Site icon Vistara News

Chandra Mohan: ತೆಲುಗು ಹಿರಿಯ ನಟ ಚಂದ್ರ ಮೋಹನ್ ಇನ್ನಿಲ್ಲ!

Actor Chandra Mohan

ಬೆಂಗಳೂರು: ತೆಲುಗು ಹಿರಿಯ ನಟ ಚಂದ್ರ ಮೋಹನ್ (Chandra Mohan) ಅವರು ಹೃದಯಾಘಾತದಿಂದ ಇಂದು (ನ.11) ನಿಧನರಾಗಿದ್ದಾರೆ. ಹಿರಿಯ ನಟ ಚಂದ್ರ ಮೋಹನ್ ಅವರ ಅಗಲಿಕೆಗೆ ತೆಲುಗು ಚಿತ್ರರಂಗ ಸಂತಾಪ ಸೂಚಿಸುತ್ತಿದೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಸೋಮವಾರ (ನ.12) ಹೈದರಾಬಾದ್‌ನಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಕುಟುಂಬ ಮಾಹಿತಿ ಹಂಚಿಕೊಂಡಿದೆ.

ಚಂದ್ರ ಮೋಹನ್ ಅವರ ನಿಧನಕ್ಕೆ ಜ್ಯೂನಿಯರ್‌ ಎನ್‌ಟಿಆರ್ ಕೂಡ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ. “ಹಲವು ದಶಕಗಳಿಂದ ಚಲನಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ವಿಶೇಷ ಮನ್ನಣೆ ಗಳಿಸಿರುವ ಚಂದ್ರಮೋಹನ್ ಅವರ ಅಕಾಲಿಕ ಮರಣ ತುಂಬಾ ದುಃಖಕರವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದುಕೊಂಡಿದ್ದಾರೆ.

ಚಂದ್ರ ಮೋಹನ್ ಅವರ ಮೂಲ ಹೆಸರು ಮಲ್ಲಂಪಲ್ಲಿ ಚಂದ್ರಶೇಖರ್ ರಾವ್. ಈ ವರ್ಷ ಫೆಬ್ರವರಿಯಲ್ಲಿ ನಿಧನರಾದ ಹಿರಿಯ ನಿರ್ದೇಶಕ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಕೆ ವಿಶ್ವನಾಥ್ ಅವರ ಸೋದರ ಸಂಬಂಧಿಯಾಗಿದ್ದರು. ಜನಪ್ರಿಯ ಹಿನ್ನೆಲೆ ಗಾಯಕ ದಿವಂಗತ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.

ಇದನ್ನೂ ಓದಿ: Kalabhavan Haneef: ಮಲಯಾಳಂ ನಟ, ಮಿಮಿಕ್ರಿ ಆರ್ಟಿಸ್ಟ್‌ ಕಲಾಭವನ್ ಹನೀಫ್ ನಿಧನ

1943 ಮೇ 23ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪಮಿಡಿಮುಕ್ಕಲ ಗ್ರಾಮದಲ್ಲಿ ಜನಿಸಿದ ಚಂದ್ರ ಮೋಹನ್ ಅವರು 1966ರಲ್ಲಿ “ರಂಗುಲ ರತ್ನಂ” ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇದಕ್ಕಾಗಿ ಅವರು ರಾಜ್ಯ ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಸಿರಿ ಸಿರಿ ಮುವ್ವ, ಸೀತಾಮಾಲಕ್ಷ್ಮಿ, ರಾಧಾ ಕಲ್ಯಾಣಂ, ಶಂಕರಾಭರಣಂ ಮತ್ತು ಚಂದಮಾಮ ರಾವೆ ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಮತ್ತು ಅತ್ಯುತ್ತಮ ನಟ ಮತ್ತು ಪಾತ್ರ ಕಲಾವಿದರಾಗಿ ರಾಜ್ಯ ಸರ್ಕಾರದಿಂದ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಎರಡು ನಂದಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಅವರ ಮೊದಲ ತಮಿಳು ಚಿತ್ರ ಎಂಜಿಆರ್ ಜತೆಗಿನ ‘ನಾಲೈ ನಮದೆ’ ಆಗಿತ್ತು.

Exit mobile version