ಮುಂಬೈ: ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್ ಎಂದೇ ಫೇಮಸ್ ಆಗಿರುವ ನಟಿ ಕಂಗನಾ ರಣಾವತ್ ಹಿಮಾಚಲ ಪ್ರದೇಶದಲ್ಲಿ ತಮ್ಮ ಎರಡನೇ ಲಕ್ಷುರಿಯಸ್ ಮನೆಯನ್ನು ನಿರ್ಮಿಸಿದ್ದಾರೆ. ತಮ್ಮ ಹೊಸ ಮನೆಯ ಫೋಟೊಗಳನ್ನು ಇನ್ ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದು, ಭಾರೀ ವೈರಲ್ ಆಗಿದೆ.
ಗುರುವಾರ(ಜೂನ್ 9) ನಟಿ ಕಂಗನಾ ಮನಾಲಿಯಲ್ಲಿರುವ ತಮ್ಮ ಹೊಸ ಮನೆಯ ಪ್ರವೇಶ ಮಾಡಿದ್ದಾರೆ. ಬಹಳ ವಿಭಿನ್ನವಾಗಿ ಮನೆ ನಿರ್ಮಾಣ ಮಾಡಲಾಗಿದ್ದು, ಪರ್ವತಗಳ ಶೈಲಿಯಲ್ಲೇ ಮನೆಯನ್ನು ವಿನ್ಯಾಸ ಮಾಡಲಾಗಿದೆ. ಮನೆಯನ್ನು ಸಂಪೂರ್ಣವಾಗಿ ವಿಶಿಷ್ಟವಾದ ಕಲ್ಲುಗಳಿಂದ ನಿರ್ಮಿಸಲಾಗಿದೆ.
ಇದನ್ನು ಓದಿ|ಕಂಗನಾ ಕಂಗಾಲು!: Dhaakad ಚಿತ್ರದ 8ನೇ ದಿನದ ಕಲೆಕ್ಷನ್ ₹4420, ನೋಡಿದ್ದು 20 ಜನ
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಂಚಿಕೊಂಡಿರುವ ನಟಿ ಕಂಗನಾ, ತಮ್ಮ ಮನೆಯ ಕುರಿತಾಗಿ ಬರೆದುಕೊಂಡಿದ್ದಾರೆ. ಹೊಸ ಮನೆಯನ್ನು ಬಹಳ ಸ್ಥಳೀಯ, ಪ್ರಾಚೀನ ಹಾಗೂ ಸಾಂಪ್ರದಾಯಿಕವಾಗಿ ನಿರ್ಮಾಣ ಮಾಡಲಾಗಿದೆ. ವಿಭಿನ್ನ ವಿನ್ಯಾಸಗಳನ್ನು ಇಷ್ಟಪಡುವವರಿಗೆ ಈ ಮನೆ ಇಷ್ಟವಾಗಲಿದೆ. ನಾನು ಈ ಹೊಸ ಮನೆಯನ್ನು ನಿರ್ಮಿಸಿದ್ದೇನೆ. ಇದು ಮನಾಲಿಯಲ್ಲಿ ಈಗಾಗಲೆ ಇರುವ ನನ್ನ ಮನೆಯ ವಿಸ್ತರಣೆಯಾಗಿದೆ. ವಿಶಿಷ್ಟವಾಗಿ ಪರ್ವತ ಶೈಲಿಯಲ್ಲಿ ಮನೆ ನಿರ್ಮಿಸಲಾಗಿದ್ದು, ನದಿಯ ಕಲ್ಲುಗಳು ಹಾಗೂ ಸ್ಥಳೀಯ ಮರಗಳಿಂದ ತಯಾರಿಸಿದ ವಸ್ತುಗಳನ್ನೇ ಬಳಸಿ ನಿರ್ಮಿಸಲಾಗಿದೆ. ಮನೆಯಲ್ಲಿ ಹಿಮಾಚಲದ ವರ್ಣಚಿತ್ರಗಳು, ಕೈಯಲ್ಲೇ ನೇಯ್ದ ರಗ್ಗುಗಳು, ಕಸೂತಿಗಳು ಮತ್ತು ಮರದ ವಸ್ತುಗಳನ್ನೇ ಹೆಚ್ಚಾಗಿ ಬಳಸಿ ಮನೆಯನ್ನ ನಿರ್ಮಿಸಲಾಗಿದೆ ಎಂದು ತಮ್ಮ ಮನೆಯ ವಿಶಿಷ್ಟತೆಯ ಬಗ್ಗೆ ಬರೆದುಕೊಂಡಿದ್ದಾರೆ.
