ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ (Actor Ambareesh) ಅವರ ಸ್ಮಾರಕ ಹಾಗೂ ರೇಸ್ ಕೋರ್ಸ್ ರಸ್ತೆಗೆ ಅಂಬಿ ಹೆಸರು ಮಾರ್ಚ್ 27ರಂದು ಲೋಕಾರ್ಪಣೆಯಾಗಲಿದೆ. ಸಂಜೆ 5:30ಕ್ಕೆ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ರಸ್ತೆ ಎಂದು ಹೆಸರಿಡಲಾಗುತ್ತಿದೆ. ಸುದ್ದಿಗೋಷ್ಠಿಯಲ್ಲಿ ಹಿರಿಯ ನಟ ದೊಡ್ಡಣ್ಣ, ಅಶೋಕ್ ಕಶ್ಯಪ್, ಭಾಮಾ ಹರೀಶ್, ಉಮೇಶ್ ಬಣಕಾರ್ ಉಪಸ್ಥಿತರಿದ್ದರು. ಆನಂದ್ ರಾವ್ ಸರ್ಕಲ್‌ನಿಂದ ರೇಸ್ ಕೋರ್ಸ್ ರಸ್ತೆವರೆಗೂ ಅಂಬರೀಶ್ ರಸ್ತೆ ಎಂದು ನಾಮಕರಣ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿಯ ಅತ್ಯಂತ ಸಂಚಾರ ದಟ್ಟಣೆ ರಸ್ತೆಗಳಲ್ಲಿ ಒಂದಾಗಿರುವ ರೇಸ್ ಕೋರ್ಸ್ ರಸ್ತೆಗೆ ಖ್ಯಾತ ಚಿತ್ರನಟ ಅಂಬರೀಶ್ ಅವರ ಹೆಸರನ್ನು ನಾಮಕರಣ ಮಾಡುವುದರ ಬಗ್ಗೆ ದೊಡ್ಡಣ್ಣ ಸಂತಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಬರೀಶ್ ಅವರ ಸ್ಮಾರಕ ಮತ್ತು ರಸ್ತೆ ಉದ್ಘಾಟನೆ ಮಾಡಲಿದ್ದಾರೆ. ಭಾಮಾ ಹರೀಶ್ ಮಾತನಾಡಿ ʻʻಸಚಿವ ಆರ್ ಅಶೋಕ್ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಂದಾಳತ್ವ ವಹಿಸಿಕೊಂಡು ಈ ಕಾರ್ಯ ನೆರವೇರಿಸುತ್ತಿದ್ದಾರೆ. ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಸ್ಮಾರಕ ಆಗಬೇಕು, ಆದಷ್ಟು ಬೇಗ ಇದರ ಬಗ್ಗೆ ಮಾಹಿತಿ ನೀಡುತ್ತೇವೆ. ಅಂಬರೀಶ್ ಅವರು ಬಹಳಷ್ಟು ಬಾರಿ ರೇಸ್ ಕೋರ್ಸ್ ರಸ್ತೆ ಕಡೆ ಆತ್ಮೀಯರನ್ನು ಭೇಟಿ ಆಗುತ್ತಿದ್ದರು. ಆ ಜಾಗ ಅವರ ಮೆಚ್ಚಿನ ಸ್ಪಾಟ್ ಆದ ಕಾರಣ ಈ ರಸ್ತೆಗೆ ಅವರ ಹೆಸರನ್ನು ಇಡಲಾಗುತ್ತಿದೆʼʼಎಂದರು.
ಇದನ್ನೂ ಓದಿ: Abhishek Ambareesh: ಉಷಾ ಉತ್ತುಪ್ ಕಂಠದಲ್ಲಿ ʻಬ್ಯಾಡ್ ಮ್ಯಾನರ್ಸ್ʼ: ಯಂಗ್ ರೆಬೆಲ್ ಸ್ಟಾರ್‌ಗೆ ಭರ್ಜರಿ ರೆಸ್ಪಾನ್ಸ್!
ಹಿರಿಯ ನಟ ದೊಡ್ಡಣ್ಣ ಮಾತನಾಡಿ ʻʻರೇಸ್ ಕೋರ್ಸ್ ರಸ್ತೆಗೆ ರೆಬಲ್ ಸ್ಟಾರ್ ಅಂಬರೀಶ್ ಹೆಸರು ಇಡುತ್ತಿರುವುದು ಬಹಳ ಖುಷಿ ತಂದಿದೆ. ಅಂಬರೀಶ್ ಕುದುರೆ ಪ್ರಿಯ. ಒಂದೇ ದಿನ ಸ್ಮಾರಕ ಹಾಗೂ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಟ್ಟು ಲೋಕಾರ್ಪಣೆ ಮಾಡುತ್ತಿರುವುದು ಖುಷಿಯ ಸಂಗತಿ. ಅಂಬರೀಶ್ ಅಜಾತಶತ್ರು, ಒರಟು ಮಾತಿನ, ಬೆಲ್ಲದ ಮಸ್ಸಿನ ವ್ಯಕ್ತಿ. ಸ್ಯಾಂಡಲ್‌ವುಡ್ ಸ್ಟಾರ್ಸ್ ಎಲ್ಲರೂ ಈ ಕಾರ್ಯಕ್ರಮಕ್ಕೆ ಭಾಗಿಯಾಗುತ್ತಿದ್ದಾರೆʼʼಎಂದರು.