ಬೆಂಗಳೂರು: ಟಿಪ್ಪು ಸುಲ್ತಾನ್‌ನನ್ನು (Tipu sultan) ಮಂಡ್ಯದ ಉರಿಗೌಡ, ನಂಜೇಗೌಡರು (Urigowda Nanjegowda) ಕೊಂದಿದ್ದಾರೆ ಎಂಬ ಬಿಜೆಪಿ ವಾದವು ರಾಜಕೀಯ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ವಿವಿಧ ಪಕ್ಷಗಳ ನಾಯಕರು ವಾದ-ಪ್ರತಿವಾದಗಳನ್ನು ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ನಟ ಕಿಶೋರ್ (Actor Kishore) ಧ್ವನಿ ಎತ್ತಿದ್ದು, ಇದು ಚುನಾವಣಾ ಸಮಯ ಎಚ್ಚರಿಕೆಯಲ್ಲಿರುವಂತೆ ಜನರಿಗೆ ಹೇಳಿದ್ದಾರೆ.
ಕಿಶೋರ್ ಹೇಳಿದ್ದೇನು?
ʻʻಯಾವುದೋ ಕಾಲದ ರಾಜರ ಹೆಸರಲ್ಲಿ ಇಂದಿನ ರಾಜಕೀಯ… ಇದು ಇಂದಿನ ಪ್ರಜಾಪ್ರಭುತ್ವ. ನಂಜೇಗೌಡ ಉರಿಗೌಡರ ಸೃಷ್ಟಿ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಯತ್ನವೇ? ಇತ್ತ ಟಿಪ್ಪುವನ್ನು ಕೊಂದವರೆಂದು ಹೇಳಿ ಮುಸ್ಲಿಮರನ್ನೂ ಒಕ್ಕಲಿಗರನ್ನೂ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುತ್ತಲೇ ಒಕ್ಕಲಿಗರು ಬ್ರಿಟೀಷರ ಪರವಾಗಿದ್ದರೆಂದು ಹೇಳಿ ಮುಂದೊಂದು ದಿನ ಒಕ್ಕಲಿಗರಿಗೂ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರವೇ? ಮೊದಲು ಹಿಂದೂ ಮುಸ್ಲಿಂ ಅಂದರು ಮನೆಯ ಸದಸ್ಯರನ್ನು ಎತ್ತಿಕಟ್ಟಿದರು, ಗಾಂಧಿಯೆಂದರು, ಗಾಂಧಿ ಕೊಂದರು, ರೈತರನ್ನು ಭಯೋತ್ಪಾದಕರೆಂದರು, ಉರಿ ಹೊತ್ತಿಸಿದರು ನಂಜು ಕಾರಿದರು ಒಕ್ಕಲಿಗರೆಂದರು ಟಿಪ್ಪುವೆಂದರು ಬಿಹಾರಿಗಳೆಂದರು ತಮಿಳರೆಂದರು, ಧರ್ಮವೆಂದರು, ಜಾತಿಯೆಂದರು, ದಲಿತರೆಂದರು ಭಾಷೆಯೆಂದರು ದೇಶವೆಂದರು, ಇತಿಹಾಸ ತಿರುಚಿದರು, ಸುಳ್ಳು ಸುದ್ದಿ ಹರಡಿದರು . ಕೇವಲ ಅಧಿಕಾರದಾಸೆಯಿಂದ ಸರ್ವಜನಾಂಗದ ಶಾಂತಿಯ ತೋಟವನ್ನು ಕದಡಿ, ವಸುದೈವ ಕುಟುಂಬಕಂನ ಹೆಮ್ಮೆಯ ಕುಟುಂಬವನ್ನು ಮುರಿಯಲು ಬರುತ್ತಿದ್ದಾರೆ ಮಾಡಿದ ಕೆಲಸದ ಮೇಲೆ ಮತ ಯಾಚಿಸಲು ಯೋಗ್ಯತೆಯಿಲ್ಲದ ಧರ್ಮಾಂಧ ಮನೆಹಾಳರು.. ಚುನಾವಣೆಯ ಕಾಲವಿದು ಎಚ್ಚರ..’ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ʼ
ಇದನ್ನೂ ಓದಿ: Actor Kishore | ಬಾಲಿವುಡ್ ಪರವಾಗಿ ನಿಲ್ಲುವ ಕಾಲ ಬಂದಿದೆ: ಬಾಯ್ಕಾಟ್ ಕುರಿತು ಕಿಶೋರ್ ಹೇಳಿದ್ದೇನು?
ಕಿಶೋರ್ ಪೋಸ್ಟ್
ಕಿಶೋರ್ ಅವರ ಪೋಸ್ಟ್‌ಗಳಿಗೆ ಸಾಕಷ್ಟು ಪ್ರತಕ್ರಿಯೆಗಳು ಬರುತ್ತಿವೆ. ಅದರಲ್ಲಿ ಒಬ್ಬರು ʻʻಅವರ ಬೇಳೆ ಬೇಯಿಸಿಕೊಳ್ಳಲು ಬೇರೆಯವರ ಮನೆಗೂ ಬೆಂಕಿ ಹಚ್ಚಲು ಹಿಂಜರಿಯುವುದಿಲ್ಲ ಇವರು.. ಕೀಳು ಮನಸ್ಥಿತಿಯ ರಾಜಕಾರಣಿಗಳು… ಆದರೆ ಇದು ನಮ್ಮ ಸ(ತ್ತ)ತ್ಪ್ರಜೆಗಳಿಗೆ ಅರ್ಥ ಆಗ್ತಿಲ್ವಲ್ಲ ಅದೇ ದುರಂತʼʼಎಂದರೆ ಇನ್ನೊಬ್ಬರು ʻʻನಿಜ ಸರ್ ನಿಮ್ಮ ಈ ಮಾತು ದ್ವೇಷದ ಭಾವನೆ ಬಿತ್ತಿ ತಮ್ಮ ಬೆಳೆ ಬೆಯಿಸಿಕೊಳ್ಳುತ್ತಿದ್ದಾರೆ. ಇತಿಹಾಸದ ಪ್ರಕಾರ ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಇದರಲ್ಲಿ ಯಾವುದೇ ಸಂಶಯವಿಲ್ಲʼʼಎಂದಿದ್ದಾರೆ.
ಟಿಪ್ಪು ಸುಲ್ತಾನನನ್ನು ಕೊಂದಿದ್ದು ಉರಿಗೌಡ ಹಾಗೂ ನಂಜೇಗೌಡ ಎನ್ನುತ್ತಿದ್ದ ಬಿಜೆಪಿ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಬಂದಿದ್ದಾಗ ಮಹಾದ್ವಾರವೊಂದಕ್ಕೆ ಇವರದೇ ಹೆಸರನ್ನಿಟ್ಟು ರಾಜಕೀಯ ವಿರೋಧಿಗಳನ್ನು ಕೆಣಕಿತ್ತು. ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಇವರಿಬ್ಬರ ಬಗ್ಗೆ ಸಿನಿಮಾ ಮಾಡುವುದಾಗಿಯೇ ಘೋಷಿಸಿ ಬಿಟ್ಟಿದ್ದರು.