ಈ ಮನೆಯಲ್ಲಿ ಮೂರು ಬೆಡ್ ರೂಂಗಳು ಇದ್ದು, ಬಹಳ ವೈಭವೋಪೇತ ಮನೆಯನ್ನು ನಿರ್ಮಿಸಿದ್ದಾರೆ. ಮನೆಯ ಪ್ರತಿಯೊಂದು ವಸ್ತುವನ್ನೂ ವಿಭಿನ್ನವಾಗಿ ನಿರ್ಮಿಸಲಾಗಿದೆ. ನೋಡುಗರ ಕಣ್ಮನ ಸೆಳೆಯುವಂತಿದೆ. ಪ್ರತಿ ರೂಮಿನಲ್ಲೂ ಒಂದೊಂದು ಬಾಲ್ಕನಿ ಇದ್ದು, ಮನೆ ಹಿಮಾಚಲ ಪ್ರದೇಶದ ಸಂಸ್ಕೃತಿ, ಸಂಪ್ರದಾಯವನ್ನು ಹೊತ್ತು ನಿಂತಂತಿದೆ. ಕಂಗನಾ ತಮ್ಮ ಮನೆಯ ಗೋಡೆ ಮೇಲೂ ಹಿಮಾಚಲ ಪ್ರದೇಶದ ವಿಭಿನ್ನ ಸಂಪ್ರದಾಯಗಳ ಕಲೆ, ಸಾಹಿತ್ಯ ಇರುವ ಫೋಟೊಗಳನ್ನು ಹಾಕಿದ್ದು, ಆಕರ್ಷಣೀಯವಾಗಿದೆ.
ಇದನ್ನು ಓದಿ|ಅದೊಂದು ರೂಮರ್‌ನಿಂದ ನನ್ನನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ ಅಂತಾರೆ ನಟಿ ಕಂಗನಾ!
ಈ ಹಿಂದೆ 2020ರಲ್ಲೂ ಇದೇ ಮನಾಲಿಯಲ್ಲಿ ಐಷಾರಾಮಿ ಮನೆ ನಿರ್ಮಾಣ ಮಾಡಿದ್ದರು ಕಂಗನಾ. ಆ ಮನೆಯಲ್ಲಿ 5 ಬೆಡ್‌ರೂಮ್ ಇದ್ದು, ಮನೆಯಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಕೋಣೆ ಇದೆ. ಪ್ರತಿಯೊಂದು ಕೋಣೆಯಲ್ಲೂ ಬಾಲ್ಕನಿ ಇದ್ದು, ಪರ್ವತಗಳ ಸುಂದರ ದೃಶ್ಯ ವೀಕ್ಷಿಸಬಹುದಾಗಿದೆ.. ಮನೆಯ ಚಾವಣಿಯನ್ನು ಗಾಜಿನಿಂದ ಮುಚ್ಚಲಾಗಿದೆ. ಈ ಭವ್ಯ ಬಂಗಲೆ ಬೆಲೆ ಸುಮಾರು ₹30 ಕೋಟಿ ಎಂದು ಅಂದಾಜಿಸಲಾಗಿದೆ.
ಕಂಗನಾ ಇತ್ತೀಚೆಗೆ ಧಾಕಡ್ ಚಿತ್ರದಲ್ಲಿ ಅಭಿನಯಿಸಿದ್ದರು. ಆದರೆ ಈ ಸಿನಿಮಾ ಕಂಗನಾಗೆ ಅಷ್ಟು ಯಶಸ್ಸು ನೀಡಲಿಲ್ಲ. ಸದ್ಯಕ್ಕೆ ಮುಂದಿನ ಚಿತ್ರ ಎಮರ್ಜೆನ್ಸಿಯಲ್ಲಿ ನಟಿಸುತ್ತಿದ್ದು, ಈ ಸಿನಿಮಾವಾದರೂ ಸಕ್ಸಸ್ ಕಾಣುತ್ತಾ ಕಾದು ನೋಡಬೇಕಿದೆ.