ಬೆಂಗಳೂರು: ಮೇ 29ರಂದು ರೆಬಲ್ ಸ್ಟಾರ್ ಅಂಬರೀಶ್ (Actor Ambareesh) ಅವರ ಜನುಮದಿನ. ಈ ಸಂದರ್ಭದಲ್ಲಿ ಅವರು ಅಭಿನಯಿಸಿದ್ದ ಸೂಪರ್ ಹಿಟ್ “ಅಂತ” (Anta)ಚಿತ್ರ ಮೇ 26ರಂದು ಮರು ಬಿಡುಗಡೆಯಾಗುತ್ತಿದೆ. 80ರ ದಶಕದಲ್ಲಿ ಅಂಬರೀಶ್ ಅವರು ಅಂತ ಸಿನಿಮಾದಲ್ಲಿ ಡಬಲ್ ರೋಲ್ ಮಾಡಿದ್ದರು. ವಿಲನ್ ಪಾತ್ರದ ಅಂಬಿ ರೋಲ್‌ನ ಕನ್ವರ್ ಲಾಲ್ ಡೈಲಾಗ್ ಈಗಲೂ ಅಚ್ಚ ಹಸಿರಾಗಿದೆ. ಈ ಸಿನಿಮಾ ಮೊದಲ ಬಾರಿಗೆ ಬಿಡುಗಡೆ ಆಗಿದ್ದು 1981ರಲ್ಲಿ, ಇದೀಗ ಅದೇ ಚಿತ್ರವನ್ನು ನೂತನ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆಯಾಗುತ್ತಿದೆ.
ಸಿನಿಮಾ ರೀ ರಿಲೀಸ್ ಮಾಡುವುದರ ಬಗ್ಗೆ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು. ರಾಜೇಂದ್ರಸಿಂಗ್ ಬಾಬು ಮಾತನಾಡಿ ʻʻಅಂತ ಸಿನಿಮಾ ರಿಲೀಸ್ ಆಗಿ 42 ವರ್ಷಗಳೇ ಕಳೆದಿವೆ. 1981ರಲ್ಲಿ ರಿಲೀಸ್ ಆಗಿದ್ದ “ಅಂತ” ಸಿನಿಮಾ ಈಗ ಮತ್ತೊಮ್ಮೆ ರಿಲೀಸ್ ಆಗುತ್ತಿದೆ. ಇದೇ ಮೇ 26 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ತಿಂಗಳ 29 ರಂದು ಅಂಬರೀಶ್ ಅವರ 71ನೇ ಜನ್ಮ ದಿನ ಇದೆ. ಈ ಹಿನ್ನೆಲೆಯಲ್ಲಿ ʻಅಂತʼ ಸಿನಿಮಾ ರೀ-ರಿಲೀಸ್ ಅಗುತ್ತಿದೆ. 20ಲಕ್ಷ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು. 40ಲಕ್ಷ ರೂ. ಗಳಿಕೆ ಕಂಡಿತ್ತು. ಸುಮಾರು 70 ಥಿಯೇಟರ್‌ಗಲಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಇದೆ .5.1 ಸೌಂಡ್ ವ್ಯವಸ್ಥೆಯನ್ನು ಅಳವಡಿಸಿ ಮತ್ತೆ ಬಿಡುಗಡೆ ಮಾಡಲಾಗುತ್ತಿದೆʼʼಎಂದರು.
ಲಕ್ಷ್ಮೀ ಈ ಚಿತ್ರದ ನಾಯಕಿಯಾಗಿದ್ದರು. ವಜ್ರಮುನಿ, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಪ್ರಭಾಕರ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ. ಇಡೀ ಚಿತ್ರದ ಚಿತ್ರೀಕರಣ ಮೈಸೂರಿನಲ್ಲೇ ನಡೆದಿತ್ತು. ಹದಿನೆಂಟು ಅದ್ಧೂರಿ ಸೆಟ್ ಹಾಕಲಾಗಿತ್ತು. “ಅಂತ” ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿತ್ತು.
ಇದನ್ನೂ ಓದಿ: Actor Ambareesh: ರೆಬಲ್ ಸ್ಟಾರ್ ಅಂಬರೀಶ್ ಜನುಮದಿನದಂದು ಅಂತ ಮರು ಬಿಡುಗಡೆ
ಅಂತ ಸಿನಿಮಾದ ಕಥೆಯನ್ನು ಎಚ್.ಕೆ. ಅನಂತ್ ರಾವ್ ಸರಣಿ ರೂಪದಲ್ಲಿ ಸುಧಾ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಅದೇ ಕಥೆಯನ್ನು ಓದುತ್ತಿದ್ದ ನಿರ್ದೇಶಕ ಬಾಬು ರಾಜೇಂದ್ರ ಸಿಂಗ್ ಅವರು ಸಿನಿಮಾ ಮಾಡಬೇಕು ಎಂದು ನಿರ್ಧಾರ ಮಾಡಿದ್ದರು. ಆರಂಭದಲ್ಲಿ ಈ ಸಿನಿಮಾ ನಿರ್ಮಾಣಕ್ಕೆ ಯಾರೂ ಮನಸ್ಸು ಮಾಡಿರಲಿಲ್ಲ. ಕೊನೆಗೆ ಕೈ ಹಿಡಿದದ್ದು ಎಚ್.ಎನ್. ಮಾರುತಿ ಹಾಗೂ ವೇಣು ಗೋಪಾಲ್. ಸೆನ್ಸಾರ್ ಮಂಡಳಿಯ ವಿಪರೀತ ತೊಂದರೆ ನಡುವೆಯೂ ಸಿನಿಮಾ ರಿಲೀಸ್ ಆಗಿತ್ತು.