ಬೆಂಗಳೂರು: ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ (Actress Ramya) ವರ್ಷಗಳ ನಂತರ ಬಣ್ಣ ಹಚ್ಚುತ್ತಿದ್ದಾರೆ. ಇದರ ಮಧ್ಯೆ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅವರ ಮದುವೆ ವಿಚಾರವು ಭಾರಿ ಗಮನ ಸೆಳೆದಿದೆ. ಅಲ್ಲಿ ವಿದ್ಯಾರ್ಥಿಯೊಬ್ಬ, ರಮ್ಯಾ ಬಳಿ ನೇರವಾಗಿ ಮದುವೆ ವಿಷಯವನ್ನು ಪ್ರಸ್ತಾಪ ಮಾಡಿದ್ದಾನೆ. “ನಿಮ್ಮ ಮದುವೆ ಯಾವಾಗ?” ಎಂದು ವಿದ್ಯಾರ್ಥಿ ಕೇಳಿದ್ದಕ್ಕೆ ರಮ್ಯಾ, “ನನಗೆ ಅದೇ ಅರ್ಥವಾಗುತ್ತಿಲ್ಲ, ಮದುವೆಯನ್ನು ಏತಕ್ಕೆ ಆಗಬೇಕು..?” ಎಂದು ಮರು ಪ್ರಶ್ನೆ ಹಾಕಿದ್ದಾರೆ. ಈ ರೀತಿ ಸಂಭಾಷಣೆಯು ಮುಂದುವರಿದಿದ್ದು, ಎಲ್ಲರೂ ಮುಂದೇನು ಹೇಳುತ್ತಾರೆಂದು ಕಾತರವಾಗಿ ಕಾಯುತ್ತಾ ಕುಳಿತಿದ್ದರು. ಈ ವಿಡಿಯೊ ಈಗ ಸಖತ್ ವೈರಲ್ ಆಗಿದೆ.
ರಮ್ಯಾ ಜತೆ ನಡೆದ ಸಂಭಾಷಣೆಯಲ್ಲೇನಿದೆ?
ಕಾರ್ಯಕ್ರಮದಲ್ಲಿ ಮೈಕ್ ಎತ್ತಿಕೊಂಡ ವಿದ್ಯಾರ್ಥಿಯು, “ರಮ್ಯಾ ಮೇಡಮ್, ನಿಮ್ಮ ಮದುವೆ ಯಾವಾಗ?” ಎಂದು ಕೇಳಿದ್ದಾನೆ. ಅದಕ್ಕೆ ರಮ್ಯಾ, “ಮದುವೆ ಯಾತಕ್ಕೆ ಆಗಬೇಕು ಎಂಬುದೇ ನನಗೆ ಅರ್ಥವಾಗುತ್ತಿಲ್ಲ” ಎಂದು ಹೇಳಿದ್ದಾರೆ. ಆಗ ತಕ್ಷಣ ಆ ವಿದ್ಯಾರ್ಥಿಯು, “ಹೌದು ಮೇಡಮ್… ನೀವು ಮದುವೆಯನ್ನೇ ಆಗಬೇಡಿ..” ಎಂದು ಹೇಳಿದ್ದಾನೆ. ಅದಕ್ಕೆ ಮುಗುಳು ನಕ್ಕ ಮೋಹಕ ಸುಂದರಿ ರಮ್ಯಾ ಮದುವೆ ಬಗ್ಗೆ ತಮ್ಮ ಮನದಾಳದಲ್ಲಿರುವ ಇನ್ನಷ್ಟು ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಮುಂದುವರಿದು ಮಾತನಾಡಿದ ರಮ್ಯಾ, ʻʻಹೌದು ಮದುವೆ ಆಗಬಾರದು. ಖುಷಿಯಾಗಿ ಇರುವುದು ಅಥವಾ ಮದುವೆ ಎಂಬ ವಿಚಾರ ಬಂದಾಗ ಈ ಎರಡರಲ್ಲಿ ಒಂದನ್ನು ಚೂಸ್ ಮಾಡಬೇಕು. ಅದಕ್ಕೆ ನಾನು ಹ್ಯಾಪಿಯಾಗಿ (ಖುಷಿಯಾಗಿ) ಇರುವುದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನಾನೊಬ್ಬ ಮಹಿಳೆಯಾಗಿ ಹೇಳುವುದೇನಂದರೆ ಹಣಕಾಸು ಸ್ವಾತಂತ್ರ್ಯ (ಫೈನಾನ್ಷಿಯಲ್ ಇಂಡಿಪೆಂಡೆಂಟ್) ಮತ್ತು ಶಿಕ್ಷಣ ಬಹಳ ಮುಖ್ಯ. ನಿಮಗೆ ಒಳ್ಳೆಯ ಸೋಲ್ಮೇಟ್ ಸಿಕ್ಕಿದರೆ ಮದುವೆ ಆಗಿ ಖುಷಿಯಾಗಿರಿ. ನನಗೆ ಇನ್ನೂ ಸಿಕ್ಕಿಲ್ಲ. ಸಿಕ್ಕಿದರೆ ಖಂಡಿತ ಮದುವೆ ಆಗುತ್ತೇನೆʼʼ ಎಂದು ರಮ್ಯಾ ಮಾತನಾಡಿದ್ದಾರೆ.
ಇದೇ ರೀತಿಯಾಗಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಲವು ಪ್ರಶ್ನೆಗಳನ್ನು ರಮ್ಯಾ ಅವರ ಬಳಿ ಕೇಳಿದ್ದಾರೆ. ಅವರೂ ಖುಷಿ ಖುಷಿಯಾಗಿ ಉತ್ತರ ಕೊಟ್ಟಿದ್ದಾರೆ. ಅಲ್ಲದೆ, ಮೊದಲು ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದ ವಿದ್ಯಾರ್ಥಿಗೆ, “ನೀವು ಸಿಂಗಲ್ಲಾ ಎಂದು ಕೇಳಿದ್ದ ರಮ್ಯಾ, ಕೊನೆಯಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳ ಮಧ್ಯೆ, “ನಾನು ಸ್ವಲ್ಪ ದಪ್ಪ ಆಗಿಲ್ವಾ..?” ಎಂದು ಫನ್ನಿಯಾಗಿಯೇ ಕೇಳಿದ್ದಾರೆ.
ಇದನ್ನೂ ಓದಿ | Actress Ramya | ಕಾಲಿವುಡ್ ನಟ ಧನುಷ್ ಜತೆ ಕಾಣಿಸಿಕೊಂಡ ಮೋಹಕ ತಾರೆ ರಮ್ಯಾ!
ಸದ್ಯ ಸಿನಿಮಾದಲ್ಲಿ ರಮ್ಯಾ ಬ್ಯುಸಿಯಾಗಿದ್ದು, ಅವರ ನಿರ್ಮಾಣದ ಚೊಚ್ಚಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಶೂಟಿಂಗ್ ಮುಕ್ತಾಯಗೊಳಿಸಿದೆ. ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ರಾಜ್ ಬಿ. ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದಾರೆ. ಸಿರಿ ರವಿಕುಮಾರ್ ಮತ್ತು ರಾಜ್ ಶೆಟ್ಟಿ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಮ್ಯಾ ಉತ್ತರಕಾಂಡ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ | Actress Ramya | ಸದ್ದಿಲ್ಲದೆ ಶೂಟಿಂಗ್ ಮುಗಿಸಿದ ಸ್ವಾತಿ ಮುತ್ತಿನ ಮಳೆ ಹನಿಯೇ; ರಮ್ಯಾರಿಂದ ಮತ್ತೊಂದು ಸರ್ಪ್ರೈಸ್