ಕನ್ನಡದ ಖ್ಯಾತ ನಟ-ನಿರ್ದೇಶಕ, ಅದರಲ್ಲೂ ಕಾಂತಾರ ಸಿನಿಮಾದಿಂದಾಗಿ ಡಿವೈನ್ ಸ್ಟಾರ್ ಎಂದೇ ಖ್ಯಾತಿ ಪಡೆದ ರಿಷಬ್ ಶೆಟ್ಟಿ (Rishab Shetty) ಅವರು ತಮ್ಮ ಕುಟುಂಬ ಸಹಿತವಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲಕ್ಕೆ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪತ್ನಿ ಪ್ರಗತಿ ಶೆಟ್ಟಿ, ಮಕ್ಕಳಾದ ರಾದ್ಯ, ರನ್ವಿತ್ ಜತೆ ತಾವು ದೇಗುಲಗಳಿಗೆ ಭೇಟಿ ಕೊಟ್ಟ ಮತ್ತು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಫೋಟೋಗಳನ್ನು ರಿಷಬ್ ಶೆಟ್ಟಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೀರೇಂದ್ರ ಹೆಗ್ಗಡೆ ಅವರು ರಿಷಬ್ ಶೆಟ್ಟಿಯ ಪುಟ್ಟ ಮಕ್ಕಳಿಗೆ ಮೂರ್ನಾಲ್ಕು ಆಟಿಕೆಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ರಿಷಬ್ ಶೆಟ್ಟಿ ‘ಇತ್ತೀಚೆಗೆ ಕುಟುಂಬ ಸಮೇತರಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಹಾಗು ಕುಕ್ಕೆಗೆ ಭೇಟಿ ನೀಡಿ ದೇವರ ದರ್ಶನದ ಜೊತೆ ಧರ್ಮಾಧಿಕಾರಿಗಳಿಂದ ಆಶೀರ್ವಾದವನ್ನು ಪಡೆದೆವು’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ಎಂದಿನಂತೆ ಲುಂಗಿ ಧರಿಸಿ, ಬಿಳಿ ಶರ್ಟ್ ಹಾಕಿದ್ದರು. ಪ್ರಗತಿ ಶೆಟ್ಟಿಯವರೂ ಸಾಂಪ್ರದಾಯಿಕವಾಗಿ ಸೀರೆ ಉಟ್ಟಿದ್ದರು. ಇದೇ ವೇಳೆ ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಗ ರನ್ವಿತ್ ಮುಡಿಯನ್ನೂ ಕೊಟ್ಟಿದ್ದಾರೆ.
ರಿಷಬ್ ಶೆಟ್ಟಿಯವರು ಕಾಂತಾರ ಸಿನಿಮಾ ಮುಗಿದ ಮೇಲೆ ವಿವಿಧ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಂತಾರ 2 ಸಿನಿಮಾ ಚಿತ್ರೀಕರಣವೂ ನಡೆಯುತ್ತಿದೆ. ಈ ಮಧ್ಯೆ ಅವರು ತಮ್ಮ ಕುಟುಂಬಕ್ಕೆ ಸಾಕಷ್ಟು ಸಮಯ ಕೊಡುತ್ತಿದ್ದಾರೆ. ಇತ್ತೀಚೆಗೆ ಅವರು ಫ್ಯಾಮಿಲಿಯೊಂದಿಗೆ ಭರ್ಜರಿ ಫೋಟೋಶೂಟ್ ನಡೆಸಿದ್ದರು. ಅದರ ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಏಪ್ರಿಲ್ನಲ್ಲಿ ಅವರು ಬಂಟ್ವಾಳ ಸಮೀಪದ ಮುತ್ತೂರು ನಟ್ಟಿಲ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು. ಕಾಂತಾರ-2 ಪ್ರಿಕ್ವೆಲ್‌ನ ಚಿತ್ರೀಕರಣಕ್ಕೆ ಮುಂಚಿತವಾಗಿ, ರಿಷಬ್ ಮತ್ತೊಮ್ಮೆ ಪಂಜುರ್ಲಿ ದೈವದ ಆಶೀರ್ವಾದವನ್ನು ಪಡೆದಿದ್ದರು.