Site icon Vistara News

Nandamuri Balakrishna | ಬಾಲಯ್ಯ ಜತೆ ನಟಿಸುವುದು ಸಣ್ಣ ವಿಷಯವೇನಲ್ಲ: ದುನಿಯಾ ವಿಜಯ್‌

Nandamuri Balakrishna

ಬೆಂಗಳೂರು : ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ ಮುಂಬರುವ ಚಿತ್ರ ʻವೀರಸಿಂಹ ರೆಡ್ಡಿʼ ಸಂಕ್ರಾಂತಿಗೆ ಬಿಡುಗಡೆಯಾಗಲಿದ್ದು, ಕನ್ನಡದ ಸ್ಟಾರ್ ನಟ ದುನಿಯಾ ವಿಜಯ್‌ ವಿಲನ್‌ ಆಗಿ ನಟಿಸಿದ್ದಾರೆ. ಚಿತ್ರ ಇದೇ ತಿಂಗಳ 12ರಂದು ಬಿಡುಗಡೆಯಾಗಲಿದೆ. ಗೋಪಿಚಂದ್ ಮಲಿನೇನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಾಲಯ್ಯ ಅವರ ಚಿತ್ರದಲ್ಲಿ ನನಗೆ ಅವಕಾಶ ಸಿಕ್ಕಿದ್ದು, ನನ್ನ ಅದೃಷ್ಟ ಎಂದು ಸಂದರ್ಶನವೊಂದರಲ್ಲಿ ದುನಿಯಾ ವಿಜಯ್‌ ಹೇಳಿಕೊಂಡಿದ್ದಾರೆ.

ಇದರಲ್ಲಿ ಶ್ರುತಿ ಹಾಸನ್, ವರಲಕ್ಷ್ಮಿ ಶರತ್‌ಕುಮಾರ್ ಕೂಡ ನಟಿಸಿದ್ದಾರೆ. ಸಂದರ್ಶನವೊಂದರಲ್ಲಿ ದುನಿಯಾ ವಿಜಯ್‌ ಮಾತನಾಡಿ ʻʻನಿರ್ದೇಶಕ ಗೋಪಿಚಂದ್ ಮಲಿನೇನಿ ಅವರು ನನ್ನನ್ನು ಮುಸಲಿ ಮಡುಗು ಪ್ರತಾಪ್ ರೆಡ್ಡಿ ಪಾತ್ರಕ್ಕೆ ಕರೆದಿರುವುದು ನನಗೆ ಖಂಡಿತವಾಗಿ ಆಶ್ಚರ್ಯವಾಯಿತು. ನಿಜವಾಗಿಯೂ ಸಂತೋಷಪಟ್ಟಿದ್ದೇನೆ. ಬಾಲಯ್ಯ ಜತೆ ನಟಿಸುವುದು ಸಣ್ಣ ವಿಷಯವೇನಲ್ಲ” ಎಂದು ಹೇಳಿದರು.

ಇದನ್ನೂ ಓದಿ | Nandamuri Balakrishna | ಅದ್ಧೂರಿಯಾಗಿ ಸೆಟ್ಟೇರಿದೆ ನಂದಮೂರಿ ಬಾಲಕೃಷ್ಣ 108ನೇ ಚಿತ್ರ: ಶ್ರೀಲೀಲಾ ನಾಯಕಿ!

ನಂದಮೂರಿ ಬಾಲಕೃಷ್ಣ ವರ್ತಿಸುವ ರೀತಿ ಆಶ್ಚರ್ಯವಾಯಿತು
ದುನಿಯಾ ವಿಜಯ್‌ ಮಾತು ಮುಂದುವರಿಸಿ, ʻʻಬಾಲಯ್ಯ ಅವರು ಉತ್ತಮ ಮತ್ತು ಒಳ್ಳೆಯ ಮನುಷ್ಯ. ಅವರು ವರ್ತಿಸುವ ರೀತಿ ಮತ್ತು ನಟರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ನೋಡಿದಾಗ ತುಂಬಾ ಆಶ್ಚರ್ಯವಾಯಿತು. ಬಾಲಕೃಷ್ಣ ಅವರು ನನಗಿಂತ ದೊಡ್ಡ ಸ್ಟಾರ್. ಈ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದು ನನ್ನ ಅದೃಷ್ಟ. ಬಾಲಯ್ಯ, ನಿರ್ದೇಶಕ ಗೋಪಿಚಂದ್ ಮಲಿನೇನಿ ಮತ್ತು ಮೈತ್ರಿ ಮೂವಿ ಮೇಕರ್ಸ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಅವರೆಲ್ಲರ ಬಗ್ಗೆ ನನಗೆ ಅಪಾರ ಗೌರವವಿದೆʼʼ ಎಂದು ಸಲಗ ನಿರ್ದೇಶಕ ವಿಜಯ್‌ ಹೇಳಿದ್ದಾರೆ.

