Site icon Vistara News

Actor Rajinikanth: ಬಾಲಿವುಡ್‌ ಖ್ಯಾತ ನಿರ್ಮಾಪಕರೊಂದಿಗೆ ಕೈ ಜೋಡಿಸಿದ ರಜನಿಕಾಂತ್‌; ತಲೈವಾ ಹೊಸ ಚಿತ್ರ ಯಾವಾಗ?

rajnikanth

rajnikanth

ಮುಂಬೈ: ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajinikanth) ಈ ಇಳಿವಯಸ್ಸಿನಲ್ಲಿಯೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹಬ್ಬಿದೆ. ಬಾಲಿವುಡ್‌ ನಿರ್ಮಾಪಕ ಸಾಜಿದ್‌ ನಾಡಿಯಾವಾಲ (Sajid Nadiadwala) ಅವರೊಂದಿಗೆ ತಲೈವಾ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಸಾಜಿದ್‌ ನಾಡಿಯಾವಾಲ ಮಾಹಿತಿ ನೀಡಿದ್ದಾರೆ. ಆದರೆ ಯಾವ ಚಿತ್ರ, ಯಾವಾಗ ಸೆಟ್ಟೇರಲಿದೆ ಮುಂತಾದ ವಿವರ ಇನ್ನೂ ಬಹಿರಂಗವಾಗಿಲ್ಲ.

ಸಾಜಿದಾ ನಾಡಿಯಾವಾಲ ಇತ್ತೀಚೆಗೆ ರಜನಿಕಾಂತ್‌ ಜತೆಗಿನ ಫೋಟೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಈ ಮೂಲಕ ಸೂಪರ್‌ ಸ್ಟಾರ್‌ ಜತೆ ಕೈಜೋಡಿಸುವ ಬಗ್ಗೆ ಸೂಚನೆ ನೀಡಿದ್ದಾರೆ. ʼʼರಜನಿಕಾಂತ್‌ ಜತೆ ಕೆಲಸ ಮಾಡುವುದು ನಿಜಕ್ಕೂ ಅತ್ಯಂತ ಗೌರವಯುತ ಘಳಿಗೆ. ನಾವು ಒಟ್ಟಿಗೆ ಪ್ರಯಾಣ ಆರಂಭಿಸಲು ತಯಾರಿ ನಡೆಸುತ್ತಿದ್ದೇವೆʼʼ ಎಂದು ಅವರು ಬರೆದುಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಕುತೂಹಲ ಗರಿಗೆದರಿದ್ದು, ನಿರೀಕ್ಷೆ ಮೂಡಿದೆ.

ಈ ಚಿತ್ರ ಯಾವ ಭಾಷೆಯಲ್ಲಿ ಮೂಡಿ ಬರಲಿದೆ? ನಿರ್ದೇಶಕ, ತಂತ್ರಜ್ಞರು ಯಾರು? ಊಳಿದ ಪಾತ್ರಗಳಲ್ಲಿ ಯಾರೆಲ್ಲ ಇರಲಿದ್ದಾರೆ ? ಎನ್ನುವ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಹೀಗಿದ್ದರೂ ಸಿನಿಮಾ ಬಗ್ಗೆ ಈಗಾಗಲೇ ಬಹುದೊಡ್ಡ ಮಟ್ಟಿನ ಹೈಪ್‌ ಕ್ರಿಯೇಟ್‌ ಆಗಿದೆ. ಸಿನಿಮಾ ರಂಗದ ಇಬ್ಬರು ದಿಗ್ಗಜರು ಒಂದಾಗುತ್ತಿರುವುದುರಿಂದ ಈ ಮಟ್ಟಿನ ನಿರೀಕ್ಷೆ ಮೂಡಿದೆ.

ಇತ್ತೀಚೆಗೆ ತೆರೆ ಕಂಡ ರಜನಿಕಾಂತ್‌ ಅಭಿನಯದ ತಮಿಳು ಚಿತ್ರ ʼಲಾಲ್‌ ಸಲಾಂʼ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಸಾಧಿಸಲಿಲ್ಲ. ತಮ್ಮ ಮಗಳು ಐಶ್ವರ್ಯಾ ನಿರ್ದೇಶನದ ಈ ಸಿನಿಮಾದಲ್ಲಿ ರಜನಿಕಾಂತ್‌ ಅತಿಥಿ ಪಾತ್ರ ನಿರ್ವಹಿಸಿದ್ದರು. ಕ್ರಿಕೆಟ್‌ ಆಧಾರಿತ ಈ ಚಿತ್ರದಲ್ಲಿ ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ರಜನಿಕಾಂತ್‌ ಇದ್ದಾರೆ ಎನ್ನುವ ಕಾರಣಕ್ಕೆ ʼಲಾಲ್‌ ಸಲಾಂʼ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಅದಕ್ಕೂ ಮೊದಲು ತೆರೆಕಂಡ ರಜನಿಕಾಂತ್‌ ನಟನೆಯ ʼಜೈಲರ್‌ʼ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿತ್ತು. ಸದ್ಯ ಅವರು ʼವೆಟ್ಟೈಯನ್‌ʼ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟಿ.ಜೆ.ಜ್ಞಾನವೇಲ್ ನಿರ್ದೇಶನದ ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌, ಫಹಾದ್‌ ಫಾಸಿಲ್‌, ರಾಣಾ ದಗ್ಗುಬಾಟಿ, ಮಂಜು ವಾಯಿಯರ್‌, ರಿತಿಕಾ ಸಿಂಗ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Actor Rajinikanth: ರಜನಿಕಾಂತ್‌ ಅಭಿನಯದ ʼವೆಟ್ಟೈಯನ್‌ʼ ಚಿತ್ರದ ಪೋಸ್ಟರ್‌ ರಿಲೀಸ್‌; ಇಲ್ಲಿದೆ ತಲೈವಾ ಹೊಸ ಲುಕ್‌

ಸಾಜಿದ್‌ ನಾಡಿಯಾವಾಲ ಬಾಲಿವುಡ್‌ನ ಜನಪ್ರಿಯ ಚಿತ್ರ ನಿರ್ಮಾಪಕರಲ್ಲಿ ಒಬ್ಬರು. ಜತೆಗೆ ಇರುವ ನಿರ್ದೇಶಕ, ಸ್ಕ್ರಿಪ್ಟ್‌ ಬರಹಗಾರರೂ ಹೌದು. ನಾಡಿಯಾವಾಲ ಗ್ರ್ಯಾಂಡ್‌ಸನ್‌ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನ ಅಡಿಯಲ್ಲಿ ಇವರು ಅನೇಕ ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ʼಹೌಸ್‌ಫುಲ್‌ʼ ಸರಣಿ, ʼಕಿಕ್‌ʼ, ʼಜುಡ್ವ 2ʼ ಇತ್ಯಾದಿ ಸೂಪರ್‌ ಹಿಟ್‌ ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ವರ್ಷ ʼಹೌಸ್‌ಫುಲ್‌ 5ʼ ಸಿನಿಮಾ ತೆರೆಗೆ ಬರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version