ಮುಂಬೈ: ಹಿಂದಿ ಸಿನಿಮಾ ಕ್ಷೇತ್ರದ ಅತ್ಯಂತ ಪ್ರಸಿದ್ಧ ನಟರಾಗಿದ್ದ ದಿ. ರಾಜ್ ಕಪೂರ್ (Actor Raj Kapoor) ಅವರು ಮುಂಬೈನ ಚೆಂಬೂರಿನಲ್ಲಿ ವಾಸಿಸುತ್ತಿದ್ದ ಬೃಹದಾಕಾರದ ಬಂಗಲೆಯನ್ನು ಗೋದ್ರೇಜ್ ಪ್ರಾಪರ್ಟೀಸ್ ಸಂಸ್ಥೆ ಖರೀದಿಸಿದೆ. ಈ ಬಂಗಲೆ ಮತ್ತು ಅದರ ಸುತ್ತಲಿನ ಜಾಗದ ವಿಸ್ತೀರ್ಣ ಒಂದು ಎಕರೆಯಷ್ಟು ಇರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ: ಕರೀನಾಗಿಂತ ಕರಿಷ್ಮಾಳನ್ನು ಇಷ್ಟಪಡುತ್ತಿದ್ದರಂತೆ ಅಜ್ಜ ರಾಜ್ ಕಪೂರ್
ಈ ಜಾಗದಲ್ಲಿ ಪ್ರೀಮಿಯಂ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸುವುದಾಗಿ ಗೋದ್ರೇಜ್ ಸಂಸ್ಥೆ ಹೇಳಿಕೊಂಡಿದೆ. ಈ ವಸತಿ ಯೋಜನೆಯಿಂದ ಸಂಸ್ಥೆಗೆ 500 ಕೋಟಿ ರೂ.ನಷ್ಟು ಹಣ ಬರಲಿದೆ ಎಂದೂ ಹೇಳಲಾಗಿದೆ. ಅದಾಗಿಯೂ ಈ ಜಾಗವನ್ನು ಕಪೂರ್ ಕುಟುಂಬದಿಂದ ತಾವೆಷ್ಟು ಹಣಕ್ಕೆ ಖರೀದಿಸಿದ್ದೇವೆ ಎನ್ನುವ ಮಾಹಿತಿಯನ್ನು ಸಂಸ್ಥೆ ಬಿಟ್ಟುಕೊಟ್ಟಿಲ್ಲ.
ಮುಂಬೈನ ಚೆಂಬೂರ್‌ನ ಡಿಯೋನಾರ್ ಫಾರ್ಮ್ ರಸ್ತೆಯಲ್ಲಿರುವ ಟಾಟಾ ಸಂಸ್ಥೆಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಪಕ್ಕದಲ್ಲಿಯೇ ರಾಜ್ ಕಪೂರ್ ಅವರ ಬಂಗಲೆಯಿದೆ. ರಿಯಲ್ ಎಸ್ಟೇಟ್ ಉದ್ಯಮಿ ಅನುಜ್ ಪುರಿ ಅವರ ಪ್ರಕಾರ ಚೆಂಬೂರಿನಲ್ಲಿ ಒಂದು ಎಕರೆ ಜಾಗದ ಬೆಲೆ 100ರಿಂದ 110 ಕೋಟಿ ರೂ.ನಷ್ಟಿದೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಸನಿಹದಲ್ಲಿರುವ ಈ ಜಾಗಕ್ಕೆ ಭಾರೀ ಬೇಡಿಕೆಯಿದೆ ಎಂದು ಅನುಜ್ ತಿಳಿಸಿದ್ದಾರೆ.
ಬಂಗಲೆಯನ್ನು ಮಾರಾಟ ಮಾಡಿರುವ ವಿಚಾರದಲ್ಲಿ ಮಾತನಾಡಿರುವ ರಾಜ್ ಕಪೂರ್ ಪುತ್ರ ರಣಧೀರ್ ಕಪೂರ್, “ಚೆಂಬೂರಿನಲ್ಲಿರುವ ಈ ಆಸ್ತಿಯು ನಮ್ಮ ಕುಟುಂಬಕ್ಕೆ ಹೆಚ್ಚು ಭಾವನಾತ್ಮಕವಾಗಿ ಹಾಗೆಯೇ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಸ್ಥಳದ ಅಭಿವೃದ್ಧಿಯ ಮುಂದಿನ ಹಂತಕ್ಕಾಗಿ ಮತ್ತು ಈ ಶ್ರೀಮಂತ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವುದಕ್ಕಾಗಿ ನಾವು ಆಸ್ತಿಯನ್ನು ಗೋದ್ರೇಜ್ ಸಂಸ್ಥೆಗೆ ಮಾರಾಟ ಮಾಡಿದ್ದೇವೆ” ಎಂದು ಹೇಳಿದ್ದಾರೆ.
ಗೋದ್ರೆಜ್ ಸಂಸ್ಥೆಯು ಈ ಹಿಂದೆ 2019ರ ಮೇ ತಿಂಗಳಲ್ಲಿ ಚೆಂಬೂರಿನಲ್ಲಿರುವ ರಾಜ್ ಕಪೂರ್ ಅವರ ಸ್ಟುಡಿಯೋ ಆದ ‘ಆರ್ ಕೆ ಸ್ಟುಡಿಯೊ’ ಅನ್ನೂ ಖರೀಸಿದಿತ್ತು. ಅಲ್ಲಿ ಸಂಸ್ಥೆಯು ಪ್ರೀಮಿಯಂ ಮಿಶ್ರ ಬಳಕೆಯ ಯೋಜನೆಯನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ವರ್ಷದ ಅಂತ್ಯದೊಳಗೆ ಅದು ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ.
ಗೋದ್ರೇಜ್ ಪ್ರಾಪರ್ಟೀಸ್ ಸಂಸ್ಥೆಯು ಮುಂಬೈ, ದೆಹಲಿ, ಪುಣೆ ಮತ್ತು ಬೆಂಗಳೂರಿನಲ್ಲಿ ತಮ್ಮ ನೆಲೆಯನ್ನು ಕಂಡುಕೊಡಿದೆ. ಈ ಹಣಕಾಸು ವರ್ಷವೊಂದರಲ್ಲೇ ಸಂಸ್ಥೆಯು ಸುಮಾರು 28,000 ಕೋಟಿ ರೂ. ಮಾರಾಟ ಸಾಮರ್ಥ್ಯವಿರುವ 15ಕ್ಕೂ ಹೆಚ್ಚು ಆಸ್ತಿ ಖರೀದಿ ಮಾಡಿದ್ದು, ಅಲ್ಲಿ ತಮ್ಮ ಯೋಜನೆಗಳನ್ನು ಅಭಿವೃದ್ಧಿಪಡಿಸಲಾರಂಭಿಸಿದೆ.