ಮುಸಲಿ ಮಡುಗು ಪ್ರತಾಪ್ ರೆಡ್ಡಿ ಪಾತ್ರ ಇಷ್ಟವಾಯಿತು
ಮುಸಲಿ ಮಡುಗು ಪ್ರತಾಪ್ ರೆಡ್ಡಿ ಪಾತ್ರವನ್ನು ದುನಿಯಾ ವಿಜಯ್ ನಿರ್ವಹಿಸಿದ್ದಾರೆ. ಈ ಬಗ್ಗೆ ನಟ ಮಾತನಾಡಿ ʻʻ ನಿರ್ದೇಶಕರ ಈ ಮಡುಗು ಪ್ರತಾಪ್ ರೆಡ್ಡಿ ಪಾತ್ರವನ್ನು ನಾನು ಇಷ್ಟಪಟ್ಟೆ. ಅವರ ವ್ಯಕ್ತಿತ್ವ ಮತ್ತು ನಡವಳಿಕೆಯನ್ನು ನಿರ್ದೇಶಕರು ಬರೆದ ರೀತಿ ನನಗೆ ತುಂಬ ಇಷ್ಟವಾಯಿತು. ಇದು ಗೋಪಿಚಂದ್ ಮಲಿನೇನಿ ಅವರ ವಿಶೇಷತೆ. ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಮಾಡಿದ ಸಣ್ಣ ನೆಗೆಟಿವ್ ಪಾತ್ರಗಳು ನನಗೆ ಸಹಾಯ ಮಾಡಿತು. ನಂತರದಲ್ಲಿ, ಸಹಜವಾಗಿ, ನಾನು ನಾಯಕನಾಗಿದ್ದೇನೆ ಮತ್ತು ಉಳಿದದ್ದು ಇತಿಹಾಸ. ಇದೆಲ್ಲವೂ ನನ್ನ ತಾಯಿಯ ಪ್ರಾರ್ಥನೆ ಮತ್ತು ದೇವರ ಕೃಪೆʼʼಎಂದರು.

ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತ ತೆಲುಗು ಚಿತ್ರಗಳಲ್ಲಿ ನಟಿಸುತ್ತೇನೆ
ʻವೀರ ಸಿಂಹ ರೆಡ್ಡಿʼ ಚಿತ್ರದಲ್ಲಿ ದುನಿಯಾ ವಿಜಯ್ ಅವರ ಸಾಹಸ ದೃಶ್ಯಗಳಿವೆ. ʻʻಚಿತ್ರದ ಚಿತ್ರೀಕರಣ ನನಗೆ ಇಷ್ಟವಾಯಿತು. ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತವಾಗಿ ತೆಲುಗು ಚಿತ್ರಗಳಲ್ಲಿ ಕೆಲಸ ಮಾಡುತ್ತೇನೆ. ನಟನ ಅಭಿನಯಕ್ಕೆ ಸ್ಕೋಪ್ ನೀಡುವ ಸ್ಕ್ರಿಪ್ಟ್‌ಗಳು ನನಗೆ ತುಂಬ ಇಷ್ಟ. ಸ್ಕ್ರಿಪ್ಟ್‌ಗಳು ನಾಯಕನ ಸಮಾನಾಂತರ ಟ್ರ್ಯಾಕ್ ಅನ್ನು ಹೊಂದಿರಬೇಕು. ಆಗ ಪ್ರೇಕ್ಷಕರು ಇಡೀ ಸಿನಿಮಾವನ್ನು ಹೆಚ್ಚು ಗಂಭೀರವಾಗಿ ನೋಡುತ್ತಾರೆ’ʼ ಎಂದರು.

ಇದನ್ನೂ ಓದಿ | Rashmika Mandanna | ರಶ್ಮಿಕಾ ಮಂದಣ್ಣ ನನ್ನ ಕ್ರಶ್‌: ನಟ ನಂದಮೂರಿ ಬಾಲಕೃಷ್ಣ

Exit mobile version