ್ನು ಬಿಡುಗಡೆ ಮಾಡಿ ಇಬ್ಬರಿಗೂ ಶುಭ ಹಾರೈಸಿದೆ. ಚರಣ್ ರಾಜ್ ಸಂಗೀತ ನೀಡಿರುವ ʼಆ್ಯಮ್ ಇನ್ ಲವ್ʼ ಹಾಡು ಈಗಾಗಲೇ ಅಭಿಮಾನಿಗಳ ಮನಸ್ಸು ಗೆದ್ದಿದೆ.
2019ರಲ್ಲಿ ಪದಾರ್ಪಣೆ ಮಾಡಿದ್ದ ಅಭಿಷೇಕ್
ಅಭಿಷೇಕ್ ಅಂಬರೀಷ್ 2019ರಲ್ಲಿ ತೆರೆಕಂಡ ʼಅಮರ್ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ನಾಗಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ತಾನ್ಯಾ ಹೋಪ್ ನಟಿಸಿದ್ದರು. ಅದಾಗಿ ಸುಮಾರು 4 ವರ್ಷ ಕಳೆದರೂ ಅಭಿಷೇಕ್ ಅಭಿನಯದ ಬೇರೆ ಚಿತ್ರ ತೆರೆ ಕಂಡಿಲ್ಲ. ಆದರೂ ಅವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿರುವುದು ವಿಶೇಷ. ಸದ್ಯ ಅವರು ʼಬ್ಯಾಡ್ ಮ್ಯಾನರ್ಸ್ʼ ಸಿನಿಮಾ ಜತೆಗೆ ಎಸ್. ಕೃಷ್ಣ ನಿರ್ದೇಶನದ ʼಕಾಳಿʼ ಮತ್ತು ಮಹೇಶ್ ಕುಮಾರ್ ಆ್ಯಕ್ಷನ್ ಕಟ್ ಹೇಳಲಿರುವ ಶೀರ್ಷಿಕೆ ಅಂತಿಮವಾಗದ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: Kiccha Sudeep: ಅಭಿಷೇಕ್ ಅಂಬರೀಷ್ಗೆ ಭರ್ಜರಿ ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್!
ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದ ಅಭಿಷೇಕ್ ದಂಪತಿ
ಈ ವರ್ಷ ಅವಿವಾ ಬಿದ್ದಪ್ಪ ಅವರನ್ನು ವಿವಾಹವಾವಿದ್ದ ಅಭಿಷೇಕ್ ಇತ್ತೀಚೆಗೆ ಮಳೆ ಬರಲಿ ಎಂದು ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಕಾವೇರಿ ಉಗಮ ಸ್ಥಾನ ತಲಕಾಡಿನಲ್ಲಿ ಸೆ. 30ರಂದು ಅಭಿಷೇಕ್, ಪತ್ನಿ ಅವಿವಾ ಜತೆ ತಾಯಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಕಾವೇರಿ ನದಿ ಪಾತ್ರದಲ್ಲಿ ಮಳೆಯಾಗಿ ಕಾವೇರಿ ವಿವಾದ ಬಗೆಹರಿಯಲೆಂದು ಪ್ರಾರ್ಥಿಸಿದ್ದರು. ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಹಸರು ಶಾಲು ಹೊದ್ದು ಪೂಜೆ ಸಲ್ಲಿಸಿ ಅಭಿಷೇಕ್ ಗಮನ ಸೆಳೆದಿದ್ದರು.