Site icon Vistara News

Actress Mahalakshmi: ಮತ್ತೆ ಸಿನಿರಂಗಕ್ಕೆ ಮಹಾಲಕ್ಷ್ಮೀ; ʻTRP ರಾಮʼ ಟ್ರೈಲರ್‌ ಔಟ್‌!

TRP Rama Trailer Out

ಬೆಂಗಳೂರು: ದಶಕಗಳ ಹಿಂದೆ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದ ಮಹಾಲಕ್ಷ್ಮೀ ʻTRP ರಾಮʼ (Actress Mahalakshmi) ಸಿನಿಮಾ (TRP Rama) ಮೂಲಕ ಮತ್ತೆ ಕಮ್‌ಬ್ಯಾಕ್‌ ಆಗಿದ್ದಾರೆ. ರವಿಪ್ರಸಾದ್‌ ನಟಿಸಿ ಮತ್ತು ನಿರ್ದೇಶನದ ಈ ಚಿತ್ರದ ಟ್ರೈಲರ್‌ ಅನಾವರಣಗೊಂಡಿದೆ. ಹೆಣ್ಣಿನ ಶೋಷಣೆ, ಮಾಧ್ಯಮಗಳ ಮೌಲ್ಯವೇನು ಎನ್ನುವುದನ್ನು ಟ್ರೈಲರ್‌ನಲ್ಲಿ ಕಟ್ಟಿಕೊಡಲಾಗಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿ ಟ್ರೈಲರ್‌ ಬಿಡುಗಡೆ ಮಾಡಲಾಗಿದ್ದು, ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

ಹಿರಿಯ ನಟಿ ಮಹಾಲಕ್ಷ್ಮೀ ಮಾತನಾಡಿ, ʻʻನಾನು ಎಲ್ಲ ಭಾಷೆಯಲ್ಲಿ ಎಲ್ಲ ಹೀರೋಗಳ ಜತೆ ಸಿನಿಮಾ ಮಾಡಿದ್ದೇನೆ. ಎಲ್ಲವೂ ಟೀಂ ವರ್ಕ್. ನಮ್ಮ ಮನೆಯಲ್ಲಿ ಲಾಫಿಂಗ್ ಬುದ್ಧ ಇಟ್ಟುಕೊಂಡು ನಗುತ್ತ ಇರುವುದು ಸಾಕಾಗಲ್ಲ. ಮೂರು ಕೋತಿ ನೆನಪು ಇದೆಯಲ್ಲಾ? ಕೆಟ್ಟದನ್ನು ಕೇಳಬಾರದು. ಕೆಟ್ಟದನ್ನು ನೋಡಬಾರದು. ಕೆಟ್ಟದನ್ನು ಮಾಡಬಾರದು. ಅದನ್ನು ನಿಮ್ಮ ಮಕ್ಕಳಿಗೆ ನೆನಪಿಸಿ. ಅವರ ಜೀವನ ಚೆನ್ನಾಗಿರುತ್ತದೆ. ಅದನ್ನೂ ಹೇಳಿಕೊಡುವುದೇ TRP ರಾಮ. ಸಿನಿಮಾದಲ್ಲಿ ಒಳ್ಳೆಯ ನೀತಿ ಇದೆ. ಆ ನೀತಿ ನಮ್ಮ ಜನರೇಷನ್‌ಗೆ ಸಿಗಬೇಕು. TRP ರಾಮ ಬರೀ ಸಿನಿಮಾವಲ್ಲ. ಅದೊಂದು ಜೀವನʼʼ ಎಂದರು.

ನಿರ್ದೇಶಕ ಹಾಗೂ ನಟ ರವಿ ಪ್ರಸಾದ್ ಮಾತನಾಡಿ, ʻʻಒಳ್ಳೆ ಬಜೆಟ್‌ಗೆ ಸಿನಿಮಾ ಮಾಡಲು ತಯಾರಿ ನಡೆಸಿದಾಗ ಕಥೆ ಸಿಗುತ್ತಿರಲಿಲ್ಲ. ಅಂದರೆ ಬಜೆಟ್‌ಗೆ ಹೊಂದಿಸಲು ಆಗುತ್ತಿರಲ್ಲ. ಆಗ ಹೊಳೆದಿದ್ದೇ TRP ರಾಮ ಕಥೆ. ರಾಮನ ಪಾತ್ರ ಮಾಡಬೇಕು ಎಂದು ಇರಲಿಲ್ಲ. ಈ ರೀತಿ ಕಂಟೆಂಟ್ ಇರುವ ಸಿನಿಮಾವನ್ನು ಯಾರ ಮೂಲಕ ಹೇಳಿಸಬೇಕು ಎಂದು ಹುಡುಕುತ್ತಿದ್ದೇವೆ. ಆಗ ತಲೆಗೆ ಬಂದಿದ್ದು ಮಹಾಲಕ್ಷ್ಮೀ ಮೇಡಂ. ಕಮರ್ಷಿಯಲ್ ಜತೆ ಒಂದೊಳ್ಳೆ ಸಂದೇಶ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಸೆನ್ಸಾರ್ ಆಗಬೇಕಿದೆ. ಅಕ್ಟೋಬರ್ ಮೊದಲ ವಾರ ತೆರೆಗೆ ತರುವ ಪ್ರಯತ್ನ ನಡೆಯುತ್ತದೆʼʼ ಎಂದು ತಿಳಿಸಿದರು.

