ಬೆಂಗಳೂರು: ನಟ ದಲೀಪ್ ತಾಹಿಲ್ (Actor Dalip Tahil) ಅವರ 2018ರ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಅಂತಿಮವಾಗಿ ತೀರ್ಪು ಸಿಕ್ಕಿದೆ. ಕುಡಿದು ವಾಹನ ಚಲಾಯಿಸಿ ಪ್ರಯಾಣಿಕರನ್ನು ಗಾಯಗೊಳಿಸಿದ್ದಕ್ಕಾಗಿ ಬಾಜಿಗರ್ ಖ್ಯಾತ ನಟ ದಲೀಪ್ ತಾಹಿಲ್ ಅವರಿಗೆ ಕೋರ್ಟ್ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ವರದಿಯ ಪ್ರಕಾರ ಈ ಘಟನೆಯ ಬಳಿಕ ನಟ ಅರೆಸ್ಟ್ ಆಗುವ ಸಂದರ್ಭದಲ್ಲಿ ಪೊಲೀಸರಿಗೆ ಆಲ್ಕೋಹಾಲ್ ಪರೀಕ್ಷೆಗೆ ಬ್ಲಡ್ ಸ್ಯಾಂಪಲ್ ನೀಡಲು ನಿರಾಕರಿಸಿದ್ದರು. ದಲೀಪ್ ಅವರ ಕಾರು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದರು. ಇದಾದ ಬಳಿಕ ನಟ ಅಲ್ಲಿಂದ ಬಚಾವ್ ಆಗಲು ಪ್ರಯತ್ನಿಸಿದ್ದು ಗಣೇಶ ವಿಸರ್ಜನಾ ಮೆರವಣಿಗೆಗಳಿಂದ ಉಂಟಾದ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಬಿದ್ದರು. ಹೀಗಾಗಿ ದಲೀಪ್ ಸಿಕ್ಕಿ ಹಾಕಿಕೊಂಡಿದ್ದರು ಎನ್ನಲಾಗಿದೆ. ಪೊಲೀಸರು ಸಮನ್ಸ್ ನೀಡಿದ ನಂತರ ನಟನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಪೊಲೀಸರ ಮಾಹಿತಿ ಪ್ರಕಾರ ʻʻಜೆನಿತಾ ಗಾಂಧಿ (21) ಮತ್ತು ಗೌರವ್ ಚುಗ್ (22) ಗಾಯಾಳುಗಳು. ಕಾರು ಗುದ್ದಿದ ಪರಿಣಾಮ ಜೆನಿತಾ ಗಾಂಧಿ ಅವರ ಬೆನ್ನು ಮತ್ತು ಕುತ್ತಿಗೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಜೆನಿತಾ ಗಾಂಧಿ ಮತ್ತು ಗೌರವ್ ಚುಗ್ ಆಟೋರಿಕ್ಷಾದಿಂದ ಇಳಿದು ನೋಡಿದಾಗ ನಟ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಗಣೇಶ ವಿಸರ್ಜನಾ ಮೆರವಣಿಗೆ ಇದ್ದ ಕಾರಣ ರಸ್ತೆಯಲ್ಲಿ ಜನಸಂದಣಿಯಿಂದಾಗಿ ಅವರ ಕಾರು ಹೆಚ್ಚು ದೂರ ಹೋಗಲು ಸಾಧ್ಯವಾಗಲಿಲ್ಲ ”ಎಂದು ಖಾರ್ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಹೇಳಿಕೆ ನೀಡಿದರು. ದಲೀಪ್ ತಾಹಿಲ್ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಕಳೆದ ಕೆಲವು ತಿಂಗಳುಗಳಿಂದ ನಟ ತಮ್ಮ ಹಾಸ್ಯಮಯ ವಿಡಿಯೊಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಿದ್ದಾರೆ.
ಇದನ್ನೂ ಓದಿ: Hit and Run: ಶಿವಮೊಗ್ಗದಲ್ಲಿ ಹಿಟ್ ಆ್ಯಂಡ್ ರನ್, ಒಬ್ಬ ಸಾವು, ಇಬ್ಬರಿಗೆ ಗಾಯ
ಬಾಜಿಗರ್ (1993) ರಾಜಾ (1995) ಹಮ್ ಹೈ ರಾಹಿ ಪ್ಯಾರ್ ಕೆ (1993) ಕಯಾಮತ್ ಸೆ ಕಯಾಮತ್ ತಕ್ (1988), ಕಹೋ ನಾ ಪ್ಯಾರ್ ಹೈ (2000), ಅಜ್ನಬೀ (2001), ಸೇರಿದಂತೆ ಹಲವು ಸಿನಿಮಾಗಳಲ್ಲಿ ದಲಿಪ್ ತಾಹಿಲ್ ಅಭಿನಯಿಸಿದ್ದಾರೆ. ಕೊನೆಯ ಬಾರಿಗೆ ರಾಜ್‌ಕುಮಾರ್ ರಾವ್ ಮತ್ತು ಸನ್ಯಾ ಮಲ್ಹೋತ್ರಾ ಅವರೊಂದಿಗೆ ಹಿಟ್: ದಿ ಫಸ್ಟ್ ಕೇಸ್‌ನಲ್ಲಿ ಕಾಣಿಸಿಕೊಂಡರು. ಮೈಂಡ್ ದಿ ಮಲ್ಹೋತ್ರಾಸ್ ಸೀಸನ್ 2ರ ಭಾಗವಾಗಿದ್ದರು. ಇವರು ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್‌ನಲ್ಲೂ ನಟಿಸಿದ್ದಾರೆ.