ನಟಿ ಮೇಘನಾ ರಾಜ್ ಸರ್ಜಾ (Meghana Raj Sarja) ಇನ್ಸ್ಟಾಗ್ರಾಂ ಪೋಸ್ಟ್ವೊಂದು ಕುತೂಹಲ ಮೂಡಿಸಿದೆ. ‘ಇಂದು ಭಾನುವಾರ ಅವರು ಯಾವ ಪ್ರಶ್ನೆಗೆ ಉತ್ತರ ನೀಡಬಬಹುದು’ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ. ಶನಿವಾರ ರಾತ್ರಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಹಾಕಿದ್ದಾರೆ. ‘2020ರ ಒಂದು ಭಾನುವಾರ ನನ್ನ ಜೀವನದಲ್ಲಿ ಒಂದು ಊಹಿಸಲೂ ಸಾಧ್ಯವಾಗದ, ತೀಕ್ಷ್ಣ ಬದಲಾವಣೆ ಆಯಿತು. ಅಲ್ಲಿಂದ, ಇಲ್ಲಿಯವರೆಗೆ ಅನೇಕರು ಒಂದು ನಿರ್ದಿಷ್ಟವಾದ ಪಶ್ನೆಯನ್ನು ಕೇಳುತ್ತಿದ್ದಾರೆ. ಆ ಪ್ರಶ್ನೆಗೆ ಇಂದು (ಫೆ.19) ಭಾನುವಾರ ನಾನು ಉತ್ತರ ಕೊಡುತ್ತೇನೆ’ ಎಂಬುದು ಪೋಸ್ಟ್ನ ಸಾರಾಂಶ. ಮೇಘನಾ- ಚಿರು ಅಭಿಮಾನಿಗಳು ಸೇರಿ, ಅನೇಕಾನೇಕರು 10.30 ಆಗೋದನ್ನೇ ಕಾಯುತ್ತಿದ್ದಾರೆ.
ಮೇಘನಾ ರಾಜ್ ಬದುಕಲ್ಲಿ 2020 ಕೆಟ್ಟವರ್ಷ. ಅವರು ಐದು ತಿಂಗಳ ಗರ್ಭಿಣಿಯಾಗಿದ್ದಾಗಲೇ, ಪತಿ ಚಿರಂಜೀವಿ ಸರ್ಜಾರನ್ನು ಕಳೆದು ಕೊಂಡರು. 2020ರ ಜೂನ್ 7ರಂದು ಚಿರು ಹೃದಯಾಘಾತದಿಂದ ಮೃತಪಟ್ಟಿದ್ದರು. ಅದಾದ ಬಳಿಕ ಮಗ ರಾಯನ್ ಹುಟ್ಟಿದ. ಸದ್ಯ ಮೇಘನಾ, ತನ್ನ ಪುತ್ರ ರಾಯನ್ ಜತೆ ತಾಯಿ ಮನೆಯಲ್ಲೇ ಇದ್ದಾರೆ. ಮೇಘನಾ ರಾಜ್ ತಮ್ಮದೇ ಆದ ಒಂದು ಹೊಸ ಯೂಟ್ಯೂಬ್ ಚಾನೆಲ್ ಕೂಡ ಶುರು ಮಾಡಿದ್ದಾರೆ. ಆದರೆ ಅವರ ಬಳಿ ಹತ್ತು ಹಲವು ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಿದ್ದಾರೆ, ಅದರಲ್ಲಿ ಮುಖ್ಯವಾಗಿ ‘ನೀವು ಇನ್ನೊಂದು ಮದುವೆಯಾಗುತ್ತೀರಾ?’ ಎಂಬುದು. ಈಗ ಮೇಘನಾ ರಾಜ್ ಹಾಕಿದ ಪೋಸ್ಟ್ ನೋಡಿಯೂ ಅನೇಕರು ಇದನ್ನೇ ಊಹಿಸುತ್ತಿದ್ದಾರೆ. ಮೇಘನಾ ತಮ್ಮ ಎರಡನೇ ಮದುವೆ ಬಗ್ಗೆ ಮಾತನಾಡಲಿದ್ದಾರಾ? ಎಂಬ ಪ್ರಶ್ನೆ ಎದ್ದಿದೆ.