ಮುಂಬೈ: ಬಾಲಿವುಡ್ ನಟಿ ರಾಣಿ ಮುಖರ್ಜಿ (Actress Rani Mukerji) ನಟನೆಯ ʼಮಿಸಸ್ ಚರ್ಟಜಿ ವರ್ಸಸ್ ನಾರ್ವೆʼ ಸಿನಿಮಾ ಶುಕ್ರವಾರ ತೆರೆ ಕಂಡಿದೆ. ತಾಯಿ ಮತ್ತು ಮಗುವಿನ ಸಂಬಂಧದ ಕುರಿತಾಗಿರುವ ಸುಂದರ ಕಥೆಯನ್ನು ಹೊತ್ತಿರುವ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆಗಳೂ ಬರುತ್ತಿವೆ. ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಪಡೆದುಕೊಂಡಿರುವ ರಾಣಿ ಮುಖರ್ಜಿ ನಿಜ ಜೀವನದಲ್ಲೂ ಸಹ ಏಳು ವರ್ಷದ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಸಿನಿಮಾ ಕ್ಷೇತ್ರ ಮತ್ತು ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಿಕೊಳ್ಳುವ ಬಗ್ಗೆ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ: Mrs Chatterjee Vs Norway: ರಾಣಿ ಮುಖರ್ಜಿ ʻನನ್ನ ರಾಣಿʼಎಂದು ಶಾರುಖ್ ಖಾನ್ ಹೇಳಿದ್ದೇಕೆ!
“ಒಬ್ಬ ತಾಯಿಯಾಗಿ ನಾನು ಸಿನಿಮಾಗಳಲ್ಲಿ ನಟಿಸುವುದು ನಿಜಕ್ಕೂ ಸವಾಲಿನ ಕೆಲಸ. ನನ್ನ ಮಗಳು ಅದೀರಾ ಈಗ ಒಂದನೇ ತರಗತಿಯಲ್ಲಿದ್ದಾಳೆ. ಇನ್ನು ಕೆಲ ತಿಂಗಳಲ್ಲಿ ಎರಡನೇ ತರಗತಿಗೆ ಹೋಗುತ್ತಾಳೆ. ಈ ಸಮಯದಲ್ಲಿ ನಾನು ಅವಳನ್ನು ಬಿಟ್ಟಿರುವುದು ಕಷ್ಟದ ಕೆಲಸ. ಅವಳಿಂದ ದೂರವಿರುವುದಕ್ಕೆ ನನ್ನನ್ನು ನಾನು ಮಾನಸಿಕವಾಗಿ ಬಲಪಡಿಸಿಕೊಳ್ಳಬೇಕು. ಅವಳು ಕೂಡ ಅದಕ್ಕೆ ತಯಾರಾಗಬೇಕು. ಇದರ ಬಗ್ಗೆ ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ನೋಡಬೇಕಿದೆ.” ಎಂದು ಹೇಳಿದ್ದಾರೆ ನಟಿ ರಾಣಿ ಮುಖರ್ಜಿ.
ಹಾಗೆಯೇ, “ನನಗೆ ಚಿತ್ರೀಕರಣದಲ್ಲಿರುವ ಹಲವು ದಿನಗಳು ಸರಿಯಾದ ಸಮಯಕ್ಕೆ ಮನೆಗೆ ವಾಪಸು ಹೋಗಲು ಆಗುವುದಿಲ್ಲ. ನೀವು ವೃತ್ತಿಪರ ವ್ಯಕ್ತಿಯಾಗಿದ್ದರೆ ಕೆಲವು ತ್ಯಾಗಗಳಿಗೆ ಸಿದ್ಧರಾಗಿರಲೇಬೇಕಾಗುತ್ತದೆ. ಅದನ್ನು ನಿಮ್ಮ ಮಗು ಕೂಡ ಅರ್ಥ ಮಾಡಿಕೊಳ್ಳಬೇಕು. ನಾನು ನನ್ನ ಪತಿ ಇಬ್ಬರೂ ಕೆಲಸದಲ್ಲಿರುವವರು. ನನ್ನ ಮಗಳು ಅದನ್ನು ಅರ್ಥ ಮಾಡಿಕೊಂಡಿದ್ದಾಳೆ” ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Mrs Chatterjee Vs Norway: ರಾಣಿ ಮುಖರ್ಜಿ ಅಭಿನಯದ ಮಿಸೆಸ್ ಚಟರ್ಜಿ Vs ನಾರ್ವೆ ಟ್ರೈಲರ್ ಔಟ್!
ಇದಕ್ಕೂ ಹಿಂದೆ ಮತ್ತೊಂದು ಸಂದರ್ಶನದಲ್ಲಿ ಭಾಗವಹಿಸಿದ್ದ ನಟಿ ತಾವು ತಾಯಿಯಾದ ಮೇಲೆ ಜೀವನ ಹೇಗೆ ಬದಲಾಯಿತು ಎನ್ನುವುದರ ಬಗ್ಗೆ ಮಾತನಾಡಿದ್ದರು. “ನಾನು ಅದೀರಾ ಹುಟ್ಟಿದ ಮೇಲೆ ಸಾಕಷ್ಟು ಬದಲಾಗಿದ್ದೇನೆ. ನನ್ನ ಪತಿ ಕೂಡ ಇದನ್ನೇ ಹೇಳುತ್ತಾರೆ. ತಾಯಿಯಾಗುವ ಮೊದಲು ನಾವು ಬರೀ ಹೆಣ್ಣಾಗಿರುತ್ತೇವೆ, ಆದರೆ ತಾಯಿಯಾದ ಮೇಲೆ ಬರೀ ತಾಯಿಯಾಗಿರುತ್ತೇವೆ. ತಾಯಿಯಾದಾಗ ಕೇವಲ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿಯೂ ಸಾಕಷ್ಟು ಬದಲಾವಣೆಗಳು ಆಗುತ್ತವೆ. ನಿಮ್ಮ ಸ್ವಂತ ಜೀವನಕ್ಕಲ್ಲದೆ ಬೇರೆ ಒಂದು ಜೀವಕ್ಕಾಗಿ ಬದುಕುವುದನ್ನು ನೀವು ಅಭ್ಯಾಸ ಮಾಡಿಕೊಂಡುಬಿಡುತ್ತೀರಿ. ಇದ್ದಕ್ಕಿದ್ದಂತೆ ಜವಾಬ್ದಾರಿಯುತ ವ್ಯಕ್ತಿಯಾಗಿಬಿಡುತ್ತೀರಿ” ಎಂದು ಹೇಳಿದ್ದರು.
ರಾಣಿ ಮುಖರ್ಜಿ ಅವರು 2021ರಲ್ಲಿ ಬಂಟಿ ಔರ್ ಬಬ್ಲಿ 2 ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇದೀಗ ಬಿಡುಗಡೆಯಾಗಿರುವ ಅವರ ʼಮಿಸಸ್ ಚಟರ್ಜಿ ವರ್ಸಸ್ ನಾರ್ವೆʼ ಚಿತ್ರವು ನಿಜ ಘಟನೆಯನ್ನು ಆಧರಿಸಿದೆ. ಇದರಲ್ಲಿ ನಾರ್ವೆ ಅಧಿಕಾರಿಗಳು ತಾಯಿಯೊಬ್ಬಳಿಗೆ ನೀನು ಅನರ್ಹ ತಾಯಿ ಎಂದು ಹೇಳಿ ಮಗುವನ್ನು ಆಕೆಯಿಂದ ದೂರ ಮಾಡುತ್ತಾರೆ. ಮಗುವನ್ನು ವಾಪಸು ಪಡೆಯುವುದಕ್ಕಾಗಿ ತಾಯಿ ಮಾಡುವ ಹೋರಾಟದ ಕಥೆ ಇದಾಗಿದೆ.