ಮುಂಬೈ: ಬಾಲಿವುಡ್ ನಟಿ ಕಾಜೋಲ್ ಅವರಿಗೆ ಇಂದು 49ನೇ ಜನ್ಮದಿನ. 1992ರ ಬೇಖುದಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು ತಮ್ಮ 31 ವರ್ಷದ ಸಿನಿ ಪ್ರಯಾಣಕದಲ್ಲಿ ಹಲವಾರು ಅದ್ಭುತ ಸಿನಿಮಾಗಳನ್ನು ಮಾಡಿದ್ದಾರೆ. ಆ ಮೂಲಕ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಹಾಸ್ಯಮಯ ಚಿತ್ರದಿಂದ ಹಿಡಿದು ಗುಪ್ತ್: ದಿ ಹಿಡನ್ ಟ್ರುತ್ ಸಿನಿಮಾದಲ್ಲಿ ಖಳನಾಯಕಿ ಆಗಿ ನಟಿಸುವವರೆಗೆ ಎಲ್ಲ ರೀತಿಯ ಪಾತ್ರವನ್ನೂ ತಾವು ಮಾಡಬಲ್ಲರು ಎನ್ನುವುದನ್ನು ಕಾಜೋಲ್ ತೋರಿಸಿಕೊಟ್ಟಿದ್ದಾರೆ. ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಟಿ ಮರೆಯಲಾಗದ ಐದು ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.
ಬಾಜಿಗರ್(1993):
ಅಬ್ಬಾಸ್-ಮಸ್ತಾನ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ ಬಾಜಿಗರ್. 1993ರಲ್ಲಿ ಬಿಡುಗಡೆಯಾದ ಈ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾದಲ್ಲಿ ಕಾಜೋಲ್ ಅವರು ಶಾರುಖ್ ಖಾನ್, ಶಿಲ್ಪಾ ಶೆಟ್ಟಿ, ರಾಖೀ, ದಲೀಪ್ ತಾಹಿಲ್ ಮತ್ತು ಜಾನಿ ಲಿವರ್ ಅವರೊಂದಿಗೆ ಕಾಣಿಸಿಕೊಂಡರು. ಕಾಜೋಲ್ ಅವರು ಶಾರುಖ್ ಖಾನ್ ಅವರ ಪ್ರಿಯತಮೆ ಹಾಗೂ ಶಿಲ್ಪಾ ಶೆಟ್ಟಿ ಅವರ ಸಹೋದರಿಯಾಗಿ ಈ ಸಿನಿಮಾದಲ್ಲಿ ನಟಿಸಿದರು. ಸಹೋದರಿಯ ಸಾವಿನ ಹಿಂದಿನ ರಹಸ್ಯ ಹುಡುಕಿ ಹೋಗುವ ಕಾಜೋಲ್‌ಗೆ ಸಿನಿಮಾದಲ್ಲಿ ತನ್ನ ಪ್ರಿಯತಮನೇ ಆ ಕೊಲೆಯನ್ನು ಮಾಡಿದನು ಎಂದು ತಿಳಿದುಬರುವ ವಿಶೇಷ ಕಥೆ ಈ ಸಿನಿಮಾದಲ್ಲಿದೆ.
ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ(1995):
ಭಾರತದಲ್ಲಿ ಅತಿ ದೊಡ್ಡ ಯಶಸ್ಸು ಕಂಡ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಒಂದು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ (DDLJ). ಈ ಸಿನಿಮಾದಲ್ಲಿ ಕಾಜೋಲ್ ಮತ್ತು ಶಾರುಖ್ ಖಾನ್ ಜೋಡಿಯಾಗಿ ನಟಿಸಿದ್ದಾರೆ. ಯುರೋಪ್ ಪ್ರವಾಸದಲ್ಲಿ ಕಾಜೋಲ್ ಶಾರುಖ್ ಅನ್ನು ಭೇಟಿಯಾಗುವುದು, ಮೊದಲ ಭೇಟಿಯಿಂದಲೇ ಆತನನ್ನು ದ್ವೇಷಿಸುವುದನ್ನು ಸಿನಿಮಾದಲ್ಲಿ ಕಾಣಬಹುದು. ಈ ಸಿನಿಮಾದಲ್ಲಿ ಕಾಜೋಲ್ ಅವರ ತಂದೆಯ ಪಾತ್ರದಲ್ಲಿ ಅಮರೀಶ ಪುರಿ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಕಾಜೋಲ್ ಅವರ ನಟನೆಯ ಬಾಲಿವುಡ್ ಪ್ರಿಯರಿಗೆ ಎಂದಿಗೂ ಮರೆಯಲು ಸಾಧ್ಯವಾಗದ್ದಾಗಿದೆ.
