ಬೆಂಗಳೂರು: ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh Wedding) ಹಾಗೂ ಅವಿವ ಬಿಡಪ ಮದುವೆ ಇನ್ನು ಎರಡೇ ದಿನ ಬಾಕಿ ಇದೆ. ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಈಗಾಗಲೇ ಅರಿಶಿಣ ಶಾಸ್ತ್ರ ನೆರವೇರಿದ್ದು, ಇದೀಗ ಮೆಹಂದಿಯ ಫೋಟೊವನ್ನು ಅಭಿಷೇಕ್ ಅಂಬರೀಶ್ ಶೇರ್ ಮಾಡಿಕೊಂಡಿದ್ದಾರೆ. ಅಭಿಷೇಕ್ ಅಂಬರೀಶ್ ಅವರ ಕೈಯಲ್ಲಿ ರೆಬೆಲ್, ಸುಮಾ, ಮಂಡ್ಯ ಎಂಬ ಹೆಸರುಗಳನ್ನು ಪ್ರೀತಿಯಿಂದ ಬರೆಸಿಕೊಂಡಿದ್ದಾರೆ. ಮೆಹೆಂದಿ ಶಾಸ್ತ್ರದಲ್ಲಿ ಸೆರೆ ಹಿಡಿದ ಫೋಟೊ ಇದಾಗಿದೆ.
ರೆಬೆಲ್ ಎಂದರೆ ಅಂಬರೀಶ್. ತಂದೆಯ ಬಗ್ಗೆ ಅಭಿಷೇಕ್ಗೆ ಅಪಾರ ಪ್ರೀತಿ ಇದೆ. ತಾಯಿ ಸುಮಲತಾ ಬಗ್ಗೆಯೂ ಅವರಿಗೆ ಅಪಾರ ಪ್ರೀತಿ ಇದೆ.2022ರ ಡಿಸೆಂಬರ್ 11ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅಭಿಷೇಕ್ ಹಾಗೂ ಅವಿವ ಬಿಡಪ (Aviva Bidapa) ನಿಶ್ಚಿತಾರ್ಥ ನೆರವೇರಿತ್ತು. ಕುಟುಂಬದವರು, ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ಈ ಶುಭ ಕಾರ್ಯ ನಡೆದಿತ್ತು. ಜೂನ್ 4ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ.
ಇದನ್ನೂ ಓದಿ: Abhishek Ambareesh Wedding: ಅರಿಶಿಣ ಶಾಸ್ತ್ರದಲ್ಲಿ ಅಭಿಷೇಕ್ ಅಂಬರೀಶ್; ಬೆಳಕಿನಿಂದ ಅಲಂಕಾರಗೊಂಡ ʻಅಂಬಿ ಮನೆʼ
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಆಗಿರುವ ಅವಿವ ಬಿಡಪ (Aviva Bidapa) ಹಾಗೂ ಅಭಿಷೇಕ್ ಅಂಬರೀಷ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು. ಪರಿಚಯ ಪ್ರೀತಿಗೆ ತಿರುಗಿತು. ಕುಟುಂಬದ ಒಪ್ಪಿಗೆ ಪಡೆದು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಮದುವೆ ಆಗುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಅಭಿಷೇಕ್ ಮತ್ತು ಅವಿವ ಬಿಡಪ ಪ್ರೀತಿಸುತ್ತಿದ್ದರು. ಅವಿವ ಬಿಡಪ ಫ್ಯಾಷನ್ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಸ್ವಿಮ್ ಸೂಟ್ ಬ್ರ್ಯಾಂಡ್‌ನ ಲಾಂಚ್ ಮಾಡಿದ್ದಾರೆ.