ಬೆಂಗಳೂರು; ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ (Salaar Movie) ಈ ವರ್ಷ ಸೆಪ್ಟೆಂಬರ್ 28ಕ್ಕೆ ತೆರೆಗೆ ಬರಲಿದೆ. ಈಗಾಗಲೇ ಕನ್ನಡದ ನಟ ಪ್ರಮೋದ್ ಅವರು ಸಲಾರ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ ಎಂದು ವರದಿಯಾಗಿದೆ. ಇದೀಗ ಮತ್ತೋರ್ವ ಸ್ಯಾಂಡಲ್‌ವುಟ್ ನಟ ಪ್ರಮುಖ ಪಾತ್ರದಲ್ಲಿ ಸಲಾರ್ ಸಿನಿಮಾದಲ್ಲಿ ಮಿಂಚಿದ್ದಾರೆ. ಅದುವೆ ಡೈನಾಮಿಕ್ ಹೀರೊ ದೇವರಾಜ್. ಕನ್ನಡ ಚಿತ್ರರಂಗದಲ್ಲಿ ಪೊಲೀಸ್ ಪಾತ್ರದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದ ದೇವರಾಜ್ ಸದ್ಯ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಟ ತಾವು ಸಲಾರ್ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ತೆಲುಗಿನಲ್ಲಿ 2018ರಲ್ಲಿ ಬಿಡುಗಡೆಗೊಂಡಿದ್ದ ಮಹೇಶ್ ಬಾಬು ನಟನೆಯ ಭರತ್ ಅನೆ ನೇನು ಚಿತ್ರದಲ್ಲಿ ಅಂತಿಮವಾಗಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಬಳಿಕ ದೇವರಾಜ್ ಯಾವುದೇ ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿರಲಿಲ್ಲ. ತೆಲುಗು ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ದೇವರಾಜ್ ʻಸಲಾರ್ʼ ಚಿತ್ರದಲ್ಲಿ ನಟಿಸುತ್ತಿರುವ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ.
ಸಲಾರ್ ಚಿತ್ರದ ಪಾತ್ರದ ಕುರಿತು ಸಂದರ್ಶಕ ಕೇಳಿದಾಗ “ಪಾತ್ರದ ಬಗ್ಗೆ ಹೇಳುವ ಹಕ್ಕು ನನಗಿಲ್ಲ. ಆದರೆ ಮೊದಲ ಭಾಗದಲ್ಲಿ ನನ್ನ ಪಾತ್ರ ಹೆಚ್ಚೇನೂ ಇರುವುದಿಲ್ಲ, ಎರಡನೇ ಭಾಗದಲ್ಲಿ ಹೆಚ್ಚು ಇರಲಿದೆ. ಜಗಪತಿ ಬಾಬು, ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರ ಜತೆ ನಟಿಸಿದ್ದೇನೆ” ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Salaar Movie: ಪ್ರಭಾಸ್ ನಟನೆಯ ಸಲಾರ್ ಸೆಪ್ಟೆಂಬರ್ 28ಕ್ಕೆ ತೆರೆಗೆ
ಸಲಾರ್ನಲ್ಲಿ ಶ್ರುತಿ ಹಾಸನ್ ಅವರು ಆದ್ಯ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಪ್ರಭಾಸ್ ಜತೆ ಅವರು ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ.
‘ಸಲಾರ್’ ಸಿನಿಮಾ ಕನ್ನಡದ ‘ಉಗ್ರಂ’ ಚಿತ್ರದ ರಿಮೇಕ್ ಎಂದು ಹೇಳಲಾಗಿತ್ತು. ಆದರೆ, ಇದನ್ನು ಪ್ರಶಾಂತ್ ನೀಲ್ ಒಪ್ಪಿಕೊಂಡಿಲ್ಲ. ಪ್ರಭಾಸ್ ಅವರು ‘ಸಲಾರ್’ ಮಾತ್ರವಲ್ಲದೆ ಇನ್ನೂ ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಇದ್ದಾರೆ. ಅಲ್ಲದೇ, ಯಶ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ.