ಬೆಂಗಳೂರು: ಚಂದನವನದ ನಟ ಶರಣ್ (Actor Sharan) ಜನ್ಮದಿನ (ಫೆ.6) ಇಂದು. ಈ ವಿಶೇಷ ದಿನದಂದೇ ಅವರ ಮುಂದಿನ ಚಿತ್ರ ಘೋಷಣೆಯಾಗಿದೆ. ʼಪುಗ್ಸಟ್ಟೆ ಲೈಫು ಪುರುಸೊತ್ತೇ ಇಲ್ಲʼ ಸಿನಿಮಾ ಖ್ಯಾತಿಯ ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರು ಶರಣ್ ಅವರ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಇದನ್ನೂ ಓದಿ: Kannada New Movie | ನಟ ಶರಣ್ ಹಾಡಿರುವ ʻಧರಣಿ ಮಂಡಲ ಮಧ್ಯದೊಳಗೆʼ ಚಿತ್ರದ ಸಾಂಗ್ ರಿಲೀಸ್!
ಡಾರ್ಕ್ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಶರಣ್ ಪಾತ್ರ ಹಿಂದಿನ ಸಿನಿಮಾಗಳಿಗಿಂತ ಡಿಫರೆಂಟ್ ಆಗಿರಲಿದೆ. ಅವರು ಎಲೆಕ್ಟ್ರಿಷಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಗಲಕೋಟೆಯಲ್ಲಿ ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದ್ದು, ಉತ್ತರ ಕರ್ನಾಟಕ ಶೈಲಿ ಭಾಷೆಯಲ್ಲಿ ಶರಣ್ ಗಮನ ಸೆಳೆಯಲಿದ್ದಾರೆ ಎಂದು ನಿರ್ದೇಶಕ ಅರವಿಂದ್ ಕುಪ್ಲಿಕರ್ ತಿಳಿಸಿದ್ದಾರೆ.
ಶರಣ್ ಅವರ ಜನ್ಮದಿನದ ಪ್ರಯುಕ್ತ ಚಿತ್ರತಂಡವು ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಟನಿಗೆ ಶುಭಾಶಯ ಕೋರಿದೆ.
ಶ್ರೀಧರ ಕೃಪಾ ಕಂಬೈನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದ್ದು, ಬಿ.ಬಸವರಾಜ್ ಹಾಗೂ ಶ್ರೀಧರ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡುತ್ತಿದ್ದಾರೆ. ಸಂಚಾರಿ ವಿಜಯ್ ಅಭಿನಯದ ‘ಪುಗ್ಸಟ್ಟೆ ಲೈಫು ಪುರುಸೋತ್ತೇ ಇಲ್ಲ’ ಸಿನಿಮಾ ನಂತರ ಅರವಿಂದ್ ಕುಪ್ಲಿಕರ್ ಆಕ್ಷನ್ ಕಟ್ ಹೇಳುತ್ತಿರುವ ಎರಡನೇ ಸಿನಿಮಾವಿದು.
ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿದಂತೆ ಹೊಸ ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ಇದೇ ತಿಂಗಳ 20ರಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದ ಟೈಟಲ್ ಹಾಗೂ ಸಿನಿಮಾ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಸದ್ಯದಲ್ಲೇ ಹಂಚಿಕೊಳ್ಳಲಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಉಲ್ಲಾಸ್ ಹೈದೂರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.