ಇದನ್ನೂ ಓದಿ: Actress Mahalakshmi: ನಟಿ ಮಹಾಲಕ್ಷ್ಮೀ  ಪತಿ ರವೀಂದರ್ ಅರೆಸ್ಟ್‌; ಜೋಡಿಗೆ ಸಂಕಷ್ಟ!

ಹಿರಿಯ ಕಲಾವಿದರಾದ ಓಂ ಸಾಯಿ ಪ್ರಕಾಶ್ ಮಾತನಾಡಿ, ʻʻನೈಜ ಘಟನೆಗಳನ್ನು ನಾವು ತೆಗೆದುಕೊಂಡಾಗ ಅದು ಅದು ಹೃದಯಕ್ಕೆ ಹತ್ತಿರವಾಗುತ್ತದೆ. ಟ್ರೈಲರ್‌ ನೋಡುವಾಗ ತುಂಬಾ ನೋವು ಅನಿಸಿತು. ಸಮಾಜದಲ್ಲಿ ಹೆಣ್ಣನ್ನು ಬೇರೆ ರೀತಿ ನೋಡುವ ಸನ್ನಿವೇಶವಿದೆ. ಸರ್ಕಾರ ಎಷ್ಟು ಕಾನೂನು ಮಾಡುತ್ತಿದೆ. ಆದರೂ ರಾಕ್ಷಸ ಮನಸ್ಸು ತಡೆಯುತ್ತಿಲ್ಲ. ದಿನದಿಂದಕ್ಕೆ ಈ ರೀತಿ ಹೆಚ್ಚಾಗುತ್ತಿವೆ. ನಾಯಕನೋ ಖಳನಾಯಕನೋ ಗೊತ್ತಿಲ್ಲ. ಕಲಾವಿದರು ಯಾವ ಪಾತ್ರವಾದರೂ ನ್ಯಾಯ ಒದಗಿಸುತ್ತಾರೆ. ಮಹಾಲಕ್ಷ್ಮೀ ತಂದೆ-ತಾಯಿ ಇಬ್ಬರು ಮಹಾನ್ ನಟರು. ಅವರ ತಾಯಿ ಜತೆ ತೆಲುಗು ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದೇನೆ. ಮಹಾಲಕ್ಷ್ಮೀ ನೋಡಿದ ತಕ್ಷಣ ನಿಮ್ಮ ತಾಯಿ ನೆನಪಾಗುತ್ತಿದ್ದಾರೆ ಎಂದೆ. ನಾಯಕನ ಹೆಸರು ರಾಮ ನೋಡಲು ರಾವಣ ತರ ಕಾಣುತ್ತಾನೆ. ಚಿತ್ರ ನೋಡಿದರೇ ಎಲ್ಲವೂ ಗೊತ್ತಾಗಲಿದೆ. ಇಡೀ TRP ತಂಡಕ್ಕೆ ಒಳ್ಳೆಯದಾಗಲಿʼʼ ಎಂದು ತಿಳಿಸಿದರು.

ಇದನ್ನೂ ಓದಿ: Actress Padmini: ಆಟೋ ಚಾರ್ಜ್ ಕೊಡದೆ ಚಾಲಕನ ಜತೆ ʻಪುನರ್ ವಿವಾಹʼ ಧಾರಾವಾಹಿ ನಟಿ ಪದ್ಮಿನಿ ಕಿರಿಕ್!

ಅಶುತೋಶ್ ಪಿಕ್ಚರ್ಸ್ ಬ್ಯಾನರ್‌ನಡಿ ನಿರ್ಮಾಣವಾಗಿರುವ TRP ರಾಮ ಸಿನಿಮಾದಲ್ಲಿ ರವಿಪ್ರಸಾದ್‌ ನಟಿಸಿ, ಆಕ್ಷನ್ ಕಟ್ ಹೇಳಿದ್ದಾರೆ. ಮಹಾಲಕ್ಷ್ಮೀ ತಾಯಿ ಪಾತ್ರದಲ್ಲಿ, ಪತ್ರಕರ್ತೆಯಾಗಿ ಸ್ಪರ್ಶಯಾಗಿ ನಟಿಸಿದ್ದಾರೆ. ರಾಜ್ ಗುರು ಹೊಸಕೋಟೆ ಸಂಗೀತ, ಸುನಿಲ್ ಕಶ್ಯಪ್ ಸಂಕಲನ, ಗುರುಪ್ರಸಾದ್ ಛಾಯಾಗ್ರಹಣ, ರಾಕೇಶ್ ಆಚಾರ್ಯ ಬಿಜಿಎಂ ಸಿನಿಮಾಕ್ಕಿದೆ. ಸೆನ್ಸಾರ್‌ಗಾಗಿ ಕಾಯ್ತಿರುವ TRP ರಾಮ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದ್ದಾನೆ.

Exit mobile version