Site icon Vistara News

Actress Nayanthara: ರಾಮನ ಕುರಿತಾದ ಸಂಭಾಷಣೆ ಮೂಲಕ ವಿವಾದದ ಕಿಡಿ ಹೊತ್ತಿಸಿದ ನಯನತಾರಾ ಚಿತ್ರ

Annapoorani

Annapoorani

ಚೆನ್ನೈ: ಇತ್ತೀಚೆಗೆ ಥಿಯೇಟರ್‌ಗಳಲ್ಲಿ ತೆರೆಕಂಡ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ (Actress Nayanthara) ಅಭಿನಯದ ʼಅನ್ನಪೂರ್ಣಿʼ (Annapoorani) ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಟೈಟಲ್‌ ರೋಲ್‌ನಲ್ಲಿ ನಯನತಾರಾ ಕಾಣಿಸಿಕೊಂಡಿರುವ ಈ ಸಿನಿಮಾ ಇದೀಗ ವಿವಾದ ಎಬ್ಬಿಸಿದೆ. ಶಿವಸೇನೆಯ ಮಾಜಿ ನಾಯಕ ರಮೇಶ್ ಸೋಲಂಕಿ ಇದೀಗ ಚಿತ್ರದ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಸಿನಿಮಾ ‘ಹಿಂದೂ ವಿರೋಧಿ’ ಎಂದು ಆರೋಪಿಸಿದ್ದಾರೆ. ಸಿನಿಮಾ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ ಎಂದು ದೂರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಮೇಶ್ ಸೋಲಂಕಿ, “ನಾನು ಚಿತ್ರ ನಿರ್ಮಿಸಿರುವ ಹಿಂದೂ ವಿರೋಧಿ ಝೀ ಸ್ಟುಡಿಯೋ ಮತ್ತು ನೆಟ್‌ಫ್ಲಿಕ್ಸ್‌ ವಿರುದ್ಧ ದೂರು ದಾಖಲಿಸಿದ್ದೇನೆ. ಭಗವಾನ್ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗಾಗಿ ಇಡೀ ಜಗತ್ತು ಕಾತುರದಿಂದ ನಿರೀಕ್ಷಿಸುತ್ತಿರುವ ಸಮಯದಲ್ಲಿ, ಜೀ ಸ್ಟುಡಿಯೋಸ್, ನಾಡ್ ಸ್ಟುಡಿಯೋಸ್ ಮತ್ತು ಟ್ರೈಡೆಂಟ್ ಆರ್ಟ್ಸ್ ನಿರ್ಮಿಸಿದ ಈ ಹಿಂದೂ ವಿರೋಧಿ ಚಿತ್ರ ʼಅನ್ನಪೂರ್ಣಿʼ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆʼʼ ಎಂದು ಬರೆದುಕೊಂಡಿದ್ದಾರೆ.

ಬಳಿಕ ಅವರು ಚಿತ್ರದಲ್ಲಿನ ಹಿಂದೂ ವಿರೋಧಿ ದೃಶ್ಯಗಳು ಯಾವುವು ಎನ್ನುವುದನ್ನು ಪಟ್ಟಿ ಮಾಡಿ ಕೊಟ್ಟಿದ್ದಾರೆ. ʼʼ1. ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಅಡುಗೆ ಮಾಡುವ ವೇಳೆ ನಮಾಜ್‌ ಮಾಡುತ್ತಾಳೆ. 2. ಲವ್‌ ಜಿಹಾದ್‌ ಅನ್ನು ಪ್ರಚಾರ ಮಾಡಲಾಗಿದೆ. 3. ಫರ್ಹಾನ್‌ ಎನ್ನುವ ಪಾತ್ರ ಭಗವಾನ್‌ ಶ್ರೀರಾಮ ಮಾಂಸ ತಿನ್ನುವವರಾಗಿದ್ದರು ಎಂದು ಹೇಳುವ ದೃಶ್ಯ ಇದೆ. ನೆಟ್‌ಫ್ಲಿಕ್ಸ್‌ ಇಂಡಿಯಾ ಮತ್ತು ಝೀ ಸ್ಟುಡಿಯೋಸ್‌ ಉದ್ದೇಶಪೂರ್ವಕವಾಗಿ ಈ ಚಿತ್ರವನ್ನು ನಿರ್ಮಿಸಿದೆ. ಹಿಂದೂ ಭಾವನೆಗಳಿಗೆ ಧಕ್ಕೆ ತರಲು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಸಮಯದಲ್ಲೇ ಚಿತ್ರ ಬಿಡುಗಡೆ ಮಾಡಲಾಗಿದೆ” ಎಂದು ಅವರು ಬರೆದಿದ್ದಾರೆ.

ಈ ಕುರಿತು ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವೀಸ್‌ ಅವರಿಗೆ ಮನವಿ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ʼಅನ್ನಪೂರ್ಣಿʼ ಚಿತ್ರದ ನಿರ್ದೇಶಕ ನಿಲೇಶ್‌ ಕೃಷ್ಣ, ನಟಿ ನಯನತಾರಾ, ನಿರ್ಮಾಪಕರಾದ ಜತಿನ್‌ ಸೇಥಿ, ಆರ್‌.ರವೀಂದ್ರನ್‌ ಮತ್ತು ಪುನೀತ್‌ ಗೋಯೆಂಕಾ, ಝೀ ಸ್ಟುಡಿಯೋಸ್‌ನ ಮುಖ್ಯ ವ್ಯವಹಾರ ಅಧಿಕಾರಿ ಶಾರಿಕ್‌ ಪಟೇಲ್‌ ಮತ್ತು ನೆಟ್‌ಫ್ಲಿಕ್ಸ್‌ ಇಂಡಿಯಾ ಹೆಡ್‌ ಮೋನಿಕಾ ಶೆರ್ಗಿಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ನೆಟ್‌ಫ್ಲಿಕ್ಸ್‌ ಇಂಡಿಯಾ, ನಯನತಾರಾ ಅಥವಾ ʼಅನ್ನಪೂರ್ಣಿʼ ಚಿತ್ರತಂಡ ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹಿರಿಯ ಕಲಾವಿದರಾದ ಕನ್ನಡಿಗ ಅಚ್ಯುತ್‌ ಕುಮಾರ್‌, ಸತ್ಯರಾಜ್‌, ಕಾರ್ತಿಕ್‌ ಕುಮಾರ್‌, ರೇಣುಕಾ, ಪಾರ್ವತಿ ಟಿ. ಮತ್ತಿತರರು ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರಾಹ್ಮಣ ಕುಟುಂಬದ ಯುವತಿ (ನಯನತಾರಾ) ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಸೇರಿ ಅಲ್ಲಿ ಯಾವೆಲ್ಲ ಸವಾಲುಗಳನ್ನು ಎದುರಿಸುತ್ತಾಳೆ ಎನ್ನುವುದೇ ಚಿತ್ರದ ಕಥೆ. ಬಾಕ್ಸ್‌ ಆಫೀಸ್‌ನಲ್ಲಿ ಈ ಸಿನಿಮಾ ಕೇವಲ 6 ಕೋಟಿ ರೂ. ಗಳಿಸಿದೆ.

ಇದನ್ನೂ ಓದಿ: Actress Nayanthara: ‘ಅನ್ನಪೂರ್ಣಿ’ಯಾಗಿ ನಯನತಾರಾ; ಟೀಸರ್‌ನಲ್ಲಿದೆ ಟ್ವಿಸ್ಟ್‌, ಮನಸೋತ ಪ್ರೇಕ್ಷಕರು!

Exit mobile version