ಜೈಪುರ: ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu) ಅವರು ಸದ್ದಿಲ್ಲದೆ ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್ ಮಥಿಯಾಸ್ ಬೋ (Mathias Boe) ಅವರನ್ನು ಮದುವೆಯಾಗಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ (Udaipur) ಮಾರ್ಚ್ 23ರಂದು ತಾಪ್ಸಿ ಪನ್ನು ಹಾಗೂ ಮಥಿಯಾಸ್ ಬೋ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಕುರಿತು ದಂಪತಿಯು ಅಧಿಕೃತ ಮಾಹಿತಿ ನೀಡದಿದ್ದರೂ, ತಾಪ್ಸಿ ಪನ್ನು ಅವರ ಗೆಳೆಯರು, ಕುಟುಂಬಸ್ಥರು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು, ಫೋಟೊಗಳ ಮೂಲಕ ಸುಳಿವು ನೀಡಿದ್ದಾರೆ.
ತಾಪ್ಸಿ ಪನ್ನು ಮದುವೆಗೆ ನಿರ್ದೇಶಕ ಅನುರಾಗ್ ಕಶ್ಯಪ್, ನಿರ್ಮಾಪಕಿ ಕನ್ನಿಕಾ ಧಿಲ್ಲೋನ್, ನಟ ಅಭಿಷೇಕ್ ಥಾಪಿಯಾಲ್, ಥಪ್ಪಡ್ ಸಿನಿಮಾದ ನಟ ಪಾವೈಲ್ ಗುಲಾಟಿ ಸೇರಿ ಹಲವರು ಸಾಕ್ಷಿಯಾಗಿದ್ದಾರೆ. ತಾಪ್ಸಿ ಪನ್ನು ಅವರ ಸಹೋದರಿ ಶಗುನ್ ಪನ್ನು ಅವರು ಕೂಡ ಮದುವೆ ಕಾರ್ಯಕ್ರಮವೊಂದರ ಫೋಟೊ ಹಂಚಿಕೊಂಡು ಮದುವೆ ಕುರಿತು ಸುಳಿವು ನೀಡಿದ್ದಾರೆ. ತಾಪ್ಸಿ ಪನ್ನು ಅವರ ಗೆಳೆಯ-ಗೆಳತಿಯರು ಕೂಡ ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಶೇರ್ ಮಾಡುವ ಮೂಲಕ ನಟಿಯ ಮದುವೆಯ ಸುಳಿವು ನೀಡಿದ್ದಾರೆ.
ಬಾಲಿವುಡ್ ನಟಿ ಹಾಗೂ ಮಥಿಯಾಸ್ ಬೋ ಅವರು ಶೀಘ್ರದಲ್ಲೇ ತಮ್ಮ ಮದುವೆ ಕುರಿತು ಘೋಷಣೆ ಮಾಡಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆದಾಗ್ಯೂ, ನವ ದಂಪತಿಯು ಮುಂಬೈನಲ್ಲಿ ರಿಸೆಪ್ಶನ್ ಆಯೋಜಿಸುವ ಮೂಲಕ ಬಾಲಿವುಡ್ ನಟ-ನಟಿಯರು ಸೇರಿ ನೂರಾರು ಗಣ್ಯರಿಗೆ ಆಹ್ವಾನಿಸಲಿದ್ದಾರೆ ಎಂದು ತಿಳಿದುಬಂದಿದೆ. ಉದಯಪುರದಲ್ಲಿ ನಡೆದ ಮದುವೆ ಸಮಾರಂಭಕ್ಕೆ ತೀರಾ ಆಪ್ತರು ಹಾಗೂ ಸಂಬಂಧಿಕರಿಗೆ ಮಾತ್ರ ಆಹ್ವಾನವಿತ್ತು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Deepika Das Reception: ಸದ್ದಿಲ್ಲದೆ ಮದುವೆಯಾದ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ದೀಪಿಕಾ ದಾಸ್!
ಪ್ರೀತಿ ಶುರುವಾಗಿದ್ದು ಹೇಗೆ?
ತಾಪ್ಸಿ ಪನ್ನು ಹಾಗೂ ಡೆನ್ಮಾರ್ಕ್ ಬ್ಯಾಡ್ಮಿಂಟನ್ ಕೋಚ್ ಆಗಿರುವ ಮಥಿಯಾಸ್ ಬೋ ಅವರು 2013ರಿಂದಲೂ ಪ್ರೀತಿಸುತ್ತಿದ್ದಾರೆ. ಇದೇ ವರ್ಷ ನಡೆದ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ಭೇಟಿಯು ಸ್ನೇಹವಾಗಿ, ಸ್ನೇಹದಿಂದ ಪ್ರೀತಿಯಾಗಿ ಮಾರ್ಪಾಡಾಗಲು ತುಂಬ ದಿನ ಬೇಕಾಗಲಿಲ್ಲ ಎಂದು ತಿಳಿದುಬಂದಿದೆ. ಡಂಕಿ, ಥಪ್ಪಡ್, ಬದ್ಲಾ ಸೇರಿ ಹಲವು ಸಿನಿಮಾಗಳಲ್ಲಿ ತಾಪ್ಸಿ ಪನ್ನು ನಟಿಸಿದ್ದಾರೆ. ತಾಪ್ಸಿ ಪನ್ನು ನಟಿಸಿದ ಖೇಲ್ ಖೇಲ್ ಮೇ ಸೇರಿ ಹಲವು ಸಿನಿಮಾಗಳು ಬಿಡುಗಡೆಯಾಗಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