ಬೆಂಗಳೂರು: ಸ್ಯಾಂಡಲ್‌ವುಡ್ ನಟ, ಹಾಸ್ಯನಟ ನಾಗಭೂಷಣ ಅವರ (Actor Nagabhushana) ಕಾರು ಅಪಘಾತಕ್ಕೆ ಒಳಗಾಗಿದೆ. ದಂಪತಿಗೆ ಡಿಕ್ಕಿಯಾಗಿದ್ದು, ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ವಸಂತನಗರ ಮುಖ್ಯರಸ್ತೆಯ ಬಳಿ ಶನಿವಾರ ರಾತ್ರಿ (ಸೆಪ್ಟೆಂಬರ್ 30) ದಂಪತಿಯು ನಡೆದುಕೊಂಡು ಹೋಗುವಾಗ ನಾಗಭೂಷಣ ಅವರ ಕಾರು ಡಿಕ್ಕಿಯಾಗಿದೆ. ಇದೀಗ ನಟನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಘಟನೆ ಬಗ್ಗೆ ನಟ ಪ್ರತಿಕ್ರಿಯಿಸಿದ್ದಾರೆ.
ಅಪಘಾತದ ಕುರಿತು ನಟ ನಾಗಭೂಷಣ ಮಾತನಾಡಿ ‘ಅಕ್ಟೋಬರ್ 30ರಂದು ನಾನು ನನ್ನ ಸ್ನೇಹಿತರನ್ನು ನೋಡಲು ಆರ್.ಆರ್ ನಗರಕ್ಕೆ ಹೋಗಿ, ಸ್ನೇಹಿತರನ್ನು ಭೇಟಿ ಮಾಡಿಕೊಂಡು ವಾಪಸ್ ಜೆ.ಪಿ. ನಗರದಲ್ಲಿರುವ ನಮ್ಮ ಮನೆಗೆ ನನ್ನ ಕಾರಿನಲ್ಲಿ ಹೋದೆ. ಸುಮಾರು 9.45 ಗಂಟೆಯ ಸಮಯದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಒಬ್ಬ ಹೆಂಗಸು ಮತ್ತು ಒಬ್ಬರು ಗಂಡಸು ಪುಟ್ ಪಾತ್ ಮೇಲಿಂದ ರಸ್ತೆಯ ಕೆಳಗೆ ಇಳಿದು ಬಂದರು. ಅವರು ಬಂದಿದ್ದನ್ನು ನೋಡಿ ನನಗೆ ಗಾಬರಿಯಾಗಿ ನಾನು ರಸ್ತೆಗೆ ಬಂದಿದ್ದವರಿಗೆ ಡಿಕ್ಕಿ ಮಾಡಿ ನಂತರ ಮುಂದೆ ಹೋಗಿ ಪುಟ್ ಪಾತ್ ಮೇಲೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿದೆನು. ತಕ್ಷಣ ನಾನು ಆಸ್ಪತ್ರೆಗೆ ಸೇರಿಸಬೇಕೆಂದು ಕಾರು ಸ್ಟಾರ್ಟ್ ಮಾಡಿದೆ. ಆದರೆ ಕಾರು ಸ್ಟಾರ್ಟ್ ಆಗಿಲ್ಲ. ಆಟೋರಿಕ್ಷಾದಲ್ಲಿ ಅಲ್ಲಿದ್ದ ಜನರ ಜತೆ ಸೇರಿಕೊಂಡು ಗಾಯಾಳುಗಳನ್ನು ಕೂರಿಸಿಕೊಂಡು ಅಸ್ಟ್ರಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದಾಗ ವೈದ್ಯರು ಬರುವ ದಾರಿಯ ಮಧ್ಯದಲ್ಲಿ ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದರು’ ಎಂದು ನಾಗಭೂಷಣ್ ಹೇಳಿಕೆ ನೀಡಿದ್ದಾರೆ. ರಾತ್ರಿಯೇ ನಾಗಭೂಷಣ್ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆದಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಡ್ರಿಂಕ್ಸ್ ಮಾಡಿಲ್ಲ ಎಂದು ಪತ್ತೆಯಾಗಿದೆ. ಇದು ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ಅಲ್ಲʼʼ ಎಂದು ಕೂಡ ಮಾಹಿತಿ ಬಹಿರಂಗಗೊಂಡಿದೆ.
ಇದನ್ನೂ ಓದಿ: Actor Nagabhushana: ದಂಪತಿಗೆ ನಟ ನಾಗಭೂಷಣ ಕಾರು ಡಿಕ್ಕಿ, ಮಹಿಳೆ ಸಾವು; ಹಿಟ್ ಆ್ಯಂಡ್ ರನ್?
ಈ ಅಪಘಾತದಲ್ಲಿ (Road Accident) 48 ವರ್ಷದ ಪ್ರೇಮಾ ಎಸ್. ನಿಧನರಾಗಿದ್ದಾರೆ. ಅವರ ಪತಿ ಕೃಷ್ಣ ಬಿ. ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೊದಲು ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದ್ದು, ನಂತರ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಕಾರು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಪ್ರೇಮಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಕೃಷ್ಣ ಅವರು ಬನ್ನೇರುಘಟ್ಟಲದಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರಹಳ್ಳಿ ಕೋಣನಕುಂಟೆ ಕ್ರಾಸ್ ದಾರಿಯ ಮಧ್ಯೆ ರಾತ್ರಿ 9.45ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕೃಷ್ಣ ಹಾಗೂ ಪ್ರೇಮಾ ದಂಪತಿಯ ಪುತ್ರ ಪಾರ್ಥ ಎಂಬುವರು ಕುಮಾರಸ್ವಾಮಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಪಾರ್ಟ್‌ಮೆಂಟ್ ಬಳಿಯ ಫುಟ್‌ಪಾತ್ ಮೇಲೆ ವಾಕಿಂಗ್ ಮಾಡುವಾಗ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಕೃಷ್ಣ ಅವರ ಪರಿಸ್ಥಿತಿಯೂ ಗಂಭೀರವಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಕೃಷ್ಣ ಅವರ ಕೈ, ಕಾಲು ಹಾಗೂ ಬೆನ್ನಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಮೃತ ಪ್ರೇಮಾ ಅವರ ಶವವನ್ನು ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.