ಬೆಂಗಳೂರು: ಇತ್ತೀಚೆಗೆ ನಡೆದ ಅಭಿಷೇಕ್ ಅಂಬರೀಶ್ – ಅವಿವಾ ಬಿಡಪ ಮದುವೆಗೆ ಪ್ರಧಾನಿ, ರಾಷ್ಟ್ರಪತಿ, ಗೃಹ ಸಚಿವರು ಸೇರಿದಂತೆ ಗಣ್ಯ ರಾಜಕೀಯ ಮುಖಂಡರು ಶುಭ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವ ಜೋಡಿಗೆ ಪತ್ರ ಬರೆಯುವುದರ ಮೂಲಕ ತಮ್ಮ ಶುಭಾಶಯ ತಿಳಿಸಿದ್ದಾರೆ. ʼʼನವಜೋಡಿಯ ದಾಂಪತ್ಯ ಸುಖಕರವಾಗಿರಲಿʼʼ ಎಂದು ಗಣ್ಯರು ಹಾರೈಸಿದ್ದು, ಈ ಪತ್ರಗಳನ್ನು ಹಾಗೂ ಮಾಹಿತಿಯನ್ನು ಸುಮಲತಾ ಅಂಬರೀಶ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ.
ಮದುವೆಗೆ ಮುನ್ನ ಸುಮಲತಾ ಮತ್ತು ಅಭಿಷೇಕ್ ಅವರು ಸ್ವತಃ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಹಾಗೂ ಗೃಹ ಸಚಿವ ಶಾ ಅವರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದ್ದರು.
ಅಭಿಷೇಕ್ ಅಂಬರೀಶ್ ಮತ್ತು ಅವಿವ ಬಿಡಪ ಅವರ ಮದುವೆ ಹಾಗೂ ಆರತಕ್ಷತೆ ಕಾರ್ಯಕ್ರಮಗಳು ನಗರದ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಫಾರೂಕ್ ಅಬ್ದುಲ್ಲಾ ಸೇರಿ ಪ್ರಮುಖ ರಾಜಕೀಯ ನಾಯಕರು, ನಟರಾದ ರಜನಿಕಾಂತ್, ಚಿರಂಜೀವಿ, ಶತ್ರುಘ್ನ ಸಿನ್ಹಾ ಮುಂತಾದ ಚಿತ್ರರಂಗದ ಗಣ್ಯರು ಆಗಮಿಸಿ ನವದಂಪತಿಗೆ ಶುಭ ಹಾರೈಸಿದ್ದರು.
ಜೂ.16ರಂದು ಬೀಗರೂಟ
ಮಂಡ್ಯ ಜಿಲ್ಲೆಯ ಗಜ್ಜಲಗೆರೆಯಲ್ಲಿ ಅಭಿಷೇಕ್ -ಅವಿವಾ ಜೋಡಿಯ ಭರ್ಜರಿ ಬೀಗರೂಟ ಜೂನ್ 16ರಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ ಎಂದು ತಿಳಿದುಬಂದಿದೆ. ಸ್ಥಳೀಯರು, ಅಂಬಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ಅಂದಾಜು 1 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಪಕ್ಕಾ ನಾಟಿ ಸ್ಟೈಲ್‌ನಲ್ಲಿ ಬೀಗರೂಟ ಸಿದ್ಧವಾಗಲಿದೆ. ಮಂಡ್ಯದ ಬಾಣಸಿಗರಿಗೆ ಅಡುಗೆ ಸಿದ್ಧಪಡಿಸುವ ಜವಾಬ್ದಾರಿ ವಹಿಸಲಾಗಿದೆ. ಮಟನ್ ಕರಿ, ರಾಗಿ ಮುದ್ದೆ, ಬೋಟಿ ಗೊಜ್ಜು, ಕೈಮಾ, ಪಾಯಸ, ಚಿಕನ್ ಫ್ರೈ, ಗೀ ರೈಸ್, ಅನ್ನ ರಸಂ, ಬೀಡ, ಐಸ್‌ಕ್ರೀಂ ಊಟದ ಮೆನುವಿನಲ್ಲಿದೆ. ಬರೋಬ್ಬರಿ 7 ಟನ್ ಮಟನ್, 7 ಟನ್ ಚಿಕನ್ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Abhishek-Aviva: 7 ಟನ್ ಮಟನ್… 7 ಟನ್ ಚಿಕನ್! ಅಭಿಷೇಕ್- ಅವಿವ ಬೀಗರೂಟದ ಭೋಜನವಿದು