ಬೆಂಗಳೂರು: ಡಿಸೆಂಬರ್ 8ರಂದು ಹಿರಿಯ ನಟಿ ಲೀಲಾವತಿ ಇಹಲೋಕ ತ್ಯಜಿಸಿದ್ದರು. ಅಂತ್ಯ ಸಂಸ್ಕಾರ ನೆಲಮಂಗಲದ ಸೋಲದೇವನಹಳ್ಳಿಯ ತೋಟದ ಮನೆ ಬಳಿ ಕುಟುಂಬಸ್ಥರು ಸೇರಿ ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿತ್ತು. ಇಂದು (ಡಿ. 18) ಹಿರಿಯ ನಟಿ ಲೀಲಾವತಿ ಅವರ ವೈಕುಂಠ ಸಮಾರಾಧನೆ. ನೆಲಮಂಗಲ ಬಳಿಯ ಸೂಲದೇವನಹಳ್ಳಿ ಲೀಲಾವತಿ ನಿವಾಸದಲ್ಲಿ 11 ನೇ ದಿನದ ಕಾರ್ಯಕ್ಕೆ ಸಕಲ ಸಿದ್ಧತೆಯಾಗಿದೆ. ಕುಟುಂಬದವರು, ಕಲಾವಿದರು ಗಣ್ಯರು ಆಪ್ತರು ಪುಣ್ಯ ತಿಥಿ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 12.30ರ ನಂತರ ನಿವಾಸದಲ್ಲಿ ಪೂಜಾ ಕಾರ್ಯ ನೆರವೇರಲಿದೆ. ಪುಣ್ಯ ಸ್ಮರಣೆಗೆ ಬರುವ ಸರ್ವರಿಗೂ ಊಟದ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ. ಮನೆಯಲ್ಲಿ ಶಾಸ್ತ್ರೋಕ್ತವಾಗಿ ಕಾರ್ಯ ವಿಧಿ ವಿಧಾನವನ್ನು ವಿನೋದ್ ರಾಜ್ ಕುಟುಂಬಸ್ಥರು ಮಾಡಲಿದ್ದಾರೆ. ಲೀಲಾವತಿ ಅವರಿಗೆ ಇಷ್ಟವಾದ ಊಟವನ್ನು ಸಮಾಧಿ ಮುಂದೆ ಇಟ್ಟು ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ಈಗಾಗಲೇ ಹೂಗಳಿಂದ ಸಮಾಧಿಯನ್ನು ಅಲಂಕಾರ ಮಾಡಲಾಗಿದೆ.
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (Actress Leelavathi) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಪ್ರಮುಖ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದರು. ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರರನ್ನು ರಂಜಿಸಿದ್ದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಪ್ರಮುಖರು ಕಂಬನಿ ಮಿಡಿದಿದ್ದರು. ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ಜೋಡಿ ಸೂಪರ್ ಹಿಟ್ ಆಗಿತ್ತು. ‘ವೀರ ಕೇಸರಿ’, ‘ಭಕ್ತ ಕುಂಬಾರ’, ‘ಸಿಪಾಯಿ ರಾಮು’, ‘ರಣಧೀರ ಕಂಠೀರವ’ ಸೇರಿದಂತೆ ಏಳೆಂಟು ಸಿನಿಮಾಗಳಲ್ಲಿ ಇಬ್ಬರು ಒಟ್ಟಾಗಿ ನಟಿಸಿದ್ದರು.
ಇದನ್ನೂ ಓದಿ: Actress Leelavathi: ಅಜ್ಜಿಯ ಗುಣಗಳು ಮೊಮ್ಮಗನಲ್ಲೂ ಇವೆ; ವಿನೋದ್ ರಾಜ್ ಪತ್ನಿ ಅನು
ಕನ್ನಡ ಮಾತ್ರವಲ್ಲದೆ, ವಿವಿಧ ಭಾಷೆಗಳ ಸುಮಾರು 600 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆ ಪೈಕಿ ಕನ್ನಡದಲ್ಲಿ 400ಕ್ಕೂ ಹೆಚ್ಚು ಸಿನಿಮಾಗಳಿವೆ. ನಾಯಕಿಯಾಗಷ್ಟೇ ಅಲ್ಲದೆ, ಪೋಷಕ ಪಾತ್ರಗಳಲ್ಲಿಯೂ ಲೀಲಾವತಿ ಮಿಂಚಿದ್ದಾರೆ. ಇವರ ಕಲಾ ಸೇವೆಗೆ ಅನೇಕ ಪ್ರಶಸ್ತಿಗಳು ಸಹ ಅರಸಿ ಬಂದಿದೆ.
ಚಲನಚಿತ್ರ ರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿಯಾದ ಡಾ. ರಾಜಕುಮಾರ್ ಪ್ರಶಸ್ತಿಯನ್ನು (Dr Rajkumar Award) 1999-2000ನೇ ಸಾಲಿನಲ್ಲಿ ಲೀಲಾವತಿ ಅವರಿಗೆ ಕರ್ನಾಟಕ ಸರ್ಕಾರ ನೀಡಿದೆ. ಲೀಲಾವತಿ ಅವರ ಕಲಾ ಸಾಧನೆಯನ್ನು ಗುರುತಿಸಿ ತುಮಕೂರು ವಿಶ್ವವಿದ್ಯಾಲಯವು 2008ರಲ್ಲಿ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಿದೆ.
ಲೀಲಾವತಿ ಅವರು 1949ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ, ಅಲ್ಲಿಂದ ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ದಲ್ಲಿ ಕೂಡಾ ಅಭಿನಯಿಸಿದ್ದರು. ಹಲವಾರು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿದ್ದರು.