ಬೆಂಗಳೂರು: ʻಹಾಲುಂಡ ತವರುʼ ನಟಿ ಸಿತಾರಾ (Actress Sithara) ಬಹುಭಾಷಾ ಸಿನಿಮಾಗಳಲ್ಲಿ ಗುರುತಿಸಿಕೊಂಡವರು. ಮಾಲಿವುಡ್ ನಟಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಮದುವೆಯೂ ಆಗದ ನಟಿ ದೇವರ ಧ್ಯಾನದಲ್ಲಿ ತಲ್ಲೀನರಾಗಿದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ಸಿತಾರಾ ಸಾರ್ವಜನಿಕವಾಗಿ ಕಾಣಿಸುವುದೇ ಅಪರೂಪ. ಆಗಾಗ ಕಿರುತೆರೆಯಲ್ಲೂ ಬಂದು ಹೋಗುತ್ತಿದ್ದರು. ಈಗ ಅಲ್ಲೂ ಕಾಣುತ್ತಿಲ್ಲ. ಹೀಗಿರುವಾಗಲೇ ಇದೇ ನಟಿ ಶಬರಿಮಲೆಯಲ್ಲಿ ಕುಟುಂಬದ ಜತೆಗೆ ಪ್ರತ್ಯಕ್ಷರಾಗಿದ್ದಾರೆ. ಶಬರಿಮಲೆಯಲ್ಲಿ ಸಿತಾರಾ ಕರ್ಕಾಟಕ ಮಾಸದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದಾರೆ.
ಮೂಲತಃ ಕೇರಳದವರು ಸೀತಾರಾ. ಮೊದಲಿಂದಲೂ ಅಯ್ಯಪ್ಪ ಸ್ವಾಮಿ ಭಕ್ತಿಯಾಗಿರುವ ಸಿತಾರಾ, ಇದೀಗ ಕಪ್ಪು ಬಣ್ಣದ ಸೀರೆ ಧರಿಸಿ, ತಲೆಮೆಲೆ ಇರುಮುಡಿ ಹೊತ್ತು ಪಂದಳಕಂದನ ದರ್ಶನ ಪಡೆದಿದ್ದಾರೆ. ಕುಟುಂಬದ ಜತೆಗೆ ತೆರಳಿ ಹರಕೆ ತೀರಿಸಿದ್ದಾರೆ ಸಿತಾರಾ. ಹೀಗೆ ಅಯ್ಯಪ್ಪನ ಸನ್ನಿಧಾನದಲ್ಲಿನ ಅವರ ಕೆಲವು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಶಬರಿಮಲೆಯಲ್ಲಿ ಪ್ರತಿ ವರ್ಷ ಕರ್ಕಾಟಕ ಮಾಸವನ್ನು ಆಚರಿಸಲಾಗುತ್ತದೆ. ಈ ಮಾಸದಂದು ಅಯ್ಯಪ್ಪ ದೇವಸ್ಥಾನದ ಬಾಗಿಲು ತೆರೆದು ಅಭಿಷೇಕ, ದೀಪಾರಾಧನೆ ಸೇರಿ ಹತ್ತು ಹಲವು ಪೂಜೆಗಳನ್ನು ಮಾಡಲಾಗುತ್ತದೆ. ಇದೇ ವೇಳೆ ನಟಿ ಸಿತಾರಾ ಕೂಡ ಕರ್ಕಾಟಕ ಮಾಸದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದಾರೆ.
ವಯಸ್ಸು 50 ಆದರೂ ನಟಿ ಇನ್ನೂ ಮದುವೆಯಾಗಿಲ್ಲ. ಅಪ್ಪ- ಅಮ್ಮನಿಂದ ದೂರವಾಗುವುದಕ್ಕೆ ಇಷ್ಟವಿಲ್ಲದ ಕಾರಣ, ಮದುವೆಯನ್ನೇ ತ್ಯಜಿಸಿದ್ದಾರೆ. ಅವರನ್ನು ಬಿಟ್ಟು ದೂರ ಇರಲು ಆಗದ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ವಿಚಾರವನ್ನು ಈ ಹಿಂದೆ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Actor Mammootty: ಮಾಲಿವುಡ್ ನಟ ಮಮ್ಮುಟ್ಟಿ ತಾಯಿ ಫಾತಿಮಾ ಇಸ್ಮಾಯಿಲ್ ನಿಧನ
2018ರಲ್ಲಿ ನಟ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿದ್ದ ʻಅಮ್ಮ ಐ ಲವ್ ಯೂʼ ಸಿನಿಮಾದಲ್ಲಿ ಕಥಾನಾಯಕನ ತಾಯಿಯಾಗಿ ಸಿತಾರಾ ನಟಿಸಿದ್ದರು.1994ರಲ್ಲಿ ಹಾಲುಂಡ ತವರು ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಬಂದ ಸಿತಾರಾ, ಆ ಸಿನಿಮಾ ಬಳಿಕ ಹಿಂತಿರುಗಿ ನೋಡಲಿಲ್ಲ. ಕರುಳಿನ ಕುಡಿ, ಕಾವ್ಯಾ, ಬಂಗಾರದ ಕಳಶ, ಬೇಟೆಗಾರ, ಶಿವ ಲೀಲಾ, ದೀರ್ಘ ಸುಮಂಗಲಿ, ಗಣೇಶನ ಗಲಾಟೆ, ಶ್ರಾವಣ ಸಂಜೆ ಹೀಗೆ ಹತ್ತಾರು ಸಿನಿಮಾಗಳಲ್ಲಿ ನಟಿಸಿದರು. ಬ್ರಹಸ್ಪತಿ, ಬಕಾಸುರ, ಅಮ್ಮ ಐ ಲವ್ ಯೂ ಕನ್ನಡದಲ್ಲಿ ಇತ್ತೀಚಿನ ಇವರ ಸಿನಿಮಾಗಳು.