ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಮ್ಯಾ (Actress Ramya) ನಿರ್ಮಾಣದ ಚೊಚ್ಚಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಬಿಡುಗಡೆಗೆ ದಿನಾಂಕ ನಿಗದಿಪಡಿಸಲಾಗಿದೆ. ಆ್ಯಪಲ್ ಬಾಕ್ಸ್ ಸ್ಟುಡಿಯೋನಡಿ ರಮ್ಯಾ ನಿರ್ಮಿಸಿರುವ ಈ ಚಿತ್ರ ನವೆಂಬರ್ 24ರಂದು ತೆರೆಗೆ ಬರಲಿದೆ. ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ ಮೂರನೇ ಚಿತ್ರ ಇದಾಗಿದೆ. ಇದರಲ್ಲಿ ರಾಜ್ ಬಿ. ಶೆಟ್ಟಿ ಮತ್ತು ಸಿರಿ ರವಿಕುಮಾರ್ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ʼಒಂದು ಮೊಟ್ಟೆಯ ಕಥೆʼ, ʻಗರುಡ ಗಮನ ವೃಷಭ ವಾಹನʼ ಚಿತ್ರಗಳ ನಂತರ ರಾಜ್ ಬಿ. ಶೆಟ್ಟಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಆರಂಭದಲ್ಲಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರು ನಟನೆಯಿಂದ ಹಿಂದೆ ಸರಿದು ಕೇವಲ ನಿರ್ಮಾಪಕಿಯಾಗಿ ಮುಂದುವರಿದಿದ್ದರು. ಅವರ ಜಾಗಕ್ಕೆ ಸಿರಿ ರವಿಕುಮಾರ್ ಎಂಟ್ರಿಯಾಗಿತ್ತು.
ವಿವಾದ ಹುಟ್ಟು ಹಾಕಿತ್ತು
ʼಸ್ವಾತಿ ಮುತ್ತಿನ ಮಳೆ ಹನಿಯೇʼ ಚಿತ್ರ ತನ್ನ ಶೀರ್ಷಿಕೆ ಕಾರಣದಿಂದ ವಿವಾದ ಹುಟ್ಟು ಹಾಕಿತ್ತು. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಈ ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ನಿರ್ದೇಶಕ ರಾಜೇಂದ್ರ ಸಿಂಗ್ ʼಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾದ ಟೈಟಲ್ ತಮ್ಮದೆಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ʼಬಣ್ಣದ ಗೆಜ್ಜೆ’ ಚಿತ್ರ 1990ರಲ್ಲಿ ತೆರೆಕಂಡಿತ್ತು. ಈ ಸಿನಿಮಾದ `ಸ್ವಾತಿ ಮುತ್ತಿನ ಮಳೆ ಹನಿಯೇ’ ಹಾಡು ಹಿಟ್ ಆಗಿತ್ತು. ರಮ್ಯಾ ʻಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನಿರ್ಮಾಣ ಮಾಡುವ ಮುನ್ನವೇ ಈ ಟೈಟಲ್ ಅನ್ನು ತಾವು ರಿಜಿಸ್ಟರ್ ಮಾಡಿರುವುದಾಗಿ ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದರು. ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಹಾಸಿನಿ ನಟಿಸಿದ್ದ ಆ ಸಿನಿಮಾ ಈಗಾಗಲೇ 80%ರಷ್ಟು ಚಿತ್ರೀಕರಣವಾಗಿದೆ. ಅಂಬರೀಶ್ ನಿಧನದ ಬಳಿಕ ಕೆಲವು ದೃಶ್ಯಗಳು ಬಾಕಿ ಉಳಿದಿತ್ತು ಎಂಬುದು ಅವರ ವಾದ. ಈಗ ಈ ಶೀರ್ಷಿಕೆಯನ್ನು ಅಭಿಷೇಕ್ ಅಂಬರೀಶ್ ಸಿನಿಮಾಗೆ ಬಳಸಬೇಕು ಎಂದು ಆಲೋಚಿಸಿದ್ದರಂತೆ. ಇನ್ನು ರಮ್ಯಾ ಕೂಡ ಇದೇ ಟೈಟಲ್‌ನಲ್ಲಿ ಚಿತ್ರ ನಿರ್ಮಾಣ ಮಾಡಿರುವುದರಿಂದ ಸಮಸ್ಯೆ ಎದುರಾಗಿತ್ತು. ಕೊನೆಗೆ ರಮ್ಯಾ ಪರವಾಗಿ ತೀರ್ಪು ಪ್ರಕಟವಾಗಿದೆ.
ಇದನ್ನೂ ಓದಿ: Armaan Malik: ‘ಸರಿಯಾಗಿ ನೆನಪಿದೆ ನನಗೆ…’ ಹಾಡಿನ ಗಾಯಕ ಅರ್ಮಾನ್ ಬದುಕಿಗೆ ಎಂಟ್ರಿ ಕೊಟ್ಟ ಆಶ್ನಾ ಶ್ರಾಫ್!
ಬಾಲಾಜಿ ಮನೋಹರ್, ಸೂರ್ಯ ವಶಿಷ್ಟ, ರೇಖಾ ಕುಡ್ಲಿಗಿ, ಸ್ನೇಹಾ ಶರ್ಮಾ, ಜೆ.ಪಿ.ತುಮ್ಮಿನಾಡು, ಗೋಪಾಲಕೃಷ್ಣ ದೇಶ್‌ಪಾಂಡೆ ʻಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ರಮ್ಯಾ ʼಉತ್ತರಕಾಂಡʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಕಿರಗಂದೂರು ಹೊಂಬಾಳೆಯ ಅಂಗಸಂಸ್ಥೆಯಾಗಿರುವ ಕೆ.ಆರ್.ಜಿ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಡಾಲಿ ಧನಂಜಯ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ.