Site icon Vistara News

Actress Nayanthara: ನಯನತಾರಾಗೆ ಬರೋಬ್ಬರಿ 3 ಕೋಟಿ ರೂ. ಬೆಲೆಯ ಕಾರು ಗಿಫ್ಟ್‌

nayan vignesh

nayan vignesh

ಚೆನ್ನೈ: ದಕ್ಷಿಣ ಭಾರತದ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ (Actress Nayanthara) ಈ ವರ್ಷ ಭರ್ಜರಿಯಾಗಿಯೇ ಬಾಲಿವುಡ್‌ ಪ್ರವೇಶಿಸಿದ್ದಾರೆ. ಬಾಲಿವುಡ್‌ ಬಾದ್‌ ಷಾ ಶಾರುಖ್‌ ಖಾನ್‌ (Shah Rukh Khan) ಜತೆ ನಟಿಸಿದ ‘ಜವಾನ್‌’ (Jawan) ಚಿತ್ರ ಸೂಪರ್‌ ಹಿಟ್‌ ಆಗಿದೆ. ಬಾಕ್ಸ್‌ ಆಫೀಸ್‌ನಲ್ಲಿ ಈ ಚಿತ್ರ 1 ಸಾವಿರ ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದೆ. ಈ ಮಧ್ಯೆ ನಯನತಾರಾಗೆ ದುಬಾರಿ ಉಡುಗೊರೆಯೊಂದು ಲಭಿಸಿದೆ. ಬರೋಬ್ಬರಿ 3 ಕೋಟಿ ರೂ. ಬೆಲೆಯ ಮರ್ಸಿಡಿಸ್‌ ಮೇಬ್ಯಾಕ್ ಕಾರು ನಯನತಾರಾಗೆ ಉಡುಗೊರೆ ರೂಪದಲ್ಲಿ ಬಂದಿದೆ.

ಪತಿಯ ಗಿಫ್ಟ್‌

ನಯನತಾರಾ ನವೆಂಬರ್‌ 18ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಆ ವೇಳೆ ಪತಿ, ನಿರ್ದೇಶಕ ವಿಘ್ನೇಶ್ ಶಿವನ್ ಈ ಉಡುಗೊರೆಯನ್ನು ನೀಡಿದ್ದಾರೆ. ಇತ್ತೀಚೆಗೆ ನಟಿ ಈ ವಿಚಾರ ರಿವೀಲ್ ಮಾಡಿದ್ದಾರೆ. ಕಾರಿನ ಲೋಗೋದ ಫೋಟೋಗಳನ್ನು ಹಂಚಿಕೊಂಡಿರುವ ಅವರು, ‘ಮನೆಗೆ ಸ್ವಾಗತ ಬ್ಯೂಟಿ. ಸ್ವೀಟೆಸ್ಟ್ ಗಿಫ್ಟ್ ನೀಡಿದ ಪತಿಗೆ ಧನ್ಯವಾದ. ಲವ್​ ಯೂ’ ಎಂದು ಬರೆದುಕೊಂಡಿದ್ದಾರೆ. ಐಷಾರಾಮಿ ಫೀಚರ್​ಗಳನ್ನು ಈ ಕಾರು ಹೊಂದಿದ್ದು, ಅಭಿಮಾನಿಗಳು ನಟಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೂನ್ 2022ರಂದು ವಿವಾಹವಾಗಿದ್ದರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಅಕ್ಟೋಬರ್ ತಿಂಗಳಲ್ಲಿ ಅವಳಿ ಮಕ್ಕಳು ಪಡೆದಿದ್ದರು. 2015ರಲ್ಲಿ ತೆರೆಕಂಡ ಕಾಲಿವುಡ್‌ ಚಿತ್ರ ʼನಾನುಮ್‌ ರೌಡಿಧಾನ್‌ʼ ಮತ್ತು 2022ರಲ್ಲಿ ಬಿಡುಗಡೆಯಾದ ʼಕಾಥುವಾಕುಲ ರೆಂಡು ಕಾದಲ್‌ʼ ತಮಿಳು ಚಿತ್ರದಲ್ಲಿ ನಯನತಾರಾ ಮತ್ತು ವಿಘ್ನೇಶ್‌ ಶಿವನ್‌ ಜತೆಯಾಗಿ ಕೆಲಸ ಮಾಡಿದ್ದರು. ವಿಶೇಷ ಎಂದರೆ ಈ ಎರಡೂ ಚಿತ್ರಗಳಲ್ಲಿ ವಿಜಯ್‌ ಸೇತುಪತಿ ನಾಯಕನಾಗಿ ಅಭಿನಯಿಸಿದ್ದರು.

