Site icon Vistara News

Actor Prabhas: ʼಕಣ್ಣಪ್ಪʼ ಚಿತ್ರಕ್ಕೆ ಎಂಟ್ರಿಕೊಟ್ಟ ಪ್ರಭಾಸ್‌; ಹೊಸ ಪೋಸ್ಟರ್‌ ರಿಲೀಸ್‌

Actor Prabhas

Actor Prabhas

ಹೈದರಾಬಾದ್‌: ತೆಲುಗು ಚಿತ್ರ ‘ಕಣ್ಣಪ್ಪ’ (Kannappa) ಸದ್ಯ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ. ನಟ, ರಾಜಕಾರಣಿ ಡಾ. ಮೋಹನ್ ಬಾಬು ನಿರ್ಮಾಣದ, ಮುಖೇಶ್ ಕುಮಾರ್ ಸಿಂಗ್ (Mukesh Kumar Singh) ನಿರ್ದೇಶನದ ಈ ಚಿತ್ರ ಬಹು ತಾರಾಗಣದಿಂದ ಈಗಾಗಲೇ ನಿರೀಕ್ಷೆ ಮೂಡಿಸಿದೆ. ಇದೀಗ ಮತ್ತೊಬ್ಬ ಪ್ಯಾನ್‌ ಇಂಡಿಯಾ ಸ್ಟಾರ್‌ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಪ್ರಭಾಸ್‌ ʼಕಣ್ಣಪ್ಪʼ ಚಿತ್ರದ ಭಾಗವಾಗುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿರುವ ‘ಕಣ್ಣಪ್ಪ’ ಸಿನಿಮಾದ ಶೂಟಿಂಗ್​ನಲ್ಲಿ ಈಗ ಪ್ರಭಾಸ್ (Actor Prabhas) ಭಾಗಿಯಾಗಿದ್ದಾರೆ.‌ ಚಿತ್ರತಂಡ ಅವರ ಪೋಸ್ಟರ್‌ ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ.

‘ಕಣ್ಣಪ್ಪ’ ಸಿನಿಮಾದಲ್ಲಿ ನಟ ವಿಷ್ಣು ಮಂಚು ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವ ಭಕ್ತ ಕಣ್ಣಪ್ಪನಾಗಿ ಅವರು ನಟಿಸುತ್ತಿದ್ದಾರೆ. ಇವರ ಜತೆಗೆ ಬಾಲಿವುಡ್‌ನ ಅಕ್ಷಯ್‌ ಕುಮಾರ್‌, ಬಹುಭಾಷಾ ನಟ, ಮಾಲಿವುಡ್‌ ಸ್ಟಾರ್‌ ಮೋಹನ್‌ ಲಾಲ್‌, ಮೋಹನ್‌ ಬಾಬು, ಶರತ್‌ ಕುಮಾರ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿ ಇದ್ದಾರೆ. ಮಾತ್ರವಲ್ಲ ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಪ್ರಭಾಸ್‌ ಎಂಟ್ರಿಯಾಗಿದ್ದು ಚಿತ್ರ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ

ವಿಶೇಷ ಎಂದರೆ ವಿವಿಧ ಬಾಷೆಯ ಕಲಾವಿದರು ಅಭಿನಯಿಸುತ್ತಿರುವ ʼಕಣ್ಣಪ್ಪʼ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ. ತೆಲುಗು ಜತೆಗೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಅದ್ಧೂರಿಯಾಗಿ ತೆರೆಗೆ ತರಲು ನಿರ್ಮಾಪಕರು ಯೋಜನೆ ರೂಪಿಸಿದ್ದಾರೆ. ನಾಸ್ತಿಕನಾದ ಕಣ್ಣಪ್ಪ ಮಹಾನ್ ಶಿವನ ಆರಾಧಕನಾಗಿ ಬದಲಾದ ವಿಸ್ಮಯಕಾರಿ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಈ ಹಿಂದೆ ಬಾಲಿವುಡ್ ನಟಿ ಕೃತಿ ಸನೂನ್‌ ಸಹೋದರಿ ನೂಪುರ್ ಸನೋನ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಕೆಲವು ದಿನಗಳ ಹಿಂದೆ ಕಾಳಹಸ್ತಿಯಲ್ಲಿ ನಡೆದ ಸಿನಿಮಾದ ಮುಹೂರ್ತದಲ್ಲಿಯೂ ಭಾಗಿಯಾಗಿದ್ದರು. ಆದರೆ ಚಿತ್ರದ ಶೂಟಿಂಗ್‌ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಈಗ ಹೊರ ನಡೆದಿದ್ದಾರೆ ಎನ್ನಲಾಗಿದೆ. ಹೊಸ ನಾಯಕಿಗಾಗಿ ಸಿನಿಮಾ ತಂಡ ಹುಟುಕಾಟ ನಡೆಸುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Vishnu Manchu: ‘ಕಣ್ಣಪ್ಪ’ ಸಿನಿಮಾ ಶೂಟಿಂಗ್ ವೇಳೆ ವಿಷ್ಣು ಮಂಚುಗೆ ಗಂಭೀರ ಗಾಯ

ಕನ್ನಡದಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌

ಶಿವಭಕ್ತ ಕಣ್ಣಪ್ಪ ಕುರಿತಾದ ಚಿತ್ರ ಕನ್ನಡದಲ್ಲಿ ಹಲವು ವರ್ಷಗಳ ಹಿಂದೆಯೇ ತಯಾರಾಗಿತ್ತು. ಡಾ. ರಾಜ್‌ಕುಮಾರ್ ‘ಬೇಡರ ಕಣ್ಣಪ್ಪ’ ಸಿನಿಮಾ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಎಚ್‌.ಎಲ್‌.ಎನ್‌.ಸಿಂಹ ನಿರ್ದೇಶನದ ಈ ಸಿನಿಮಾ 1954ರಲ್ಲಿ ತೆರೆ ಕಂಡಿತ್ತು. ಡಾ.ರಾಜ್‌ಕುಮಾರ್‌ ಬೇಡರ ಕಣ್ಣಪ್ಪ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದರು. ಚಿತ್ರಪ್ರೇಮಿಗಳು ಇಂದಿಗೂ ಈ ಸಿನಿಮಾವನ್ನು ನೆನಪಿಸಿಕೊಳ್ಳುತ್ತಾರೆ. ಹೀಗಾಗಿ ಇದೀಗ ವಿಷ್ಣು ಮಂಚು ಕಣ್ಣಪ್ಪನಾಗಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಅದಕ್ಕೆ ತಕ್ಕಂತೆ ಈಗಾಗಲೇ ರಿಲೀಸ್‌ ಆಗಿರುವ ಪೋಸ್ಟರ್‌ಗಳು ಗಮನ ಸೆಳೆದಿವೆ.

Exit mobile version