Site icon Vistara News

Actor Dhananjay: ʻಕೋಟಿʼ ಸಿನಿಮಾದ ‘ಜನತಾ ಸಿಟಿ’ ಹಾಡು ಔಟ್‌

Actor Dhananjay

Actor Dhananjay

ಬೆಂಗಳೂರು: ಮಹಾನಗರಗಳು ಎಂತವರನ್ನೂ ಸೆಳೆಯುತ್ತವೆ‌. ಅವುಗಳು ತಮ್ಮೊಳಗೆ ಬಚ್ಚಿಟ್ಟುಕೊಂಡಿರುವ ಕೌತುಕತೆಗೆ ಸೋಲದವರಿಲ್ಲ. ಇಂತಹ ಒಂದು ಮಹಾನಗರ ‘ಜನತಾ ಸಿಟಿ’ಯಲ್ಲಿ ‘ಕೋಟಿ’ (Kotee Movie) ಜೀವನ ನಡೆಸುತ್ತಿದ್ದಾನೆ.‌ ಇದು ಒಂದು ಭ್ರಷ್ಟ ನಗರವೂ ಹೌದು. ಸದ್ಯ ಸ್ಯಾಂಡಲ್‌ವುಡ್‌ ನಟ ಧನಂಜಯ್‌ ಅಭಿನಯದ ʼಕೋಟಿʼ ಸಿನಿಮಾದಲ್ಲಿನ ಈ ನಗರದ ಬಗೆಗಿನ ಹಾಡು ‘ಜನತಾ ಸಿಟಿ’ ಈಗ ಬಿಡುಗಡೆಯಾಗಿದೆ. ವಾಸುಕಿ ವೈಭವ್ ಸಾಹಿತ್ಯ ರಚಿಸಿ, ಸಂಯೋಜಿಸಿರುವ ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೊವನ್ನು ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು.

ವಾಸುಕಿ ವೈಭವ್ ಮಾತನಾಡಿ, “ಕೋಟಿ ‘ಜನತಾಸಿಟಿ’ಯಲ್ಲಿ ಜೀವನ ನಡೆಸುತ್ತಿದ್ದಾನೆ. ಅವನಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂ. ದುಡಿಯುವ ಆಸೆ. ಈ ಹಾಡು ಅವನ ಮತ್ತು ಜನತಾ ಸಿಟಿಯ ಸಂಬಂಧವನ್ನು ಹೇಳುತ್ತದೆ. ಈ ಹಾಡನ್ನು ಬರೆದು, ಸಂಯೋಜಿಸುವುದು ತುಂಬಾ ಚಾಲೆಂಜಿಂಗ್ ಆಗಿತ್ತು. ಈ ಹಾಡಿನ ತಯಾರಿ ವೇಳೆ ಸಖತ್ ಮಜ ಮಾಡಿದೀನಿ” ಎಂದು ಹೇಳಿದ್ದಾರೆ.

“ಕೋಟಿʼ ಸಿನಿಮಾದಲ್ಲಿ ‘ಜನತಾ ಸಿಟಿ’ ಹಾಡು ನನಗೆ ತುಂಬಾ ಇಷ್ಟ. ನಾನು ಒಂದು ಸಣ್ಣ ಹಳ್ಳಿಯಿಂದ ಬೆಂಗಳೂರಿಗೆ ಬಂದವನು. ಮಹಾನಗರಗಳಿಗೆ ಏನೋ ಸೆಳೆಯುವ ಗುಣ. ಈ ಹಾಡು ಮಹಾನಗರಗಳ‌ಲ್ಲಿ ಬದುಕುವ ಎಲ್ಲರಿಗೂ ತುಂಬಾ ಹತ್ತಿರ ಆಗಲಿದೆ” ಎಂದು ʼಕೋಟಿʼಯ ನಿರ್ದೇಶಕ ‘ಪರಮ್’ ಅಭಿಪ್ರಾಯ ಪಟ್ಟರು.

ʼಕೋಟಿʼ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ʼ777 ಚಾರ್ಲಿʼ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ʼಕಾಂತಾರʼ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿ ʼಕೋಟಿʼಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮೆರಾಮನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: Dolly Dhananjay: ʻಕೋಟಿʼ ಸಿನಿಮಾ ಮೊದಲ ಹಾಡು ಬಿಡುಗಡೆ!

ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೆಲವು ದಿನಗಳ ಹಿಂದೆ ʻಕೋಟಿʼ ಸಿನಿಮಾದ ಮೊದಲ ಹಾಡು ‘ಮಾತು ಸೋತು’ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ.

Exit mobile version