ಗುಪ್ತ್: ದಿ ಹಿಡನ್ ಟ್ರುತ್ (1997):
ಮರ್ಡರ್ ಮಿಸ್ಟರಿ ಇರುವ ಈ ಸಿನಿಮಾದಲ್ಲಿ ಕಾಜೋಲ್ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಬಿ ಡಿಯೋಲ್ ಮತ್ತು ಮನಿಶಾ ಕೊಯಿರಾಲಾ ನಟನೆಯ ಈ ಸಿನಿಮಾ ಆ ಕಾಲದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಿ ಹೊರಹೊಮ್ಮಿತು. ಈ ಸಿನಿಮಾದಲ್ಲಿನ ಪಾತ್ರದಿಂದಾಗಿ ಕಾಜೋಲ್ ಅವರಿಗೆ ಅತ್ಯುತ್ತಮ ಖಳನಾಯಕಿ ಪ್ರಶಸ್ತಿಯೂ ದೊರಕಿತು. ಅದರ ಜತೆಗೆ ಸಿನಿಮಾ ಒಟ್ಟಾರೆಯಾಗಿ ಮೂರು ಪ್ರಶಸ್ತಿಗಳನ್ನು ಗಳಿಸಿಕೊಂಡಿತು.
ಕಭಿ ಖುಷಿ ಕಭಿ ಗಮ್… (2001):
ಕರಣ್ ಜೋಹರ್ ನಿರ್ದೇಶನದ ಈ ಸಿನಿಮಾ ಇಂದಿಗೂ ಅನೇಕರಿಗೆ ಫೇವರಿಟ್ ಲಿಸ್ಟ್‌ನಲ್ಲಿರುವ ಸಿನಿಮಾ ಎಂದೇ ಹೇಳಬಹುದು. ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಶಾರುಖ್, ಹೃತಿಕ್ ರೋಷನ್ ಮತ್ತು ಕರೀನಾ ಕಪೂರ್ ಅವರೊಂದಿಗೆ ನಟಿ ಕಾಜೋಲ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಕಾಜೋಲ್ ಅವರ ಪಾತ್ರ ಅತ್ಯಂತ ಅದ್ಭುತ ಪಾತ್ರವಾಗಿದ್ದು, ನೆನಪಿನಲ್ಲುಳಿಯುವಂತದ್ದಾಗಿದೆ. ಹಾಸ್ಯಮಯವಾಗಿಯೂ ಕಾಣಿಸಿಕೊಳ್ಳುವ ಅವರು, ಸ್ನೇಹಿತನೊಂದಿಗೇ ಪ್ರೀತಿಯಲ್ಲಿ ಬೀಳುವ ವಿಶೇಷ ಕಥೆ ಸಿನಿಮಾದಲ್ಲಿದೆ.
ಮೈ ನೇಮ್ ಈಸ್ ಖಾನ್ (2010):
ಆಟಿಸಂನಿಂದ ಬಳಲುವ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಉಗ್ರನೆಂದು ತಪ್ಪಾಗಿ ಶಂಕಿಸಿ ಬಂಧಿಸುವ ವಿಶೇಷ ಕಥೆಯು ಈ ಸಿನಿಮಾದಲ್ಲಿದೆ. ಸಿನಿಮಾದಲ್ಲಿ ನಾಯಕ ನಟನಾಗಿ ಶಾರುಖ್ ಖಾನ್ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ತಾಯಿಯಾಗಿರುವ ಕಾಜೋಲ್ ತಮ್ಮ ಜೀವನದಲ್ಲಿ ಅತ್ಯಂತ ಕೆಟ್ಟ ಘಟನೆಯ ನಂತರ ಹೇಗೆ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ ಮತ್ತು ಅಂತ್ಯದಲ್ಲಿ ಅವರು ಶಾರುಖ್ ಖಾನ್ ಅವರೊಂದಿಗೆ ಪ್ರೀತಿಯಲ್ಲಿ ಬೀಳುವ ಕಥೆಯನ್ನು ಕಟ್ಟಿಕೊಡಲಾಗಿದೆ. ಇದರಲ್ಲಿ ನಟಿಯ ಪ್ರತಿಭೆಯನ್ನು ನೀವು ಕಾಣಬಹುದಾಗಿದೆ.