ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ (Actor Prabhas) ಅವರ ʻಆದಿ ಪುರುಷ್ʼ ಸಿನಿಮಾ ಇದೆ ಜೂನ್ 16ರಂದು ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಅದರ ನಡುವೆ `ಸಲಾರ್’ ‘ಸಿನಿಮಾದ ಕೆಲಸಗಳು ಆಗುತ್ತಿವೆ. ಆದರೆ `ಪ್ರಾಜೆಕ್ಟ್ ಕೆ’ ಸಿನಿಮಾ ಮಾತ್ರ ನಿಧಾನ ಗತಿಯಲ್ಲಿ ಸಾಗುತ್ತಿದ್ದು, ಅಂದುಕೊಂಡ ಸಮಯದಲ್ಲಿ ಚಿತ್ರ ಬಿಡುಗಡೆಯಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. 2024ರ ಜನವರಿ 12ರಂದು `ಪ್ರಾಜೆಕ್ಟ್ ಕೆ’ ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರತಂಡ ಈಗಾಗಲೇ ಹೇಳಿಕೊಂಡಿದೆ. ಇದೀಗ ನಟ ಅಮಿತಾಭ್ ಅವರು ಚಿತ್ರೀಕರಣ ಸಮಯದಲ್ಲಿ ಗಾಯಗೊಂಡಿರುವ ಕಾರಣ ಇನ್ನಷ್ಟು ಚೇರಿಸಿಕೊಳ್ಳಬೇಕಾಗಿರುವುದರಿಂದ ಚಿತ್ರೀಕರಣ ಇನ್ನಷ್ಟು ತಡವಾಗಬಹುದು ಎಂದು ವರದಿಯಾಗಿದೆ.
ವರದಿ ಪ್ರಕಾರ, ಬಿಗ್ ಬಿ ಅಮಿತಾಭ್ ಮೇಲೆ ಚಿತ್ರತಂಡ ಒತ್ತಡ ಹೇರುತ್ತಿಲ್ಲ. ನಿರ್ದೇಶಕ ನಾಗ್ ಅಶ್ವಿನ್ ಮತ್ತು ನಿರ್ಮಾಪಕರು ಯಾವುದೇ ಒತ್ತಡ ಹೇರುತ್ತಿಲ್ಲ. ಎಷ್ಟು ಸಮಯ ತೆಗೆದುಕೊಳ್ಳುತ್ತಾರೋ ಅಲ್ಲಿಯವರೆಗೆ ಕಾಯುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಅಮಿತಾಭ್ ಅವರು ಅಪಘಾತದ ಬಗ್ಗೆ ಬ್ಲಾಗ್ ಮೂಲಕ ಮಾಹಿತಿ ಹಂಚಿಕೊಂಡಿದ್ದರು. “ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ ಕೆ ಚಿತ್ರೀಕರಣದ ವೇಳೆ ಆಕ್ಷನ್ ಶಾಟ್ ಮಾಡುವಾಗ ನಾನು ಗಾಯಗೊಂಡಿದ್ದೇನೆ. ಪಕ್ಕೆಲುಬಿನ ಕಾರ್ಟಿಲೆಜ್ ಮುರಿದು, ಬಲ ಪಕ್ಕೆಲುಬಿನ ಸ್ನಾಯು ಹರಿದಿದೆ. ಚಿತ್ರೀಕರಣ ರದ್ದುಗೊಂಡಿದೆ. ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ವೈದ್ಯರು ಸಿಟಿ ಸ್ಕ್ಯಾನ್ ಮಾಡಿ, ಚಿಕಿತ್ಸೆ ಕೊಟ್ಟು ಮನೆಗೆ ಕಳುಹಿಸಿದ್ದಾರೆ. ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಉಸಿರಾಡುವಾಗ, ಕೈಗಳನ್ನು ಆಡಿಸುವಾಗ ನೋವಾಗುತ್ತದೆ. ನೋವು ಕಡಿಮೆಯಾಗುವುದುಕ್ಕೂ ಔಷಧ ಕೊಟ್ಟಿದ್ದಾರೆ. ಮಾಡಬೇಕಿದ್ದ ಎಲ್ಲ ಕೆಲಸಗಳನ್ನು ನಾನು ವಾಸಿಯಾಗುವವರೆಗೆ ರದ್ದು ಮಾಡಿದ್ದೇನೆ. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತೇನೆ. ಸಂಜೆ ವೇಳೆ ಮನೆ ಬಳಿ ಅಭಿಮಾನಿಗಳನ್ನು ಭೇಟಿ ಮಾಡಲಾಗದು. ದಯವಿಟ್ಟು ಯಾರೂ ಮನೆ ಹತ್ತಿರ ಬರಬೇಡಿ” ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: Actor Prabhas : ಸಲಾರ್ ಬೆನ್ನಲ್ಲೇ ಪ್ರಭಾಸ್ ಜತೆ ಪ್ರಶಾಂತ್ ನೀಲ್ ಮತ್ತೊಂದು ಸಿನಿಮಾ! ನಿರ್ಮಾಪಕ ದಿಲ್ ರಾಜು ಹೇಳಿದ್ದೇನು?
ಪ್ರಭಾಸ್ ಹಿಂದು ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಆದಿಪುರುಷ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಜೂನ್ 16ಕ್ಕೆ ಆದಿಪುರುಷ ಬಿಡುಗಡೆಯಾಗಲಿದೆ.