ನಿರ್ದೇಶನದತ್ತ ನಯನತಾರಾ?

ಈ ಮಧ್ಯೆ ನಯನತಾರಾ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ ಎನ್ನುವ ಸುದ್ದಿ ಹರಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತೀಚೆಗೆ ಕ್ಯಾಮೆರಾ ಹಿಂದೆ ನಿಂತುಕೊಂಡಿರುವ ಫೋಟೊ ಶೇರ್‌ ಮಾಡಿರುವ ನಟಿ, ʼಹೊಸ ಆರಂಭದ ಮ್ಯಾಜಿಕ್‌ʼ ಎಂದು ಬರೆದುಕೊಂಡಿದ್ದರು. ಈ ಫೋಟೊ ನೋಡಿ ಅಭಿಮಾನಿಗಳು ಅವರು ಚಿತ್ರ ನಿರ್ದೇಶನ ಮಾಡಲಿದ್ದಾರೆ ಎಂದು ಊಹಿಸಿದ್ದಾರೆ.

ನಯನತಾರಾ ನಟಿಯಾಗಿ ಮಾತ್ರವಲ್ಲ ಚಿತ್ರ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. 2021ರಲ್ಲಿ ಅವರು ಪತಿ ವಿಘ್ನೇಶ್‌ ಶಿವನ್‌ ಜತೆ ಸೇರಿಕೊಂಡು ರೌಡಿ ಪಿಕ್ಚರ್ಸ್‌ ಎನ್ನುವ ಪ್ರೊಡಕ್ಷನ್‌ ಹೌಸ್‌ ಆರಂಭಿಸಿದ್ದಾರೆ. ಈಗಾಗಲೇ ಈ ಪ್ರೊಕ್ಷನ್‌ ಹೌಸ್‌ನಲ್ಲಿ ಚಿತ್ರಗಳನ್ನೂ ನಿರ್ಮಿಸಲಾಗಿದೆ. ಹೀಗಾಗಿ ಅವರು ಡೈರಕ್ಷನ್‌ ಕ್ಯಾಪ್ ತೊಡುವುದು ಪಕ್ಕಾ ಎನ್ನುತ್ತಿದ್ದಾರೆ ಅಭಿಮಾನಿಗಳು. ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಹೊರ ಬಂದಿಲ್ಲ.

ಇದನ್ನೂ ಓದಿ: Actress Nayanthara: ‘ಅನ್ನಪೂರ್ಣಿ’ಯಾಗಿ ನಯನತಾರಾ; ಟೀಸರ್‌ನಲ್ಲಿದೆ ಟ್ವಿಸ್ಟ್‌, ಮನಸೋತ ಪ್ರೇಕ್ಷಕರು!

ಸದ್ಯ ನಯನತಾರಾ ವಿವಿಧ ಚಿತ್ರಗಳಲ್ಲಿ ನಿರತರಾಗಿದ್ದಾರೆ. ಜೈ ಜತೆ ನಟಿಸಿದ ʼಅನ್ನಪೂರ್ಣಿʼ ತಮಿಳು ಚಿತ್ರ ಬಿಡುಗಡೆಗೆ ಸಜ್ಜಾಗಿದೆ. 2013ರ ಅಟ್ಲೀ ನಿರ್ದೇಶನದ ʼರಾಜಾ ರಾಣಿʼ ಸಿನಿಮಾ ಬಳಿಕ ಇವರಿಬ್ಬರು ಮತ್ತೆ ಒಂದಾಗುತ್ತಿದ್ದಾರೆ. ನೀಲೇಶ್‌ ಕೃಷ್ಣ ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರದ ಟೀಸರ್‌ ಈಗಾಗಲೇ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಡಿಸೆಂಬರ್‌ 1ರಂದು (ನಾಳೆ) ‘ಅನ್ನಪೂರ್ಣಿ’ ತೆರೆ ಕಾಣಲಿದ್ದು, ನಯನತಾರಾ ಈ ಚಿತ್ರದಲ್ಲಿ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ. ಜತೆಗೆ ತಮಿಳಿನ ‘ಟೆಸ್ಟ್‌’, ‘ಮಣ್ಣಾಂಗಟ್ಟಿ ಸಿನ್ಸ್‌ 1960’ ಚಿತ್ರದಲ್ಲೂ ನಟಿಸುತ್ತಾರೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version