ಹೈದರಾಬಾದ್: ಟಾಲಿವುಡ್‌ನ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ‘ಹಾಯ್ ನಾನ್ನ’ (Hi Nanna) ಕೂಡ ಒಂದು. ನ್ಯಾಚುರಲ್ ಸ್ಟಾರ್ ಖ್ಯಾತಿಯ ನಾನಿ (Actor Nani) ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇದೇ ಶುಕ್ರವಾರ (ಡಿಸೆಂಬರ್ 7ರಂದು) ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ, 5 ಭಾಷೆಗಳಲ್ಲಿ ತೆರೆ ಕಾಣಲಿದೆ. ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿ ನಡೆದ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ನಲ್ಲಿ ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ಫೋಟೋವನ್ನು ಬಿತ್ತರ ಮಾಡಲಾಗಿತ್ತು. ಇದಕ್ಕೆ ಈಗ ನಟ ನಾನಿ ಪ್ರತಿಕ್ರಿಯೆ ನೀಡಿ ಚಿತ್ರತಂಡದಿಂದ ಆದ ಪ್ರಮಾದಕ್ಕೆ ಕ್ಷಮೆ ಕೇಳಿದ್ದಾರೆ.
‘ಹಾಯ್ ನಾನ್ನ’ ಚಿತ್ರಕ್ಕೆ ಮತ್ತು ರಶ್ಮಿಕಾ-ವಿಜಯ್ ದೇವರಕೊಂಡ ಅವರಿಗೆ ಯಾವುದೇ ಸಂಬಂಧ ಇಲ್ಲ. ಹಾಗಿದ್ದರೂ ಕೂಡ ವೇದಿಕೆಯ ಎಲ್ಇಡಿ ಪರದೆಯಲ್ಲಿ ಇಬ್ಬರ ವೈಯಕ್ತಿಕ ಫೋಟೋ ಬಿತ್ತರ ಆಗಿತ್ತು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರವಾಸದಲ್ಲಿರುವ ಫೋಟೊವನ್ನು ಸ್ಕ್ರೀನ್‌ನಲ್ಲಿ ಪ್ರತ್ಯಕ್ಷವಾಗಿತ್ತು. ಬಳಿಕ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸಿ ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದರು.
ನಾನಿ ಹೇಳಿದ್ದೇನು?
‘ʼಆ ರೀತಿ ಆಗಿದ್ದು ದುರದೃಷ್ಟಕರ. ಏನಾಯಿತು ಎಂಬುದು ಗೊತ್ತಾಗುವುದರೊಳಗೆ ಫೋಟೋ ಕಣ್ಮರೆ ಆಯಿತು. ನಾವೆಲ್ಲರೂ ಆಪ್ತ ಸ್ನೇಹಿತರು. ಹೀಗೆಲ್ಲ ಆಗುವುದು ಸಹಜ ಎಂಬುದನ್ನು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅರ್ಥ ಮಾಡಿಕೊಳ್ಳಲಿದ್ದಾರೆ. ಒಂದು ವೇಳೆ ಯಾರಿಗಾದರೂ ನೋವಾಗಿದ್ದರೆ ನಾನು ಮತ್ತು ನನ್ನ ತಂಡದವರು ಕ್ಷಮೆ ಕೇಳುತ್ತೇವೆʼʼ ಎಂದು ನಾನಿ ಹೇಳಿದ್ದಾರೆ. ಈ ವಿವಾದ ಕುರಿತು ರಶ್ಮಿಕಾ ಆಗಲಿ, ವುಜತ್ ದೇವರಕೊಂಡ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ʼಹಾಯ್ ನಾನ್ನ’ ಸಿನಿಮಾದಲ್ಲಿ ನಾನಿ ಮತ್ತು ಮೃಣಾಲ್ ಠಾಕೂರ್ ನಟಿಸಿದ್ದಾರೆ. ಪ್ರಚಾರದ ಹುಚ್ಚಿನಿಂದ ‘ಹಾಯ್ ನಾನ್ನ’ ತಂಡ ಸಂಬಂಧವೇ ಇಲ್ಲದ ರಶ್ಮಿಕಾ-ವಿಜಯ್ ಅವರ ವೈಯಕ್ತಿಕ ಫೋಟೊ ಬಳಿಸಿ ಗಿಮಿಕ್ ಮಾಡಿರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸದ್ಯ ಆ ಘಟನೆ ಬಗ್ಗೆ ನಾನಿ ವಿಷಾದ ವ್ಯಕ್ತಪಡಿಸಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: Rashmika Mandanna: ನಾನಿ ಸಿನಿಮಾ ಈವೆಂಟ್‌ನಲ್ಲಿ ವಿಜಯ್-ರಶ್ಮಿಕಾ ಮಾಲ್ಡೀವ್ಸ್ ಫೋಟೊ; ತಬ್ಬಿಬ್ಬಾದ ಮೃಣಾಲ್!
ತಂದೆ ಮತ್ತು ಮಗಳ ಬಾಂಧವ್ಯದ ಜತೆಗೆ ಪ್ರೀತಿ ಕಥಾಹಂದರವೇ ‘ಹಾಯ್ ನಾನ್ನ’ ಚಿತ್ರದ ಹೈಲೆಟ್. ಈ ಚಿತ್ರಕ್ಕೆ ಯುವ ನಿರ್ದೇಶಕ ಶೌರ್ಯುವ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮೊದಲ ಬಾರಿ ನಾನಿ ಮತ್ತು ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಮೃಣಾಲ್ ಠಾಕೂರ್ ಅಭಿನಯದ ʼಸೀತಾ ರಾಮಂʼ ತೆಲುಗು ಚಿತ್ರ ಕಳೆದ ವರ್ಷ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈ ವರ್ಷ ಬಿಡುಗಡೆಯಾದ ನಾನಿ-ಕೀರ್ತಿ ಸುರೇಶ್ ಅಭಿನಯದ ʼದಸರಾʼ ಚಿತ್ರ ಹಿಟ್ ಆಗಿತ್ತು. ಹೀಗಾಗಿ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