ಮುಂಬೈ: ಪ್ರಸಿದ್ಧ ಅಂತಾರಾಷ್ಟ್ರೀಯ ಸಿನಿ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿಯನ್ನು ಸೋಮವಾರ ಪ್ರದಾನ ಮಾಡಲಾಗಿದೆ. ಅದರಲ್ಲಿ ನಟಿ ಅಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ್ದರೆ, ಆಕೆಯ ಪತಿ ರಣಬೀರ್ ಕಪೂರ್ ಅತ್ಯುತ್ತಮ ನಟ ಪ್ರಶಸ್ತಿ ತೆಗೆದುಕೊಂಡಿದ್ದಾರೆ. ಆದರೆ ಬಾಲಿವುಡ್ ನಟಿ ಕಂಗನಾ ರಣಾವತ್ (Actress Kangana Ranaut) ಅವರ ಪ್ರಕಾರ ಇದು ಪ್ರಶಸ್ತಿಗೆ ಸರಿಯಾದ ಆಯ್ಕೆಯಲ್ಲವಂತೆ. ಕನ್ನಡದ ಕಾಂತಾರಾ ಸಿನಿಮಾವೇ ಬೆಸ್ಟ್ ಸಿನಿಮಾ ಹಾಗೂ ನಟ ರಿಷಭ್ ಅವರೇ ಅತ್ಯುತ್ತಮ ನಟರಂತೆ.
ಇದನ್ನೂ ಓದಿ: Kangana Ranaut : ಮತ್ತೆ ಕೆರಳಿದ ಕಂಗನಾ; ನನ್ನ ವಿರುದ್ಧ ಬೇಹುಗಾರಿಕೆ ನಡೆಯುತ್ತಿದೆ ಎಂದು ಇನ್ಸ್ಟಾ ಪೋಸ್ಟ್ ಹಾಕಿದ ನಟಿ
ಹೌದು. ಕಂಗನಾ ಅವರು ಪ್ರಶಸ್ತಿ ವಿಚಾರದಲ್ಲಿ ಇನ್‌ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿದ್ದಾರೆ. “ಪ್ರಶಸ್ತಿಗಳ ಸಮಯ ಬಂದಿದೆ. ಇಲ್ಲಿ ನೆಪೋ ಮಾಫಿಯಾ(ಸ್ವಜನ ಪಕ್ಷಪಾತ) ಎಲ್ಲರ ಹಕ್ಕನ್ನು ಕಿತ್ತುಕೊಳ್ಳುತ್ತದೆ. ನಾನಿಲ್ಲಿ ಸ್ಪಷ್ಟಪಡಿಸುತ್ತೇನೆ – ಈ ವರ್ಷದ ಅತ್ಯುತ್ತಮ ನಟ ರಿಷಭ್ ಶೆಟ್ಟಿ, ಅತ್ಯುತ್ತಮ ನಟಿ ಮೃಣಾಲ್ ಠಾಕೂರ್(ಸೀತಾ ರಾಮಂ), ಅತ್ಯುತ್ತಮ ಸಿನಿಮಾ ಕಾಂತಾರಾ, ಅತ್ಯುತ್ತಮ ನಿರ್ದೇಶಕ ಎಸ್.ಎಸ್.ರಾಜಮೌಳಿ(ಆರ್.ಆರ್.ಆರ್), ಅತ್ಯುತ್ತಮ ಪೋಷಕ ನಟ ಅನುಪಮ್ ಖೇರ್(ಕಾಶ್ಮೀರ್ ಫೈಲ್ಸ್), ಅತ್ಯುತ್ತಮ ಪೋಷಕ ನಟಿ ತಬು (ಭೂಲ್ ಭುಲೈಯಾ). ಇವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹೋಗಲಿ ಅಥವಾ ಹೋಗದೇ ಇರಲಿ, ನಿಜವಾಗಿಯೂ ಪ್ರಶಸ್ತಿ ಸಿಗಬೇಕಾಗಿರುವುದು ಇವರಿಗೇ” ಎಂದು ನಟಿ ಹೇಳಿದ್ದಾರೆ.
“ಸ್ಟಾರ್ ಕಿಡ್ಸ್ ಕೆಲಸ ಪಡೆಯುವುದಕ್ಕಾಗಿ ಕರಣ್ ಜೋಹರ್ ಅವರನ್ನು ಹೊಗಳುತ್ತಾರೆ. ಹಾಗೆಯೇ ಅವರು ಕಷ್ಟದಿಂದ ಬದುಕು ಕಟ್ಟಿಕೊಂಡವರ ವೃತ್ತಿಜೀವನವನ್ನು ಹಾಳು ಮಾಡುತ್ತಾರೆ. ಮಾರಾಟವಾಗಿರುವ ಪಿಆರ್ ಅನ್ನು ಪಡೆದುಕೊಳ್ಳುವುದು ಹಾಗೆಯೇ ಬೇರೆಯವರ ಜೀವನವನ್ನು ಹಾಳು ಮಾಡುವುದು. ಇದೇ ನೀವು ಮಾಡುವುದು. ನಿಮ್ಮೆಲ್ಲರನ್ನು ನಾಶಮಾಡಲು ನಾನು ಈಗ ಸಂಕಲ್ಪ ಮಾಡಿದ್ದೇನೆ. ತುಂಬಾ ದುಷ್ಟರಿರುವಾಗ ಜೀವನದ ಸೌಂದರ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಭಗವದ್ಗೀತೆಯು ದುಷ್ಟತನವನ್ನು ನಾಶಮಾಡುವುದು ಧರ್ಮದ ಪ್ರಧಾನ ಗುರಿ ಎಂದು ಹೇಳುತ್ತದೆ” ಎಂದೂ ನಟಿ ಸ್ಟೋರಿಯಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : Kangana Ranaut : ಕಿಯಾರಾ-ಸಿದ್ಧಾರ್ಥ್ ಜೋಡಿ ಬಗ್ಗೆ ಇನ್ಸ್ಟಾಗ್ರಾಂ ಸ್ಟೋರಿ ಹಾಕಿದ ಕಂಗನಾ ರಣಾವತ್
ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ. ಹಾಗೆಯೇ ನಟ ರಿಷಭ್ ಶೆಟ್ಟಿ ಅವರಿಗೆ ಅತ್ಯುತ್ತಮ ಭರವಸೆಯ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.