ಮುಂಬೈ: ಬಾಲಿವುಡ್ ಹಿರಿಯ ನಟಿ ಪೂಜಾ ಭಟ್ (Actress Pooja Bhatt) ಅವರ ಜನ್ಮದಿನವಿಂದು. ನಟಿಯಾಗಿ, ನಿರ್ದೇಶಕಿಯಾಗಿ, ವಾಯ್ಸ್ ಓವರ್ ಆರ್ಟಿಸ್ಟ್ ಆಗಿ. ಮಾಡೆಲ್ ಹಾಗೂ ನಿರ್ಮಾಪಕಿಯಾಗಿ ಮಿಂಚಿರುವ ಪೂಜಾ ಅವರು ಇಂದಿಗೆ 51 ವಸಂತಗಳನ್ನು ಪೂರೈಸುತ್ತಿದ್ದಾರೆ. ತಮ್ಮ 17ನೇ ವಯಸ್ಸಿನಲ್ಲೇ ಸಿನಿ ರಂಗಕ್ಕೆ ಕಾಲಿಟ್ಟ ನಟಿ ಹಿಂದಿ ಸಿನಿ ರಂಗದ ಪ್ರಸಿದ್ಧ ನಿರ್ದೇಶಕ ಮಹೇಶ್ ಭಟ್ ಅವರ ಪುತ್ರಿ ಕೂಡ ಹೌದು. ಹಲವಾರು ಸಿನಿಮಾಗಳ ಮೂಲ ಜನರಿಗೆ ಹತ್ತಿರವಾಗಿರುವ ಪೂಜಾ ಅವರ ನೋಡಲೇಬೇಕಾದ ಕೆಲ ಸಿನಿಮಾಗಳ ವಿವರ ಇಲ್ಲಿದೆ.
ಸಡಕ್ (1991)
ಈ ಸಿನಿಮಾದಲ್ಲಿ ಪೂಜಾ ಅವರು ನಟ ಸಂಜಯ್ ದತ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಕೂಡ ಪೂಜಾ ತಂದೆ ಮಹೇಶ್ ಭಟ್ ಅವರೇ ನಿರ್ದೇಶಿಸಿರುವುದು. ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯೊಬ್ಬಳ ಜತೆ ಯುವಕ ಪ್ರೀತಿಯಲ್ಲಿ ಬೀಳುವ ಕಥೆ ಇದರಲ್ಲಿದೆ. ಈ ಸಿನಿಮಾ 1991ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಸಿನಿಮಾಗಳಲ್ಲಿ ಒಂದಾಗಿದೆ.
ದಿಲ್ ಹೈ ಕಿ ಮಾನ್ತಾ ನಹೀಂ(1991)
ಈ ಸಿನಿಮಾದಲ್ಲಿ ಆಮಿರ್ ಖಾನ್ ಹಾಗೂ ಪೂಜಾ ಭಟ್ ನಟಿಸಿದ್ದಾರೆ. ಮಹೇಶ್ ಭಟ್ ಅವರ ನಿರ್ದೇಶನವಿರುವ ಈ ಸಿನಿಮಾದಲ್ಲಿ ನವಿರಾದ ಪ್ರೇಮ ಕಥೆಯನ್ನು ಕಾಣಬಹುದು. ಈ ಸಿನಿಮಾ ಕೂಡ ಹಿಟ್ ಲಿಸ್ಟ್ ಸೇರಿರುವ ಸಿನಿಮಾಗಳಲ್ಲಿ ಒಂದಾಗಿದೆ.
ಜುನೂನ್ (1992)
ಮಹೇಶ್ ಭಟ್ ನಿರ್ದೇಶನದ ಹಾರರ್ ಥ್ರಿಲ್ಲರ್ ಸಿನಿಮಾ ಜುನೂನ್. ಈ ಸಿನಿಮಾದಲ್ಲಿ ಪೂಜಾ ಭಟ್ ಜತೆಯಲ್ಲಿ ರಾಹುಲ್ ರಾಯ್ ಕಾಣಿಸಿಕೊಂಡಿದ್ದಾರೆ. ಶಾಪಗ್ರಸ್ಥ ಹುಲಿಯೊಂದು ನಾಯಕ ನಟನ ಸ್ನೇಹಿತರೆಲ್ಲರನ್ನೂ ಕೊಲ್ಲುವುದು ಕೊನೆಗೆ ಆತನನ್ನೂ ಗುರಿ ಮಾಡುವ ರೋಚಕ ಕಥೆ ಇದರಲ್ಲಿದೆ.
ಬಾರ್ಡರ್ (1997)
ಬಾರ್ಡರ್ ಸಿನಿಮಾ ಸಂಪೂರ್ಣವಾಗಿ ಆ್ಯಕ್ಷನ್ ಡ್ರಾಮಾ ಸಿನಿಮಾವಾಗಿದೆ. ಜೆ.ಪಿ.ದತ್ತಾ ಅವರ ನಿರ್ದೇಶನವಿರುವ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದ್ದು, ನಿರ್ಮಾಪಕರಿಗೆ ಲಾಭ ತಂದುಕೊಟ್ಟಿತ್ತು. ಇದರಲ್ಲಿ ಪೂಜಾ ಭಟ್ ಅವರು ಯೋಧನ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಜಕ್ಮ್ (1998)
ಅಮ್ಮ ಮಗನ ಬಾಂಧವ್ಯವನ್ನು ಹೇಳುವ ಕಥೆ ಇದಾಗಿದೆ. ಈ ಸಿನಿಮಾದಲ್ಲಿ ಅಜಯ್ ದೇವಗನ್ ಮತ್ತು ಪೂಜಾ ಭಟ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಪೂಜಾ ಭಟ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎನ್ನಬಹುದು.