ಮುಂಬೈ: ಸಲ್ಮಾನ್ ಖಾನ್ ಅವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ʼಮೈನೆ ಪ್ಯಾರ್ ಕಿಯಾʼ ಸಿನಿಮಾದಲ್ಲಿ ಸನ್ಮಾನ್‌ಗೆ ಜೋಡಿಯಾಗಿದ್ದ ನಟಿ ಭಾಗ್ಯಶ್ರೀ ಕೂಡ ನಟಿಸಿದ್ದಾರೆ. ಆ ದಿನಗಳಲ್ಲಿ ಸಲ್ಮಾನ್ ಮತ್ತು ಭಾಗ್ಯಶ್ರೀ (Actress Bhagyashree) ಪ್ರೀತಿಯಲ್ಲಿದ್ದಾರೆ ಎನ್ನುವ ವದಂತಿಯೂ ಹಬ್ಬಿಕೊಂಡಿತ್ತು. ಈ ವಿಚಾರದ ಬಗ್ಗೆ ನಟಿ ಇದೀಗ ಮಾತನಾಡಿದ್ದಾರೆ.
ಭಾಗ್ಯಶ್ರೀ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು, ಆಗ ತಮ್ಮ ಮತ್ತು ಸಲ್ಮಾನ್ ಅವರ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. “ನನಗೆ ನನ್ನ ಮೊದಲನೇ ಮಗುವಿನ ಡೆಲಿವರಿ ಆಗಿ ಮಾರನೇ ದಿನವೇ ಪತ್ರಕರ್ತರೊಬ್ಬರು ನನ್ನ ಬಳಿ ಬಂದರು. ನನ್ನ ಎದುರೇ ನನ್ನ ಪತಿ ಬಳಿ, ʼಸಲ್ಮಾನ್ ಜತೆ ನಿಮ್ಮ ಪತ್ನಿಯ ಅಫೇರ್ ನಡೆಯುತ್ತಿತ್ತು. ಇದೀಗ ಅವರು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ನಿಮಗೆ ಏನೆನ್ನಿಸುತ್ತಿದೆ?ʼ ಎಂದು ಕೇಳಿದರು. ಅಷ್ಟು ಕೆಟ್ಟ ಅನುಭವ ನನಗೆ ಎಂದಿಗೂ ಆಗಿರಲಿಲ್ಲ” ಎಂದು ಭಾಗ್ಯಶ್ರೀ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಡೈಮಂಡ್ ಕಿವಿಯೋಲೆ ಕಳವು, ಇವುಗಳ ಬೆಲೆ ಎಷ್ಟು?
“ನನ್ನೊಂದಿಗೆ ಯಾರೊಬ್ಬರೂ ಆ ರೀತಿಯಲ್ಲಿ ಮಾತನಾಡಿರಲೇ ಇಲ್ಲ. ಮೈನೆ ಪ್ಯಾರ್ ಕಿಯಾ ಸಿನಿಮಾದಲ್ಲಿ ಸಿನಿಮಾ ಚಿತ್ರೀಕರಣ ವೇಳೆಯೂ ಕೂಡ ಸಲ್ಮಾನ್ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ನಡೆದುಕೊಳ್ಳುತ್ತಿದ್ದರು. ನಮ್ಮಿಬ್ಬರ ನಡುವೆ ಸ್ನೇಹ ಬಿಟ್ಟು ಬೇರೇನೂ ಇರಲಿಲ್ಲ. ಯಾರಾದರೂ ಈ ರೀತಿಯಲ್ಲಿ ನನ್ನ ಪತಿಯೆದುರೇ ಮಾತನಾಡುವುದಾದರೂ ಹೇಗೆ ಸಾಧ್ಯ ಎಂದು ನಾನು ಆಶ್ಚರ್ಯಪಟ್ಟಿದ್ದೆ. ಅಂದಿನಿಂದ ನಾನು ಸಿನಿಮಾ ಕುರಿತಾದ ಸುದ್ದಿಗಳನ್ನು ಓದುವುದನ್ನೂ ನಿಲ್ಲಿಸಿದೆ. ಹಾಗೆಯೇ ಸಿನಿಮಾ ರಂಗದಿಂದಲೂ ದೂರ ಉಳಿದೆ” ಎಂದು ಭಾಗ್ಯಶ್ರೀ ಹೇಳಿದ್ದಾರೆ.
ಭಾಗ್ಯಶ್ರೀ ಅವರು 1989ರಲ್ಲಿ ಮೈನೆ ಪ್ಯಾರ್ ಕಿಯಾ ಸಿನಿಮಾ ಮೂಲಕ ಸಿನಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟವರು. ನಂತರ ಅವರು ಖೈದ್ ಮೈ ಹೈ ಬುಲ್‌ಬುಲ್(1989), ತ್ಯಾಗಿ ಅಂಡ್ ಪಾಯಲ್(1992) ಸಿನಿಮಾಗಳಲ್ಲಿ ನಟಿಸಿದ್ದರು. ಅವರು 1990ರಲ್ಲಿ ನಟ ಹಿಮಾಲಯ ದಸ್ಸಾನಿ ಅವರನ್ನು ವಿವಾಹವಾದರು. ಅವರಿಗೆ ಅಭಿಮನ್ಯು ದಸ್ಸಾನಿ ಮತ್ತು ಆವಂತಿಕಾ ದಸ್ಸಾನಿ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಅಭಿಮನ್ಯು ಕೂಡ ಬಾಲಿವುಡ್‌ನಲ್ಲಿ ನಾಯಕರಾಗಿದ್ದಾರೆ.