ಚೆನ್ನೈ: ಗುರುವಾರ (ಡಿ. 28) ಚೆನ್ನೈಯಲ್ಲಿ ನಿಧನರಾದ ನಟ, ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಸಂಸ್ಥಾಪಕ ವಿಜಯಕಾಂತ್ (Vijayakanth) ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ನಟ ದಳಪತಿ ವಿಜಯ್ (Actor Vijay) ಮೇಲೆ ಹಲ್ಲೆ ನಡೆದಿದೆ. ಅಗಲಿದ ನಾಯಕನಿಗೆ ಅಂತಿಮ ಗೌರವ ಸಲ್ಲಿಸಲು ಆಗಮಿಸಿದ ವಿಜಯ್ ಮೇಲೆ ಕೋಪಗೊಂಡ ಗುಂಪು ಹಲ್ಲೆ ನಡೆಸಿದೆ. ಒಬ್ಬರಂತೂ ಚಪ್ಪಲಿಯಿಂದ ಎಸೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೆನ್ನೈನಲ್ಲಿ ನಡೆದ ವಿಜಯ್‌ಕಾಂತ್ ಅವರ ಅಂತ್ಯಕ್ರಿಯೆಯಲ್ಲಿ ಹಲವು ತಮಿಳು ಚಲನಚಿತ್ರ ತಾರೆಯರು ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ವಿಜಯ್ ತಮ್ಮ ಅಂತಿಮ ಗೌರವವನ್ನು ಸಲ್ಲಿಸಲು ಜನಸಮೂಹದ ನಡುವೆ ಹೋಗುತ್ತಿರುವುದು ಕಂಡುಬಂದಿದೆ. ವಿಜಯಕಾಂತ್ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿ ವಿಜಯ್ ಹೊರಗೆ ಹೋಗುವಾಗ ಜನರ ಗುಂಪು ಅವರನ್ನು ಸುತ್ತುವರಿಯಿತು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ವಿಜಯ್ ಮೇಲೆ ಚಪ್ಪಲಿ ಎಸೆದಿರುವ ವಿಡಿಯೊದಲ್ಲಿ ಕಂಡು ಬಂದಿದೆ. ಯಾವ ಕಾರಣಕ್ಕೆ ಈ ದಾಳಿ ನಡೆದಿದೆ ಎನ್ನುವುದು ತಿಳಿದು ಬಂದಿಲ್ಲ. ಈ ಘಟನೆಯು ವಿಜಯ್ ಮತ್ತು ನಟ ಅಜಿತ್ ಅಭಿಮಾನಿಗಳ ನಡುವಿನ ಮಾತಿನ ಚಕಮಕಿಗೆ ಕಾರಣವಾಗಿದೆ. ಈಗ ವಿಜಯ್ ಮೇಲೆ ಚಪ್ಪಲಿ ಒಗೆದಿರುವುದು ಯಾರು ಎಂಬುದು ಖಾತ್ರಿಯಾಗಿಲ್ಲ.
ಏನಾಯಿತು?
ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ವಿಜಯ್ ಅವರಿಗೆ ರಕ್ಷಣೆ ಒದಗಿಸಿದ್ದರೂ ಗುಂಪುನಲ್ಲಿದ್ದ ಹಲವರು ಅವರನ್ನು ಸ್ಪರ್ಶಿಸತೊಡಗಿದ್ದರು. ಅವರು ತಮ್ಮ ಕಾರನ್ನು ಹತ್ತಲು ಪ್ರಯತ್ನಿಸಿದಾಗ ಚಪ್ಪಲಿ ಅವರತ್ತ ಎಸೆಯಲಾಯಿತು. ಹಲವರು ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. “ವಿಜಯ್ ಅವರಿಗೆ ಸರಿಯಾಗಿ ಗೌರವ ಸಲ್ಲಿಸಲು ಸಹ ಸಾಧ್ಯವಾಗುತ್ತಿಲ್ಲ. ಅಭಿಮಾನಿಗಳ ಪ್ರೀತಿಯನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಇದು ಸರಿಯಾದ ಸಮಯವಲ್ಲ” ಎಂದು ಒಬ್ಬರು ಹೇಳಿದ್ದಾರೆ. “ಎಲ್ಲದಕ್ಕೂ ಒಂದು ಸ್ಥಳ ಮತ್ತು ಸಮಯವಿದೆ. ನೆಚ್ಚಿನ ನಟರು ಗೌರವ ಸಲ್ಲಿಸಲು ಬಂದಾಗ ಅಭಿಮಾನಿಗಳು ಸಂಯಮ ಮತ್ತು ಘನತೆಯನ್ನು ತೋರಿಸಬೇಕು” ಎಂದು ಮತ್ತೊಬ್ಬರು ವಿಡಿಯೊಗೆ ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಹಲವರನ್ನು ಬೆಚ್ಚಿ ಬೀಳಿಸಿದೆ.
Thalapathy @actorvijay paid his last respects to Captain #Vijayakanth sir#RIPCaptainVijayakanth 💔 pic.twitter.com/QBFkNlJg4I
— Kumar M (@kumarm0027) December 28, 2023
ಕೋವಿಡ್‌ನಿಂದ ಬಳಲಿದ್ದ ವಿಜಯಕಾಂತ್
ವಿಜಯಕಾಂತ್ ಅವರಿಗೆ 71 ವರ್ಷ ವಯಸ್ಸಾಗಿತ್ತು. ಕೋವಿಡ್‌ನಿಂದ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಅವರ ಪತ್ನಿ ಪ್ರೇಮಲತಾ ಕೆಲವು ಹಿಂದೆ ಪಕ್ಷದ ಅಧಿಕಾರವನ್ನು ವಹಿಸಿಕೊಂಡಿದ್ದರು. ಕಾಜಾ ನಿರ್ದೇಶಿಸಿದ ಇನಿಕ್ಕುಮ್ ಇಳಮೈ (1979) ಸಿನಿಮಾ ಮೂಲಕ ವಿಜಯಕಾಂತ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ವೃತ್ತಿಜೀವನದಲ್ಲಿ, ವಿಜಯಕಾಂತ್ ʼಅಮ್ಮನ್ ಕೋಯಿಲ್ ಕಿಜಕ್ಕಲೆʼ, ʼಚಿನ್ನ ಗೌಂಡರ್ʼ, ʼವೈದೇಗಿ ಕತಿರುಂಡಾಲ್ʼ, ʼವಲ್ಲರಸುʼ, ʼವನತೈ ಪೋಲಾʼ, ʼಕ್ಯಾಪ್ಟನ್ ಪ್ರಭಾಕರನ್ʼ, ʼಉಳವು ತುರೈʼ, ʼಕಣ್ಣುಪಾದ ಪೋಕುತಯ್ಯʼ, ʼರಮಣʼ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2015ರ ತಮಿಳು ಚಲನಚಿತ್ರ ‘ಸಗಪ್ತಂ’ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: Vijayakanth: ಸಿನಿಮಾಗೆ ಜೈ, ರಾಜಕೀಯಕ್ಕೂ ಸೈ; ವಿಜಯಕಾಂತ್ ಸಾಗಿದ ಹಾದಿ ರೋಚಕ