ಬೆಂಗಳೂರು: ರಾಜ್ಯದ ಚಿತ್ರಮಂದಿರಗಳಲ್ಲಿ ಇನ್ನು ಮುಂದೆ ರಾಷ್ಟ್ರಗೀತೆಯ ಜತೆಗೆ ನಾಡಗೀತೆಯನ್ನೂ ಹಾಕುವಂತೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ, ನಟ ಝೈದ್ ಖಾನ್ (Basavaraj Bommai) ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಶನಿವಾರ (ಅ.1) ಮನವಿ ಸಲ್ಲಿಸಿದ್ದಾರೆ. ಆರ್.ಟಿ.ನಗರದಲ್ಲಿರುವ ಸಿಎಂ ಮನೆಗೆ ಭೇಟಿ ನೀಡಿದ ನಟ, ಇದರ ಜತೆಗೆ ತಮ್ಮ ನೂತನ ಚಿತ್ರ ʻಬನಾರಸ್ʼ ಸಿನಿಮಾ ವೀಕ್ಷಣೆಗೂ ಆಹ್ವಾನಿಸಿದ್ದಾರೆ.
ನಟ ಝೈದ್ ಖಾನ್ ಮಾತನಾಡಿ, ʻʻನಮ್ಮ ದೇಶ, ನಾಡು, ನುಡಿಯ ಸಂಕೇತವಾಗಿರುವ ರಾಷ್ಟ್ರ ಗೀತೆ ಹಾಗೂ ನಾಡಗೀತೆಗಳು ಹಿರಿಯರಿಂದ ಕಿರಿಯವರೆಗೂ ಎಲ್ಲರ ಬಾಯಲ್ಲೂ ಮೊಳಗಬೇಕು. ನಾಡಗೀತೆಯ ಮಹತ್ವ ಇಂದಿನ ಮತ್ತು ಮುಂದಿನ ಪೀಳಿಗೆಯ ಹೃದಯದೊಳಗೆ ಇಳಿಯಬೇಕು. ಹಾಗಾಗಿ ಮುಖ್ಯಮಂತ್ರಿಗಳು ರಾಜ್ಯದ ಚಿತ್ರಮಂದಿರಗಳಲ್ಲಿ ಇನ್ನು ಮುಂದೆ ರಾಷ್ಟ್ರಗೀತೆಯ ಜತೆಗೆ ನಾಡಗೀತೆಯೂ ಮೊಳಗುವಂತೆ ಮಾಡಬೇಕು. ಕನ್ನಡದ ಅಸ್ಮಿತೆಯನ್ನು ಮತ್ತೆ ನೆನಪಿಸುವ ನಿಟ್ಟಿನಲ್ಲಿ ಈ ಪ್ರಯೋಗ ಅಭೂತಪೂರ್ವ ಯಶಸ್ಸು ಗಳಿಸುವುದು ನಿಶ್ಚಿತ. ಏಕೆಂದರೆ ಕನ್ನಡದ ಬಗ್ಗೆ ಹೆಚ್ಚು ಅಭಿಮಾನವನ್ನು ಕನ್ನಡ ಚಿತ್ರ ಪ್ರೇಮಿಗಳು ಹೊಂದಿದ್ದಾರೆ. ಕನ್ನಡ ರಾಜ್ಯೋತ್ಸವ ದಿನದಿಂದ ನಾಡಗೀತೆ ಕಡ್ಡಾಯ ಮಾಡಿ ತಕ್ಷಣವೇ ಆದೇಶ ಹೊರಡಿಸಬೇಕು” ಎಂದು ಮನವಿ ಮಾಡಿದ್ದಾರೆ.
ಚಲನಚಿತ್ರ ಮಂಡಳಿಯವರೊಂದಿಗೆ ಚರ್ಚಿಸಿ ಈ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ನಟ ಝೈದ್ ಖಾನ್ ಹೇಳಿದರು.
ಇದನ್ನೂ ಓದಿ | ವಿಧಾನಸೌಧದಲ್ಲಿ ʼಅಪ್ಪುʼಗೆ ಕರ್ನಾಟಕ ರತ್ನ ಪ್ರದಾನ: ಮೊದಲ ಬಾರಿ ಕಲಾಕ್ಷೇತ್ರದಿಂದ ಹೊರಗೆ ರಾಜ್ಯೋತ್ಸವ
ಝೈದ್ ಖಾನ್ ಅಭಿನಯಿಸಿರುವ ಪ್ಯಾನ್ ಇಂಡಿಯಾ ಚಿತ್ರ “ಬನಾರಸ್” ಬಾಯ್ಕಾಟ್ ಮಾಡುವ ಕೂಗು ಕೇಳಿ ಬರುತ್ತಿದೆ ಎಂದು ಮಾಧ್ಯಮದವರು ಪ್ರಶ್ನಿಸಿದರು. ಆಗ ಝೈದ್, ʻʻನಾನು ಒಬ್ಬ ಕಲಾವಿದ. ಪ್ರಾಮಾಣಿಕವಾಗಿ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದೇನೆ. ಇದರಲ್ಲಿ ನನ್ನದೇನು ತಪ್ಪಿದೆ? ಸೋಲು ಮತ್ತು ಗೆಲುವು ಎರಡನ್ನೂ ಸಮನಾಗಿ ತೆಗೆದುಕೊಳ್ಳುವ ಸ್ವಭಾವ ನನ್ನದು. ನಾನು ಈ ನೆಲದ ಕಲಾವಿದ. ಜನ ಚಿತ್ರ ನೋಡಿ ಆಶೀರ್ವದಿಸುತ್ತಾರೆ ಎಂದು ನಂಬಿದ್ದೇನೆʼʼ ಎಂದು ಪ್ರತಿಕ್ರಿಯಿಸಿದರು. ಈ ವೇಳೆ ವಿವಿಧ ಕನ್ನಡಪರ ಸಂಘಟನೆ, ದಲಿತಪರ ಸಂಘಟನೆಗಳ ಮುಖಂಡರು ಹಾಗೂ ಮತ್ತಿತರರು ಝೈದ್ ಖಾನ್ ಅವರೊಂದಿಗಿದ್ದರು.
ಬನಾರಸ್ ಸಿನಿಮಾ ನವೆಂಬರ್ 4ಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳುತ್ತಿದೆ.
ಇದನ್ನೂ ಓದಿ | Raj Kundra | ಅಶ್ಲೀಲ ಸಿನಿಮಾ ದಂಧೆಯಲ್ಲಿ ನಾನು ಅಪರಾಧಿಯಲ್ಲ; ಪೊಲೀಸರ ವಿರುದ್ಧ ಸಿಬಿಐಗೆ ದೂರು ಕೊಟ್ಟ ಶಿಲ್ಪಾ ಶೆಟ್ಟಿ ಪತಿ