ಬೆಂಗಳೂರು: ಮಾಲಿವುಡ್ ನಟ ಮಮ್ಮುಟ್ಟಿ (Actor Mammootty) ಅವರ ತಾಯಿ, ದುಲ್ಕರ್ ಸಲ್ಮಾನ್ ಅವರ ಅಜ್ಜಿ, ಫಾತಿಮಾ ಇಸ್ಮಾಯಿಲ್ ವಯೋಸಹಜ ಕಾಯಿಲೆಯಿಂದ ಏಪ್ರಿಲ್ 21ರಂದು ಕೊಚ್ಚಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಸಂಜೆ 4 ಗಂಟೆಗೆ ಚೆಂಪು ಜುಮಾ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.
ಫಾತಿಮಾ ನಿಧನಕ್ಕೆ ಮಲಯಾಳಂ ಸಿನಿಮಾರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಶಶಿ ತರೂರ್ ಟ್ವಿಟ್‌ನಲ್ಲಿ ʻʻಮಮ್ಮುಟ್ಟಿ ಅವರ ತಾಯಿಯ ನಿಧನದ ಬಗ್ಗೆ ನನ್ನ ಸಂತಾಪವನ್ನು ವ್ಯಕ್ತಪಡಿಸಲು ಇಂದು(ಏಪ್ರಿಲ್ 21) ಬೆಳಗ್ಗೆ ಮಮ್ಮುಟ್ಟಿ ಅವರೊಂದಿಗೆ ಮಾತನಾಡಿದ್ದೇನೆ. ಆತ್ಮಕ್ಕೆ ಶಾಂತಿ ಸಿಗಲಿ, ದುಃಖ ಭರಿಸುವ ಶಕ್ತಿ ದೇವರು ನೀಡಲಿ’ ಎಂದು ಹೇಳಿದ್ದಾರೆ.
ಮಲಯಾಳಂ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ಫಾತಿಮಾ ಇಸ್ಮಾಯಿಲ್ ಅವರಿಗೆ ಇಬ್ರಾಹಿಂ ಕುಟ್ಟಿ, ಶಫಿನಾ, ಅಮೀನಾ, ಸೌದಾ ಮತ್ತು ಜಕರಿಯಾ ಒಟ್ಟು 5 ಜನ ಮಕ್ಕಳು. ಮಮ್ಮುಟ್ಟಿ ಹಿರಿಯ ಮಗನಾಗಿದ್ದಾರೆ.
ಇದನ್ನೂ ಓದಿ: Dulquer Salmaan: ತಂದೆಯ ಹೆಸರಿಗೆ ಧಕ್ಕೆ ತಂದು ಬಿಡುತ್ತೇನೋ ಎಂಬ ಆತಂಕ ನನ್ನಲ್ಲಿತ್ತು: ದುಲ್ಕರ್ ಸಲ್ಮಾನ್
ಶಶಿ ತರೂರ್ ಟ್ವೀಟ್
ಮಲಯಾಳಂ ಸಿನಿಮಾರಂಗದ ಖ್ಯಾತ ನಟ ಮಮ್ಮುಟ್ಟಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಮ್ಮುಟ್ಟಿ ಪುತ್ರ ದುಲ್ಕರ್ ಸಲ್ಮಾನ್ ಕೂಡ ಸಿನಿಮಾದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.
ಮಮ್ಮುಟ್ಟಿ ಕೊನೆಯದಾಗಿ ʻಕ್ರಿಸ್ಟೋಫರ್ʼ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಪ್ರಸ್ತುತ ತೆಲುಗು ಚಿತ್ರ ʻಏಜೆಂಟ್ʼ ಬಿಡುಗಡೆಗಾಗಿ ಕಾಯುತ್ತಿದ್ದಾರೆ, ಅದರಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಮುಂದಿನ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.