ಬೆಂಗಳೂರು: ನವರಸ ನಾಯಕ ಜಗ್ಗೇಶ್ (Actor Jaggesh) `ರಂಗನಾಯಕ’ ಸಿನಿಮಾ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಗಳಿದ್ದವು ಆದರೆ ಸಿನಿಮಾ ಉತ್ತಮ ಪ್ರದರ್ಶನ ಕಾಣಲಿಲ್ಲ. ಬಳಿಕ ನಟ ಜಗ್ಗೇಶ್, ಸಿನಿಮಾ ಬಗ್ಗೆ ಕ್ಷಮೆ ಸಹ ಕೇಳಿದ್ದರು. ಇದೀಗ ನಟ ಜಗ್ಗೇಶ್ ಅವರು ಕನ್ನಡ ಚಿತ್ರರಂಗದ ಪ್ರಸ್ತುತ ದಿನಗಳ ಬಗ್ಗೆ ಕಣ್ಣೀರು ಹಾಕಿದ್ದಾರೆ. ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಜಡ್ಜ್ ಆಗಿರುವ ಜಗ್ಗೇಶ್, ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಈಗಿನ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಲೇ ಕಣ್ಣೀರಿಟ್ಟರು.
ʻʻಎಲ್ಲರೂ ಒಳ್ಳೆಯ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಯಾರೂ ಕೆಟ್ಟ ಸಿನಿಮಾ ಮಾಡಬೇಕು ಎಂದುಕೊಂಡು ಬರುವುದಿಲ್ಲ. ಪೇಪರ್‌ಗೆ ಒಂದು ಜಾಹೀರಾತು ನೀಡುತ್ತಾರೆ. ಎಲ್ಲ ಮಾಡುತ್ತಾರೆ. ಆದರೆ ಚಿತ್ರಮಂದಿರಗಳಲ್ಲಿ ಜನರೇ ಇಲ್ಲ ಅಂದಾಗ ಕನ್ನಡ ಚಿತ್ರರಂಗವೇ ಹೀಗಾ? ಎಂದರೆ ಖಂಡಿತ ಇಲ್ಲ. ಏನಾಗುತ್ತಿದೆ ಚಿತ್ರರಂಗಕ್ಕೆ ಅರ್ಥವಾಗುತ್ತಿಲ್ಲ. ಹೀಗೆ ಆದರೆ ಹೇಗೆ ಸಿನಿಮಾ ಮಾಡಬೇಕು ಅರ್ಥವಾಗುತ್ತಿಲ್ಲ’ ಎಂದಿದ್ದಾರೆ.
ʻʻಅಕ್ಷಯ್ ಕುಮಾರ್ ಕೋಟ್ಯಂತರ ಹಣವನ್ನು ಹಾಕುತ್ತಿದ್ದಾರೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಅವರಂತೂ ಡಿಸಾಸ್ಟರ್ ಆಗಿಬಿಟ್ಟಿದ್ದಾರೆ. ಇಡೀ ಭಾರತದಲ್ಲಿ ಸಿನಿಮಾ ಎಂಬುದು ಸತ್ತು ಹೋಗುತ್ತಿದೆ. ಈಗೆಲ್ಲ ಹೇಗೆ ಆಗಿಬಿಟ್ಟಿದೆಯೆಂದರೆ ಯಾರು 200 ಕೋಟಿ ರೂಪಾಯಿ ಹಾಕಿ ಸಿನಿಮಾ ಮಾಡುತ್ತಾರೋ ಅದಷ್ಟೆ ಸಿನಿಮಾ ಎಂಬಂತೆ ಆಗಿಬಿಟ್ಟಿದೆ. ಯಾರು ಒಂದೊಳ್ಳೆ ಕತೆ ಮಾಡಿ, ಸಣ್ಣ ಸಿನಿಮಾ ಮಾಡುತ್ತಾರೋ ಅದು ಸಿನಿಮಾ ಅಲ್ಲ ಎಂಬಂತೆ ಆಗಿಬಿಟ್ಟಿದೆ ಪರಿಸ್ಥಿತಿ. ಹೀಗಾದರೆ ಉಳಿದವರು ಬದುಕುವುದು ಹೇಗೆ’ ಎಂದು ಜಗ್ಗೇಶ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?
ʻʻನನ್ನ ಅಣ್ಣತಮ್ಮಂದಿರು, ಒಡಹುಟ್ಟಿದ್ದವರು ಸಿನಿಮಾ ರಿಲೀಸ್ ಆಗುವಾಗ ಇದು ದರಿದ್ರು ಸಿನಿಮಾ, ವೇಸ್ಟ್ ಎಂದು ಶ್ರಮ ಹಾಕಿ ಇನ್ನೊಬ್ಬರ ಶ್ರಮವನ್ನು ಹಾಳು ಮಾಡುತ್ತಾರೆ. ಅದನ್ನ ನೋಡಿ ಜನರು ಬರುವರಿದ್ದಾರೆ. ಎಲ್ಲರೂ ಚೆನ್ನಾಗಿರಲಿ. ಯಾರಿಗೂ ಕೆಟ್ಟದ್ದನ್ನು ಬಯಸೋದು ಬೇಡ. ಬೇಜಾರಾಗಿ ಸಮಯವೇ ಹೋಗುತ್ತಿಲ್ಲ ಎಂದು ಯುಟ್ಯೂಬ್‌ನಲ್ಲಿ ಒಂದು ಸೀನ್ ನೋಡಿದರೂ ಅದುವೇ ಸಿನಿಮಾ. ನಾನು ಭಾವುಕನಾದೆ ಯಾಕೆ ಅಂದರೆ ನನ್ನ ಅಣು, ನನ್ನ ಬದುಕು, ನನ್ನ ಕನಸು, ನನ್ನ ಬಟ್ಟೆ, ಊಟ ಸಿನಿಮಾ ಕೊಟ್ಟಿದೆ. ಹಾಗಾಗಿ ನಾನು ಸಿನಿಮಾವನ್ನು ತಾಯಿ ತರ ಪ್ರೀತಿಸುತ್ತೇನೆʼʼಎಂದು ಕಣ್ಣೀರಿಟ್ಟರು.